ಕಡಬ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಹಾಗೂ ಪಶ್ಚಿಮ ಘಟ್ಟ, ಜನವಸತಿ ಪ್ರದೇಶ ಮತ್ತು ಕೃಷಿ ಭೂಮಿಯ ಗಡಿಗುರುತು ಮಾಡಬೇಕು. ಈ ಸಂಬಂಧ ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೆ ಮಾಡುವಂತೆ ಆಗ್ರಹಿಸಿ ಜ.15ರಂದು ಸುಬ್ರಹ್ಮಣ್ಯದಲ್ಲಿ ಮಲೆನಾಡು ಜನಹಿತ ರಕ್ಷಾಣಾ ವೇದಿಕೆಯ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಹೇಳಿದರು.
ಅವರು ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜ.8ರಂದು ಪಂಜ ಅರಣ್ಯ ಕಛೇರಿ ಎದುರು ಪ್ರತಿಭಟನೆ ನಡೆಯಲಿದೆ. ಆ ಬಳಿಕ ಜ.15ರಂದು ಸಬ್ರಹ್ಮಣ್ಯದಲ್ಲಿ ಪ್ರತಿಭಟನೆ ನಡೆಯಲಿದೆ. ನಮಗೆ ಈ ತನಕ ಭರವಸೆ ಮಾತ್ರ ದೊರೆತಿದೆ. ವರದಿ ಕೈಬಿಡುವ ಲಿಖಿತ ಆದೇಶ ಕೈಸೇರುವ ತನಕ ಹೋರಾಟ ನಡೆಯುತ್ತಲೇ ಇರುತ್ತದೆ ಎಂದರು.
ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿ ಬಗ್ಗೆ ದಿಟ್ಟ ನಿರ್ಧಾರ ಪ್ರಕಟಿಸಬೇಕು. ಜಂಟಿ ಸರ್ವೆ ಶೀಘ್ರ ಮುಗಿಸಿ ಕೇಂದ್ರಕ್ಕೆ ವರದಿ ಸಲ್ಲಿಸಬೇಕು ಎಂದು ಕಿಶೋರ್ ಒತ್ತಾಯಿಸಿದರು. ಆನೆ ದಾಳಿ, ಇತರೇ ಕಾಡು ಪ್ರಾಣಿಗಳಿಂದ ಕೃಷಿ ನಾಶವಾಗದಂತೆ ಅರಣ್ಯ ಇಲಾಖೆ ನಿಗಾ ವಹಿಸಬೇಕು. ಪ್ಲಾಟಿಂಗ್ ಆಗದ ಹಕ್ಕುಪತ್ರಗಳಿಗೆ ಅಥವಾ ಸರ್ವೆ ನಂಬ್ರಗಳಿಗೆ ತಕ್ಷಣ ಪ್ಲಾಟಿಂಗ್ ಆಗುವ ರೀತಿಯಲ್ಲಿ ಅನುಮತಿ ನೀಡಬೇಕು. ರೈತರ ಸ್ವಾಧೀನ ಇರುವ ಕೃಷಿ ಭೂಮಿಗೆ ಹಕ್ಕುಪತ್ರ ನೀಡಲು ಅನುಮತಿ ನೀಡಬೇಕು, ಪರಿಭಾವಿತ ಅರಣ್ಯದಡಿಯಲ್ಲಿ ಸೇರಿಸಿರುವ ಕಂದಾಯ ಸರ್ವೆ ನಂಬ್ರಗಳನ್ನು ಪುನರ್ ಪರಿಶೀಲನೆ ಮಾಡಿ ಅದನ್ನು ಕಂದಾಯ ಭೂಮಿ ಎಂದು ಪರಿಗಣಿಸಬೇಕು. ರೈತರಿಗೆ ಕೋವಿ ಪರವಾನಿಗೆ ನೀಡಬೇಕು. ಪಶ್ಚಿಮ ಘಟ್ಟಕ್ಕೆ ಸಂಬಂಧಪಟ್ಟಂತೆ ಪರಿಸರ ಸಂರಕ್ಷಣೆಯ ತಜ್ಞರ ವರದಿ ತಯಾರಿಸುವಾಗ ಪಶ್ಚಿಮ ಘಟ್ಟ ಪ್ರದೇಶದ ಗ್ರಾಮ ಪಂಚಾಯಿತಿಗಳಲ್ಲಿ ವಿಶೇಷ ಗ್ರಾಮ ಸಭೆ ಕರೆದು ಗ್ರಾಮಸ್ಥರ ಅಭಿಪ್ರಾಯವನ್ನು ಸಂಗ್ರಹಿಸಬೇಕು. ಮುಂತಾದ ಬೇಡಿಕೆಗಳನ್ನಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಕಿಶೋರ್ ಹೇಳಿದರು.
ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್ ಮೀರಾ ಸಾಹೇಬ್ ಮಾತನಾಡಿ, ರಾಜ್ಯ ಸರಕಾರ ಕಸ್ತೂರಿ ರಂಗನ್ ವರದಿಯನ್ನು ಕೈಬಿಟ್ಟಿದೆ ಎಂದು ಹೇಳುತ್ತಲೇ ಬರುತ್ತಿವೆ. ಆದರೆ ರೈತರ ಆತಂಕವನ್ನು ದೂರ ಮಾಡುವ ಸ್ಪಷ್ಟ ನಿರ್ಧಾರ ಇನ್ನೂ ಪ್ರಕಟಿಸಿಲ್ಲ. ಬದಲಿಗೆ ರೈತರಿಗೆ ನೋಟೀಸ್ ನೀಡುವ ಕಾರ್ಯ ಮುಂದುವರಿಯುತ್ತಲೇ ಇದೆ. ನಮ್ಮ ಪ್ರತಿಭಟನೆ ತಾಲೂಕು ಮಟ್ಟಕ್ಕೆ ನಿಲ್ಲುವುದಿಲ್ಲ. ಸುಬ್ರಹ್ಮಣ್ಯದಲ್ಲಿ ಪ್ರತಿಭಟನೆ ಬಳಿಕ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ಹರಿಪ್ರಸಾದ್ ಎನ್ಕಾಜೆ ಉಪಸ್ಥಿತರಿದ್ದರು.