ನೆಲ್ಯಾಡಿ: ಹೆಜ್ಜೇನು ದಾಳಿ ನಡೆಸಿದ ಪರಿಣಾಮ ಇಬ್ಬರು ಗಂಭೀರ ಗಾಯಗೊಂಡು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜ.9ರಂದು ಬೆಳಿಗ್ಗೆ ನೆಲ್ಯಾಡಿ ಗ್ರಾಮದ ಮಾದೇರಿ ಸಮೀಪದ ತುಂಬೆತ್ತಡ್ಕ ಎಂಬಲ್ಲಿ ನಡೆದಿದೆ.
ಮಾದೇರಿ ತುಂಬೆತ್ತಡ್ಕ ನಿವಾಸಿ ರೂಪಾವತಿ(30ವ.)ಹಾಗೂ ತಿಮ್ಮಪ್ಪ ಕುಂಬಾರ(49ವ.)ಗಾಯಗೊಂಡವರಾಗಿದ್ದಾರೆ. ರೂಪಾವತಿ ಅವರ ಮೇಲೆ ಅವರ ಮನೆ ಸಮೀಪವೇ ಏಕಾಏಕಿ ಹೆಜ್ಜೇನುಗಳು ದಾಳಿ ಮಾಡಿವೆ. ಇದರಿಂದ ವಿಚಲಿತಗೊಂಡ ರೂಪಾವತಿ ಅವರು ಬೊಬ್ಬೆ ಹೊಡೆದಿದ್ದು ಇದನ್ನು ಕೇಳಿ ಪಕ್ಕದ ಮನೆಯ ತಿಮ್ಮಪ್ಪ ಕುಂಬಾರ ಅವರು ರಕ್ಷಣೆಗಾಗಿ ಗೋಣಿ ಚೀಲ ಹಿಡಿದು ಓಡಿ ಬಂದಿದ್ದು ಈ ವೇಳೆ ಹೆಜ್ಜೇನುಗಳು ಅವರ ಮೇಲೆಯೂ ದಾಳಿ ಮಾಡಿವೆ.
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು ಇವರಿಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲದೇ ಅಲ್ಲೇ ಸಮೀಪದ ಮನೆಯ ಉಪೇಂದ್ರ ಎಂಬವರ ಕೊಟ್ಟಿಗೆಯಲ್ಲಿದ್ದ ಗಬ್ಬದ ಹಸುವಿನ ಮೇಲೂ ಹೆಜ್ಜೇನು ದಾಳಿ ನಡೆಸಿದ್ದು ಹಸು ಸಹ ತೀವ್ರ ಅಸ್ವಸ್ಥಗೊಂಡಿದೆ ಎಂದು ವರದಿಯಾಗಿದೆ.