ಪುತ್ತೂರು: ರೋಟರಿ ಕ್ಲಬ್ ಪುತ್ತೂರು ಮತ್ತು ಜಿ.ಎಲ್ ಆಚಾರ್ಯ ಜನ್ಮಶತಮಾನೋತ್ಸವ ಸಮಿತಿ ಇದರ ಜಂಟಿ ಆಶ್ರಯದಲ್ಲಿ ರೋಟರಿ ಕುಟುಂಬ ಸಮ್ಮಿಲನ ಹಾಗೂ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ತಾಳಮದ್ದಳೆ “ಕರ್ಣಾವಸಾನ” ಕಾರ್ಯಕ್ರಮವು ಜ.11 ರಂದು ಬಂಟರ ಭವನದ ಎದುರಿನ ಜಿ.ಎಲ್ ಟ್ರೇಡ್ ಸೆಂಟರ್ ನಲ್ಲಿ ನಡೆಯಿತು.
ಕ್ಲಬ್ ಹಿರಿಯ ಸದಸ್ಯ ಸುರೇಶ್ ಶೆಟ್ಟಿರವರು ಜಿ.ಎಲ್ ಸಂಸ್ಮರಣೆಗೈಯುತ್ತಾ ಮಾತನಾಡಿ, ಜಿ.ಎಲ್ ಆಚಾರ್ಯರವರು ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಅನೇಕ ಸೇವೆಯಲ್ಲಿ ತೊಡಗಿಸಿಕೊಂಡವರಾಗಿದ್ದಾರೆ. ಜೊತೆಗೆ ಓರ್ವ ರೊಟೇರಿಯನ್ ಆಗಿ ಸಮಾಜ ಸೇವೆಯಲ್ಲೂ ಕೈಯಾಡಿಸಿರುತ್ತಾರೆ. ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಸೇವೆ, ರೋಟರಿಗೆ ಸಭಾಂಗಣ ಕೊಡುಗೆ, ರೋಟರಿ ಮೂಲಕ ಬಡವರಿಗೆ ಮನೆ ನಿರ್ಮಾಣ, ಬ್ಲಡ್ ಬ್ಯಾಂಕ್ ಸ್ಥಾಪನೆಗೆ ಸಹಕಾರ, ಯಕ್ಷಗಾನ ಪ್ರೇಮ ಇವೆಲ್ಲವೂ ಜಿಎಲ್ ಆಚಾರ್ಯರವರಲ್ಲಿ ಮನೆ ಮಾಡಿತ್ತು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಬ್ ಅಧ್ಯಕ್ಷ ಡಾ.ಶ್ರೀಪತಿ ರಾವ್ ಮಾತನಾಡಿ, ಜಿ.ಎಲ್ ಆಚಾರ್ಯರವರದ್ದು ದೂರದೃಷ್ಟಿಕೋನವಾಗಿದ್ದು ಸಮಾಜದ ಅಭಿವೃದ್ಧಿಗೆ ಸಾಕಷ್ಟು ದುಡಿದಿದ್ದಾರೆ. ಸಮಾಜದಲ್ಲಿನ ಅವರ ಅವಿರತ ಸೇವೆಯು ನಮಗೆ ಮಾದರಿಯಾಗಿದ್ದು, ಈ ನಿಟ್ಟಿನಲ್ಲಿ ಅವರ ಜನ್ಮಶತಮಾನೋತ್ಸವವನ್ನು ಸ್ಮರಿಸುತ್ತಿರುವುದು ಉಲ್ಲೇಖನೀಯ ಎಂದು ಹೇಳಿ ಜಿ.ಎಲ್ ಆಚಾರ್ಯರವರ ಒಡನಾಟದ ನೆನಪನ್ನು ಮೆಲುಕು ಹಾಕಿಕೊಂಡರು.
ಬಿ.ವಿ ಕಿಶನ್ ಪ್ರಾರ್ಥಿಸಿದರು, ಜಿ.ಎಲ್ ಆಚಾರ್ಯರವರ ಪುತ್ರ ಜಿ.ಬಲರಾಮ ಆಚಾರ್ಯ ಸ್ವಾಗತಿಸಿ, ಚಿದಾನಂದ ಬೈಲಾಡಿ ವಂದಿಸಿದರು. ಕಾರ್ಯದರ್ಶಿ ದಾಮೋದರ್ ಕೆ.ಎ ವರದಿ ವಾಚಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷ ಜೈರಾಜ್ ಭಂಡಾರಿ ಉಪಸ್ಥಿತರಿದ್ದರು. ಸಾರ್ಜೆಂಟ್ ಎಟ್ ಆಮ್ಸ್ ವಾಮನ ಪೈ ಸಹಕರಿಸಿದರು.
ಭಾವಚಿತ್ರಕ್ಕೆ ಪುಷ್ಪಾರ್ಚನೆ..
ಕಾರ್ಯಕ್ರಮದ ಆರಂಭದಲ್ಲಿ ಅತಿಥಿ ಗಣ್ಯರು, ಸದಸ್ಯರು ಜಿ.ಎಲ್ ಆಚಾರ್ಯರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಸಂಸ್ಮರಣೆ ಮಾಡಲಾಯಿತು.
ಸನ್ಮಾನ..
ಈ ಸಂದರ್ಭದಲ್ಲಿ ಜಿ.ಎಲ್ ಆಚಾರ್ಯರವರ ಪುತ್ರ, ಜಿ.ಎಲ್ ಆಚಾರ್ಯ ಜನ್ಮಶತಮಾನೋತ್ಸವ ಸಮಿತಿ ಅಧ್ಯಕ್ಷ ಜಿ.ಎಲ್ ಬಲರಾಮ ಆಚಾರ್ಯ ದಂಪತಿಯನ್ನು ರೋಟರಿ ಕ್ಲಬ್ ಪುತ್ತೂರು ವತಿಯಿಂದ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ರಂಜಿಸಿದ ಯಕ್ಷಗಾನ ಕರ್ಣಾವಸಾನ..
ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ನಡೆದ ಯಕ್ಷಗಾನ ತಾಳಮದ್ದಳೆ “ಕರ್ಣಾವಸಾನ” ಪ್ರೇಕ್ಷಕರನ್ನು ರಂಜಿಸಿತು. ಹಿಮ್ಮೇಳದ ಭಾಗವತರಾಗಿ ಪುತ್ತಿಗೆ ರಘುರಾಮ ಹೊಳ್ಳ, ಪ್ರಶಾಂತ್ ರೈ ಮುಂಡಾಲಗುತ್ತು, ಚೆಂಡೆ/ಮದ್ದಲೆಯಲ್ಲಿ ಪದ್ಯಾಣ ಶಂಕರನಾರಾಯಣ ಭಟ್, ಡಾ.ಶ್ರೀಪ್ರಕಾಶ್ ಬಿ, ಅರ್ಥದಾರಿಗಳಾಗಿ ಉಜಿರೆ ಅಶೋಕ್ ಭಟ್, ರಾಧಾಕೃಷ್ಣ ಕಲ್ಚಾರ್, ಜಬ್ಬಾರ್ ಸಮೋ, ಸುಬ್ಬಪ್ಪ ಕೈಕಂಬರವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು.