ವಿದ್ಯುತ್ ಬಿಲ್ ಪಾವತಿಯ ಎಟಿಪಿ ಸೇವೆ ದಿಢೀರ್ ಸ್ಥಗಿತ :ಗ್ರಾಹಕರ ಪರದಾಟ-ವ್ಯವಸ್ಥೆ ಮರು ಅನುಷ್ಠಾನಕ್ಕೆ ಆಗ್ರಹ

0

ಪುತ್ತೂರು:ವಿದ್ಯುತ್ ಬಿಲ್ ಪಾವತಿಸಲು ಗ್ರಾಹಕರ ಅನುಕೂಲತೆಗಾಗಿ ಮೆಸ್ಕಾಂ ವ್ಯಾಪ್ತಿಯ ಉಪ ವಿಭಾಗಗಳಲ್ಲಿ ಅಳವಡಿಸಲಾಗಿದ್ದ ಎಟಿಪಿ(ಎನಿ ಟೈಮ್ ಪೇಮೆಂಟ್)ವ್ಯವಸ್ಥೆಯನ್ನು ಜ.1ರಿಂದ ಸ್ಥಗಿತಗೊಳಿಸಲಾಗಿದ್ದು ಪುತ್ತೂರಿನಲ್ಲಿಯೂ ಎಟಿಸಿ ಸೇವೆ ಸ್ಥಗಿತಗೊಂಡಿದೆ.ಯಾವುದೇ ಮಾಹಿತಿ ಇಲ್ಲದೆ ದಿಢೀರ್ ಈ ಸೇವೆ ಬಂದ್ ಆಗಿರುವುದರಿಂದ ವಿದ್ಯುತ್ ಬಳಕೆದಾರರು ತೊಂದರೆ ಅನುಭವಿಸುವಂತಾಗಿದೆ.


ಎಟಿಪಿ ಸೇವೆ ಕಾರ್ಯನಿರ್ವಹಣೆ:
ಮೆಸ್ಕಾಂ ಉಪ ವಿಭಾಗಗಳಲ್ಲಿ ದಿನದ 24 ಗಂಟೆಯೂ ವಿದ್ಯುತ್ ಬಿಲ್ ಪಾವತಿಗಾಗಿ ಎಟಿಪಿ ಮೆಷಿನ್‌ಗಳ ಸೇವೆಯನ್ನು 2010ರಲ್ಲಿ ಆರಂಭಿಸಲಾಗಿತ್ತು. ಗ್ರಾಹಕರು ವಿದ್ಯುತ್ ಬಿಲ್ ಪಾವತಿಗಾಗಿ ಸರತಿ ಸಾಲಲ್ಲಿ ನಿಂತು ಕಾಯುವುದನ್ನು ತಪ್ಪಿಸಿ ಪಾವತಿಗೆ ಸುಲಭ ವ್ಯವಸ್ಥೆ ಮಾಡುವುದು ಇದರ ಉದ್ಧೇಶವಾಗಿತ್ತು.ಮೆಸ್ಕಾಂ ವ್ಯಾಪ್ತಿಯ ಶಿವಮೊಗ್ಗ, ಚಿಕ್ಕಮಗಳೂರು, ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಸುಮಾರು 75 ಉಪ ವಿಭಾಗಗಳಲ್ಲಿ ಎಟಿಪಿ ವ್ಯವಸ್ಥೆ ಅಳವಡಿಸಲಾಗಿತ್ತು.ಸುಮಾರು 15 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಎಟಿಪಿ ವ್ಯವಸ್ಥೆಯನ್ನು ನಗರ ಪ್ರದೇಶದವರು ಸುಲಭದಲ್ಲಿ ಬಳಸುತ್ತಿದ್ದರು.ಗ್ರಾಮೀಣ ಭಾಗದ ಜನರಿಗೂ ಇದು ಅನುಕೂಲಕರವಾಗಿತ್ತು.ಹೆಚ್ಚಿನ ಎಟಿಪಿಗಳಲ್ಲಿ ಸಿಬ್ಬಂದಿ ನೇಮಿಸಿ ಬೆಳಗ್ಗೆ 9ರಿಂದ ಸಂಜೆ 5 ಗಂಟೆ ತನಕ ಬಿಲ್ ಸ್ವೀಕೃತಿ ವ್ಯವಸ್ಥೆ ಮಾಡಲಾಗುತ್ತಿತ್ತು.ಎಟಿಪಿ ವ್ಯವಸ್ಥೆಯನ್ನು ಟೆಂಡರ್ ಆಧಾರದಲ್ಲಿ ಗುತ್ತಿಗೆದಾರ ಕಂಪನಿಗಳಿಗೆ ನೀಡಲಾಗುತ್ತಿದ್ದು, ಇಲ್ಲಿ ಪಾವತಿಸುವ ಪ್ರತೀ ಬಿಲ್‌ಗೆ ಸರಾಸರಿ 6ರೂ.ಗಳನ್ನು ಮೆಸ್ಕಾಂ ಗುತ್ತಿಗೆ ವಹಿಸಿಕೊಂಡ ಕಂಪೆನಿಗೆ ನೀಡಬೇಕಿತ್ತು.


ಎಟಿಪಿ ಸೇವೆ ನಿಲ್ಲಲು ಕಾರಣ:
ಕೆಲವು ವರ್ಷಗಳಿಂದ ಗುತ್ತಿಗೆ ವಹಿಸಿಕೊಂಡ ಕಂಪೆನಿಯ ಗುತ್ತಿಗೆ ಅವಧಿ ಡಿ.31ಕ್ಕೆ ಮುಗಿದ ಕಾರಣ ಎಟಿಪಿ ವ್ಯವಸ್ಥೆ ಬಂದ್ ಆಗಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.ಐಡಿಯಾ ಇನ್-ಟೆಕ್ ಎಂಬ ಕಂಪೆನಿ ಕಳೆದ ಕೆಲವು ವರ್ಷಗಳಿಂದ ಗುತ್ತಿಗೆ ಮೂಲಕ ಎಟಿಪಿ ವ್ಯವಸ್ಥೆ ನಡೆಸುತ್ತಿತ್ತು. ಇದೀಗ ಕಂಪೆನಿಯ ಗುತ್ತಿಗೆ ಅವಧಿ ಡಿ.31ಕ್ಕೆ ಮುಕ್ತಾಯಗೊಂಡಿದೆ.ಪ್ರಸ್ತುತ ರಾಜ್ಯ ಸರಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಜ್ಯೋತಿ ಯೋಜನೆ ಮೂಲಕ ಸರಕಾರ ಸರಾಸರಿ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿರುವುದರಿಂದ ಮೆಸ್ಕಾಂಗೆ ಹೆಚ್ಚಿನ ಬಿಲ್‌ಗಳು ಪಾವತಿಯಾಗುವ ಅವಕಾಶ ಕಡಿಮೆಯಾಗಿತ್ತು.
ಬಿಲ್ ಪಾವತಿಗೆ ಆಧುನಿಕ ತಂತ್ರಜ್ಞಾನ ಇದ್ದರೂ ಏಕಾಏಕಿ ಯಾವುದೇ ಮಾಹಿತಿ ನೀಡದೆ ಎಟಿಪಿ ಸೇವೆ ಬಂದ್ ಮಾಡಿರುವುದು ಬಿಲ್ ಪಾವತಿದಾರರಿಗೆ ಕಷ್ಟವಾಗಿದೆ.ಈ ಭಾಗದ ಗ್ರಾಹಕರಿಗಾಗಿ ಬಿಲ್ ಪಾವತಿಗೆ ಬನ್ನೂರುನಲ್ಲಿರುವ ಮೆಸ್ಕಾಂ ನಗರ ಉಪವಿಭಾಗದಲ್ಲಿ ವ್ಯವಸ್ಥೆ ಮಾಡಲಾಗಿದೆಯಾದರೂ ಬನ್ನೂರಿಗೆ ಹೋಗಿ ಬರುವುದು ಗ್ರಾಹಕರಿಗೆ ಹೆಚ್ಚಿನ ಹೊರೆಯಾಗಿ ಪರಿಣಮಿಸಿದೆ.ಮೊದಲಿದ್ದ ವ್ಯವಸ್ಥೆಯನ್ನೇ ಮರು ಅನುಷ್ಠಾನಗೊಳಿಸಬೇಕು ಎಂಬ ಆಗ್ರಹ ಬಳಕೆದಾರರಿಂದ ವ್ಯಕ್ತವಾಗಿದೆ.

ಶೀಘ್ರದಲ್ಲಿಯೇ ಬದಲಿ ವ್ಯವಸ್ಥೆ
ಕಳೆದ ಕೆಲ ವರ್ಷಗಳಿಂದ ಐಡಿಯಾ ಇನೋಟೆಕ್‌ನವರಿಗೆ ಎಟಿಪಿ ಮೂಲಕ ಗ್ರಾಹಕರಿಂದ ವಿದ್ಯುತ್ ಶುಲ್ಕ ಸಂಗ್ರಹಣೆಗೆ ಗುತ್ತಿಗೆ ನೀಡಲಾಗಿತ್ತು.ಈಗ ಅವರ ಟೆಂಡರ್ ಅವಧಿ ಮುಕ್ತಾಯಗೊಂಡಿದೆ. ನಂತರದ ಟೆಂಡರ್‌ನಲ್ಲಿ ಅವರು ಭಾಗವಹಿಸಿಲ್ಲ. ಹೀಗಾಗಿ ಅನಿವಾರ್ಯವಾಗಿ ಶುಲ್ಕ ಸಂಗ್ರಹಣೆಯನ್ನು ಬನ್ನೂರಿನ ನಗರ ಉಪ ವಿಭಾಗದಲ್ಲಿ ಮಾತ್ರ ಮಾಡಲಾಗುತ್ತಿದೆ.ಇದಕ್ಕೆ ಶೀಘ್ರದಲ್ಲಿಯೇ ಮೆಸ್ಕಾಂನಿಂದಲೇ ಪ್ರತ್ಯೇಕ ಬದಲಿ ವ್ಯವಸ್ಥೆ ಮಾಡಲಾಗುವುದು. ಅಲ್ಲಿಯ ತನಕ ಗ್ರಾಹಕರು ನಮ್ಮೊಂದಿಗೆ ಸಹಕರಿಸಬೇಕು
-ರಾಮಚಂದ್ರ, ಪ್ರಭಾರ ಕಾರ್ಯನಿರ್ವಾಹಕ
ಇಂಜಿನಿಯರ್, ಮೆಸ್ಕಾಂ ಪುತ್ತೂರು

LEAVE A REPLY

Please enter your comment!
Please enter your name here