ಕುಂಬ್ರದಲ್ಲಿ ಅಣಬೆ ಬೇಸಾಯ ಮಾಹಿತಿ ಕಾರ್ಯಾಗಾರ

0

ಸ್ವಉದ್ಯೋಗದೊಂದಿಗೆ ಸ್ವಾವಲಂಬಿಗಳಾಗಿ: ತ್ರಿವೇಣಿ ಪಲ್ಲತ್ತಾರು

ಪುತ್ತೂರು: ನಾವು ಸ್ವಾವಲಂಬಿ ಜೀವನ ನಡೆಸಬೇಕಾದರೆ ನಮಗೆ ಒಂದಲ್ಲ ಒಂದು ಉದ್ಯೋಗ ಅತೀ ಅವಶ್ಯಕ. ಈ ನಿಟ್ಟಿನಲ್ಲಿ ಬೇರೆಲ್ಲೋ ಹೋಗಿ ದುಡಿಯುವ ಬದಲು ನಾವೇ ಸ್ವ ಉದ್ಯೋಗವನ್ನು ಮಾಡುವ ಮೂಲಕ ಸ್ವಾವಲಂಬಿ ಜೀವನವನ್ನು ನಡೆಸಬಹುದಾಗಿದೆ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.


ಅವರು ತೋಟಗಾರಿಕಾ ಇಲಾಖೆ ಪುತ್ತೂರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪುತ್ತೂರು, ಡೇ ಎನ್‌ಆರ್‌ಎಲ್‌ಎಮ್ ಯೋಜನೆ ತಾಪಂ ಪುತ್ತೂರು ಮತ್ತು ಗ್ರಾಮ ಪಂಚಾಯತ್ ಒಳಮೊಗ್ರು, ಅನುಗ್ರಹ ಸಂಜೀವಿನಿ ಒಕ್ಕೂಟ ಒಳಮೊಗ್ರು ಇವರ ಸಹಯೋಗದಲ್ಲಿ 2024-25 ನೇ ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಇಲಾಖಾ ಯೋಜನೆಗಳು ಹಾಗೂ ಅಣಬೆ ಬೇಸಾಯ ಕುರಿತು ಜ.13 ರಂದು ಕುಂಬ್ರದ ಪಂಚಾಯತ್‌ನ ಹಳೆ ಕಟ್ಟಡದ ಸಭಾಂಗಣದಲ್ಲಿ ನಡೆದ ತರಬೇತಿ ಕಾರ್ಯಾಗಾರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಮಹಿಳೆಯರು ಕೂಡ ಅಣಬೆ ಕೃಷಿಯಂತಹ ಸ್ವಉದ್ಯೋಗಗಳನ್ನು ಮಾಡಿಕೊಳ್ಳುವ ಮೂಲಕ ಸ್ವಾವಲಂಬಿಗಳಾಗಿ ಎಂದು ಕರೆ ನೀಡಿದ ತ್ರಿವೇಣಿ ಪಲ್ಲತ್ತಾರು ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ತೋಟಗಾರಿಕ ಸಹಾಯಕ ನಿರ್ದೇಶಕ ಶಿವಪ್ರಕಾಶ್‌ ರವರು, ತೋಟಗಾರಿಕಾ ಇಲಾಖೆಯಿಂದ ಬಹಳಷ್ಟು ಯೋಜನೆಗಳಿದ್ದು ರೈತರು ಇದರ ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು. ಅಣಬೆ ಕೃಷಿ ಮಾಡುವವರಿಗೆ ಸುಮಾರು 3 ಲಕ್ಷ ರೂ. ಅನುದಾನವಿದ್ದು ಇದರಲ್ಲಿ 1.25 ಲಕ್ಷ ರೂ.ಸಬ್ಸಿಡಿ ಇರುತ್ತದೆ. ಇದಲ್ಲದೆ ಕೃಷಿಗೆ ಉಪಯೋಗವಾಗುವ ಯಂತ್ರೋಪಕರಣಗಳ ಖರೀದಿ, ಜೇನು ಪಟ್ಟಿಗೆ ಇತ್ಯಾದಿಗಳಿಗೆ ಸಹಾಯಧನವನ್ನು ನೀಡಲಾಗುತ್ತಿದೆ. ರೈತರು ತೋಟಗಾರಿಕ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಕಾಸರಗೋಡು ಕೃಷಿವಿಜ್ಞಾನ ಕೇಂದ್ರದ ಪಾಂಡುರಂಗರವರು ಅಣಬೆ ಕೃಷಿಯ ಬಗ್ಗೆ ಸುಮಾರು 2 ಗಂಟೆಗಳ ಕಾಲ ಮಾಹಿತಿ ನೀಡಿದರು. ಅಣಬೆ ಬೇಸಾಯಕ್ಕೆ ಬೇಕಾದ ವಸ್ತುಗಳು ಮತ್ತು ಯಾವ ರೀತಿಯಲ್ಲಿ ಬೇಸಾಯ ಮಾಡುವುದು, ಮಾರುಕಟ್ಟೆ, ಅಣಬೆಯಲ್ಲಿರುವ ಪೋಷಕಾಂಶಗಳು ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಪಶುಸಖಿ ಸವಿತಾ ಪ್ರಾರ್ಥಿಸಿದರು. ಕೃಷಿಸಖಿ ಉಷಾ ಸ್ವಾಗತಿಸಿದರು. ಒಳಮೊಗ್ರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ ವಂದಿಸಿದರು. ಅಂಗನವಾಡಿ ಶಿಕ್ಷಕಿ ಆಶಾಲತಾ ಎಸ್.ರೈ ಕಾರ್ಯಕ್ರಮ ನಿರೂಪಿಸಿದರು. ತೋಟಗಾರಿಕಾ ಇಲಾಖೆಯ ಕ್ಷೇತ್ರ ಸಿಬ್ಬಂದಿ ಸುಮಿತಾ, ಅನುಗ್ರಹ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ, ಪಶು ಸಖಿ ಭಾರತಿ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಮಲ್ಲಿಕಾ ಎಸ್.ರೈ ಮಂದಾರ, ದೀಪಿಕಾ, ಗೀತಾ, ಸುಲೋಚನಾ ರಾಮಕೃಷ್ಣ, ಗಿರಿಜಾ, ಸವಿತಾ ಹಾಗೂ ಪದಾಧಿಕಾರಿಗಳು ಸಹಕರಿಸಿದ್ದರು.

LEAVE A REPLY

Please enter your comment!
Please enter your name here