* ಅಧ್ಯಕ್ಷ ಸಹಿತ ನಾಲ್ಕು ಸ್ಥಾನಗಳ ಅಭ್ಯರ್ಥಿಗಳಿಗೆ ಸಮಾನ ಮತ
*ಚೀಟಿ ಎತ್ತುವಿಕೆಯಲ್ಲಿ ಸಹಕಾರ ಭಾರತಿಗೆ ಒಲಿದ ಅದೃಷ್ಟ
*ರಾಜ್ಯ ಪ್ರತಿನಿಧಿಯಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು
ಪುತ್ತೂರು:ದಕ್ಷಿಣ ಕನ್ನಡ ಕೃಷಿಕ ಸಮಾಜದ ಪದಾಧಿಕಾರಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸಹಿತ ನಾಲ್ಕು ಸ್ಥಾನಗಳ ಅಭ್ಯರ್ಥಿಗಳು ಸಮಾನ ಮತ ಪಡೆದ ಪರಿಣಾಮ ನಡೆದ ಚೀಟಿ ಎತ್ತುವಿಕೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಅದೃಷ್ಟ ಶಾಲಿಗಳಾಗಿ ಆಯ್ಕೆಯಾಗಿದ್ದಾರೆ.ರಾಜ್ಯ ಪ್ರತಿನಿಧಿ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
ಸಹಕಾರ ಭಾರತಿ ಅಭ್ಯರ್ಥಿಗಳಾಗಿರುವ ವಿಜಯ ಕುಮಾರ್ ರೈ ಕೋರಂಗ ಜಿಲ್ಲಾಧ್ಯಕ್ಷರಾಗಿ, ಚಂದ್ರ ಕೋಲ್ಚಾರ್ ಉಪಾಧ್ಯಕ್ಷರಾಗಿ, ರಾಕೇಶ್ ರೈ ಕೆಡೆಂಜಿ ಪ್ರಧಾನ ಕಾರ್ಯದರ್ಶಿಯಾಗಿ ಹಾಗೂ ಎ.ಟಿ.ಕುಸುಮಾಧರ ಅವರು ಖಜಾಂಜಿಯಾಗಿ ಚುನಾಯಿತರಾದರು.ರಾಜ್ಯ ಪ್ರತಿನಿಧಿಯಾಗಿ ಕಾಂಗ್ರೆಸ್ ಬೆಂಬಲಿತ ಪದ್ಮನಾಭ ರೈ ಕಲ್ಲಡ್ಕ ಅವರು ಮರು ಆಯ್ಕೆಯಾದರು.
ದಕ್ಷಿಣ ಕನ್ನಡ ಜಿಲ್ಲಾ ಕೃಷಿಕ ಸಮಾಜದ 2025-26ರಿಂದ 2029-30ರ ತನಕದ 5 ವರ್ಷಗಳ ಅವಧಿಗೆ ಪದಾಧಿಕಾರಿಗಳ ಆಯ್ಕೆಗೆ, ಬೈಲಾ ನಿಬಂಧನೆಯ ಅನ್ವಯ ಜ.16ರಂದು ಮಂಗಳೂರು ಕೃಷಿ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಚುನಾವಣೆ ನಡೆಯಿತು.ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಸಂಪತ್ ಸಾಮ್ರಾಜ್ಯ ಹಾಗೂ ಸಹಕಾರ ಭಾರತಿಯ ವಿಜಯ ಕುಮಾರ್ ರೈ ಕೋರಂಗ, ಉಪಾಧ್ಯಕ್ಷ ಸ್ಥಾನಕ್ಕೆ ಸಹಕಾರ ಭಾರತಿಯ ಚಂದ್ರ ಕೋಲ್ಚಾರು ಹಾಗೂ ಕಾಂಗ್ರೆಸ್ ಬೆಂಬಲಿತ ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಸಹಕಾರ ಭಾರತಿಯ ರಾಕೇಶ್ ರೈ ಕೆಡೆಂಜಿ ಹಾಗೂ ಕಾಂಗ್ರೆಸ್ ಬೆಂಬಲಿತ ಕೆ.ದೇವದಾಸ ಭಂಡಾರಿ ಮತ್ತು ಖಜಾಂಚಿ ಸ್ಥಾನಕ್ಕೆ ಸಹಕಾರ ಭಾರತಿಯ ಎ.ಟಿ.ಕುಸುಮಾಧರ ಮತ್ತು ಕಾಂಗ್ರೆಸ್ ಬೆಂಬಲಿತ ಪದ್ಮರಾಜ್ ಬಲ್ಲಾಳ್ ಸ್ಪರ್ಧಿಗಳಾಗಿದ್ದರು.ನಾಲ್ಕು ಸ್ಥಾನದ 8 ಅಭ್ಯರ್ಥಿಗಳೂ ತಲಾ 7 ಮತಗಳನ್ನು ಪಡೆದು ಸಮಬಲ ಸಾಧಿಸಿದ್ದರು.ಇದರಿಂದಾಗಿ ವಿಜೇತರ ಆಯ್ಕೆಗಾಗಿ ಚೀಟಿ ಎತ್ತುವಿಕೆ ಪ್ರಕ್ರಿಯೆ ನಡೆಸಲಾಯಿತು.ಇದರಲ್ಲಿ ನಾಲ್ಕು ಸ್ಥಾನಗಳಿಗೂ ಸಹಕಾರ ಭಾರತಿ ಅಭ್ಯರ್ಥಿಗಳು ಅದೃಷ್ಟಶಾಲಿಗಳಾಗಿ ಆಯ್ಕೆಯಾದರು.
ರಾಜ್ಯ ಪ್ರತಿನಿಧಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಪದ್ಮನಾಭ ರೈಯವರು 8 ಮತಗಳನ್ನು ಪಡೆದುಕೊಂಡು ಚುನಾಯಿತರಾದರು.ಸಹಕಾರ ಭಾರತಿಯ ಕೆ.ಕೃಷ್ಣರಾಜ ಹೆಗ್ಡೆ ಅವರು 6 ಮತಗಳನ್ನು ಪಡೆದುಕೊಂಡು ಪರಾಜಿತರಾದರು.ತಾಲೂಕಿನಿಂದ ಜಿಲ್ಲಾ ಪ್ರತಿನಿಧಿಗಳಾಗಿ ಆಯ್ಕೆಯಾಗಿರುವವರ ಸಹಿತ 14 ಮಂದಿ ಮತದಾರರಾಗಿದ್ದರು.ಪುತ್ತೂರು ತಾಲೂಕುನಿಂದ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ಮಾಜಿ ಶಾಸಕ ಸಂಜೀವ ಮಠಂದೂರು ಹಾಗೂ ಕಡಬ ತಾಲೂಕಿನಿಂದ ಜಿಲ್ಲಾ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದ ನ್ಯಾಯವಾದಿ ಮಹೇಶ್ ಕೆ ಸವಣೂರು ಸಹಿತ 14 ಮಂದಿಯೂ ಮತದಾನದಲ್ಲಿ ಪಾಲ್ಗೊಂಡಿದ್ದರು.
ದಕ್ಷಿಣ ಕನ್ನಡ ಕೃಷಿಕ ಸಮಾಜದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ನಾಲ್ಕು ಮಂದಿ ಪದಾಧಿಕಾರಿಗಳಾಗಿ ಗೆಲುವು ಸಾಧಿಸುವ ಮೂಲಕ ಇತಿಹಾಸ ನಿರ್ಮಾಣವಾಗಿದೆ.ಸ್ವಾತಂತ್ರ್ಯ ಬಂದು 77 ವರ್ಷಗಳಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್ ಬೆಂಬಲಿತರೇ ಪಡೆದುಕೊಂಡು ಆಡಳಿತ ಮಾಡುತ್ತಿದ್ದರು.ಆದರೆ ಇವತ್ತು ಬಿಜೆಪಿ ಕಾರ್ಯಕರ್ತ,ಪುತ್ತೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರೂ ಆಗಿರುವ ವಿಜಯ ಕುಮಾರ್ ರೈ ಕೋರಂಗ ಅವರು ಜಿಲ್ಲಾಧ್ಯಕ್ಷರಾಗುವ ಮೂಲಕ ಒಂದು ಇತಿಹಾಸ ನಿರ್ಮಾಣ ಮಾಡಿದ್ದಾರೆ.ಅದರ ಜೊತೆಯಲ್ಲಿ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರೂ ಆಗಿರುವ ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ ಚಂದ್ರಕೋಲ್ಚಾರ್ ಅವರು ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ.ಪ್ರಧಾನ ಕಾರ್ಯದರ್ಶಿಯಾಗಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಅವರು ಆಯ್ಕೆಗೊಂಡಿದ್ದಾರೆ.ಜಿಲ್ಲಾ ಖಜಾಂಚಿಯಾಗಿ ಎ.ಟಿ.ಕುಸುಮಾಧರ್ ಸುಳ್ಯ ಅವರು ಆಯ್ಕೆಯಾಗಿದ್ದು ಎಲ್ಲಾ ಪದಾಧಿಕಾರಿಗಳು ಮುಂದೆ ಕೃಷಿಕರ ಬೆನ್ನೆಲುಬಾಗಿ ನಿಂತು ಸರಕಾರದ ಹಂತದಲ್ಲಿ ಪರಿಹಾರ ತರಲು ಕಟಿಬದ್ದರಾಗಿದ್ದಾರೆ-
ಸಂಜೀವ ಮಠಂದೂರು, ಮಾಜಿ ಶಾಸಕರು
ಮತ್ತು ಕೃಷಿಕ ಸಮಾಜದ ಜಿಲ್ಲಾ ಪ್ರತಿನಿಧಿ