ಪೆರಾಬೆ: ಮೆಸ್ಕಾಂ ಪಾವತಿಸಲು ಬಾಕಿ ಇರುವ ಬಿಲ್ಲಿನ ಮೊತ್ತವನ್ನು ಮನ್ನಾ ಮಾಡುವಂತೆ ಸರಕಾರಕ್ಕೆ ಬರೆಯಲು ಜನವರಿ ತಿಂಗಳ ಪೆರಾಬೆ ಗ್ರಾ.ಪಂ.ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿದೆ.
ಸಭೆ ಗ್ರಾ.ಪಂ.ಅಧ್ಯಕ್ಷೆ ಸಂಧ್ಯಾ ಕೆ., ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.
ಗ್ರಾಮ ಪಂಚಾಯತಿಯ ಕುಡಿಯುವ ನೀರು ಮತ್ತು ಬೀದಿ ದೀಪಗಳ ಬಿಲ್ಲು ಮೆಸ್ಕಾಂಗೆ ಪಾವತಿಗೆ 7.13ಲಕ್ಷ ರೂ.ಬಾಕಿ ಆಗಿದೆ. ಈ ವಿಚಾರ ಸಭೆಯಲ್ಲಿ ಪ್ರಸ್ತಾಪಗೊಂಡು ಮೆಸ್ಕಾಂಗೆ ಪಾವತಿಗೆ ಬಾಕಿ ಇರುವ ಬಿಲ್ಲಿನ ಮೊತ್ತವನ್ನು ಮನ್ನಾ ಮಾಡುವಂತೆ ಸರಕಾರಕ್ಕೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಸ್ವಚ್ಛತಾ ಶುಲ್ಕ ಪಾವತಿಗೆ ನೋಟಿಸ್:
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸಂಜೀವಿನಿ ಒಕ್ಕೂಟದವರ ಸಹಕಾರದೊಂದಿಗೆ ಘನತ್ಯಾಜ್ಯ ಸಂಗ್ರಹ ಮಾಡಲಾಗುತ್ತಿದೆ. ಆದರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಅಂಗಡಿ ಮಾಲಕರು ಸ್ವಚ್ಛತಾ ಶುಲ್ಕ ನೀಡದಿರುವ ವಿಚಾರದ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸ್ವಚ್ಛತಾ ಶುಲ್ಕ ಪಾವತಿಸದ ಅಂಗಡಿ ಮಾಲಕರಿಗೆ ನೋಟಿಸ್ ನೀಡಿ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಲು ನಿರ್ಣಯಿಸಲಾಯಿತು.
ಆಶಾ ಕಾರ್ಯಕರ್ತೆ ನೇಮಕ ಅರ್ಜಿ ವಿಚಾರ:
ಕುಂತೂರು ಗ್ರಾಮದಲ್ಲಿ ತೆರವಾಗಿರುವ ಆಶಾ ಕಾರ್ಯಕರ್ತೆ ಹುದ್ದೆಗೆ ಬಂದಿರುವ ಅರ್ಜಿಗಳನ್ನು ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುಂದಿನ ಕ್ರಮಕ್ಕಾಗಿ ಕಳುಹಿಸುವುದೆಂದು ನಿರ್ಣಯಿಸಲಾಯಿತು.
ಸರಕಾರದಿಂದ ಹಾಗೂ ವಿವಿಧ ಇಲಾಖೆಗಳಿಂದ ಬಂದ ಸುತ್ತೋಲೆಗಳನ್ನು ಪಿಡಿಒ ಅವರು ಸಭೆಗೆ ಮಂಡಿಸಿದರು. ಸಾರ್ವಜನಿಕರಿಂದ ಬಂದ ಅರ್ಜಿಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವ ಬಗ್ಗೆ ನಿರ್ಣಯಿಸಲಾಯಿತು. ಹಿಂದಿನ ಸಭೆಯ ವರದಿ, ಜಮಾಖರ್ಚುಗಳನ್ನು ಮಂಡಿಸಿ ಅನುಮೋದನೆ ಪಡೆಯಲಾಯಿತು. ಸಭೆಯಲ್ಲಿ ಗ್ರಾ.ಪಂ.ಉಪಾಧ್ಯಕ್ಷೆ ವೇದಾವತಿ ಪಿ., ಸದಸ್ಯರಾದ ಸದಾನಂದ ಕುಂಟ್ಯಾನ, ಸಿ.ಎಂ.ಫಯಾಝ್, ಮಮತಾ, ಸುಶೀಲ, ಮೋಹನ್‌ದಾಸ್ ರೈ, ಮೋಹಿನಿ, ಕಾವೇರಿ, ಲೀಲಾವತಿ, ಬಿ.ಕೆ.ಕುಮಾರ. ಮೇನ್ಸಿ ಸಾಜನ್, ಕೃಷ್ಣ ವೈ ಉಪಸ್ಥಿತರಿದ್ದರು. ಪಿಡಿಒ ಶಾಲಿನಿ ಕೆ.ಬಿ., ಸ್ವಾಗತಿಸಿದರು. ಸಿಬ್ಬಂದಿಗಳು ಸಹಕರಿಸಿದರು.