ಉಪ್ಪಿನಂಗಡಿ: ಕಳೆದ ನವೆಂಬರ್ 19ರಂದು ಉಪ್ಪಿನಂಗಡಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಗುಡ್ಡಗಾಡು ಓಟ ಸ್ಪರ್ಧೆಯು ವ್ಯವಸ್ಥಿತವಾಗಿ ಹಾಗೂ ಸ್ಮರಣೀಯವಾಗಿ ನಡೆದಿದ್ದು, ಸರ್ವತ್ರ ಶ್ಲಾಘನೆಗೆ ಪಾತ್ರವಾಗಿರುವುದು ಸಾರ್ಥಕತೆಯ ಭಾವನೆಯನ್ನು ಮೂಡಿಸಿದೆ ಎಂದು ಕಾಲೇಜಿನ ಅಭಿವೃದ್ದಿ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ತಿಳಿಸಿದರು.
ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಜ.13ರ ಸಂಜೆ ನಡೆದ ಕೃತಜ್ಞತಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ದೇಶದ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿ ಗ್ರಾಮೀಣ ಭಾಗದ ಸರಕಾರಿ ಕಾಲೇಜಿನಲ್ಲಿ ರಾಷ್ಟ್ರ ಮಟ್ಟದ ಗುಡ್ಡಗಾಡು ಓಟದ ಸ್ಪರ್ಧೆಯನ್ನು ಉಪ್ಪಿನಂಗಡಿಯಲ್ಲಿ ಆಯೋಜಿಸಲಾಗಿದ್ದು, ಅದನ್ನು ಯಾವುದೇ ಲೋಪವಿಲ್ಲದೆ ಕರಾರುವಕ್ಕಾಗಿ ಆಯೋಜಿಸಿ ಸರ್ವತ್ರ ಪ್ರಶಂಸೆಗೆ ಒಳಗಾಗಿರುವುದರ ಹಿಂದೆ ಎಲ್ಲರ ಪರಿಶ್ರಮವಿದೆ. ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಲು ಸಭೆ ಕರೆಯಲಾಗಿದೆ. ಹಾಗೂ ಕ್ರೀಡಾಕೂಟಕ್ಕೆ ತಗಲಿದ 15.70 ಲಕ್ಷ ರೂ ಖರ್ಚುವೆಚ್ಚದ ಶೇ. 80ಭಾಗವನ್ನು ಪಾವತಿಸಲಾಗಿದ್ದು, ಉಳಿಕೆ ಶೇ.20ರ ಪಾವತಿಯ ಬಾಬ್ತು ಸರಕಾರದಿಂದ ದೊರಕುವ ಅನುದಾನವನ್ನು ನಿರೀಕ್ಷಿಸಲಾಗಿದೆ. ಹಾಗೂ ಎಲ್ಲಾ ಲೆಕ್ಕಪತ್ರವನ್ನು ಪಾರದರ್ಶಕವಾಗಿರಿಸಿ ದಾನಿಗಳ ಮುಂದೆ ಪ್ರಸ್ತುತಪಡಿಸಲಾಗುವುದೆಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಕ್ರೀಡಾ ಸಮಿತಿಯ ಕಾರ್ಯದರ್ಶಿ ಡಾ. ರಾಜಾರಾಮ ಕೆ.ಬಿ. , ಕಾಲೇಜಿನ ಪ್ರಾಂಶುಪಾಲ ರವಿರಾಜ್ ಎಸ್., ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪ್ರವೀಣ್ ಕುಡುಮರ ವೇದಿಕೆಯಲ್ಲಿ ಉಪಸ್ಥಿತರಿದ್ದು, ಕ್ರೀಡಾ ಕೂಟದ ಬಗ್ಗೆ ವಿಚಾರ ವಿಮರ್ಶೆ ನಡೆಸಿದರು. ಕಾರ್ಯಕ್ರಮದಲ್ಲಿ ರವೀಂದ್ರ ದರ್ಬೆ, ವಿನ್ಸೆಂಟ್ ಫೆರ್ನಾಂಡೀಸ್ , ಸುರೇಶ್ ಅತ್ರಮಜಲು ಮೊದಲಾದವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಮಹಾಲಿಂಗೇಶ್ವರ ಭಟ್, ಶಾಂಭವಿ ರೈ, ಜೆ.ಕೆ. ಪೂಜಾರಿ, ಯು.ಟಿ. ಮುಹಮ್ಮದ್ ತೌಷಿಫ್ , ವಿಕ್ರಂ ಶೆಟ್ಟಿ ಅಂತರ, ಇಸ್ಮಾಯೀಲ್ ಇಕ್ಬಾಲ್ ಮೊದಲಾದವರು ಭಾಗವಹಿಸಿದ್ದರು.
ಶುದ್ದ ಕುಡಿಯುವ ನೀರಿನ ಘಟಕ ಹಸ್ತಾಂತರ :
ಇದೇ ವೇಳೆ ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ವಿನ್ಸೆಂಟ್ ಫೆರ್ನಾಂಡೀಸ್ ರವರು ಕೊಡುಗೆಯಾಗಿ ನೀಡಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಕಾಲೇಜಿಗೆ ಹಸ್ತಾಂತರಿಸಲಾಯಿತು ಹಾಗೂ ರಾಷ್ಟ್ರ ಮಟ್ಟದ ಗುಡ್ಡಗಾಡು ಓಟದ ಪೂರ್ವ ತಯಾರಿ ಸಿದ್ದತೆಯಲ್ಲಿ ಶ್ರಮಿಸಿದ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆ ಹಾಗೂ ಆತ್ಮೀಯ ಭೋಜನದ ವ್ಯವಸ್ಥೆಯನ್ನು ತನ್ನ ವತಿಯಿಂದ ಕಲ್ಪಿಸಲು ಫೆರ್ನಾಂಡಿಸ್ ರವರು ಸೂಚಿಸಿದರು.
ಕಾಲೇಜಿನ ಪ್ರಾಧ್ಯಾಪಕ ಪ್ರಮೋದ್ ಕಾರ್ಯಕ್ರಮವನ್ನು ನಿರೂಪಿಸಿ, ಸ್ವಾಗತ ಹಾಗೂ ವಂದನಾರ್ಪಣೆಗೈದರು.