ಬಡಗನ್ನೂರು: ಪಡುಮಲೆ ಕಿನ್ನಿಮಾಣಿ ಪೂಮಾಣಿ ಸಾಂಸ್ಕೃತಿಕ ಕಲಾ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಮತ್ತು ಸ್ಥಳಿಯ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಪಡುಮಲೆ ಕಿನ್ನಿಮಾಣಿ ಪೂಮಾಣಿ ದೈವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟಪೂರ್ವ ಅಧ್ಯಕ್ಷರಾದ ರವಿರಾಜ್ ಶೆಟ್ಟಿ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಮುಂದಿನ ಪೀಳಿಗೆ ಪಡುಮಲೆ ಜಾತ್ರೆ ಅರಿವು ಗೊತ್ತಾಗಬೇಕಾದರೆ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಅತೀ ಅಗತ್ಯ. ಈ ಸಾಂಸ್ಕೃತಿಕ ವೇದಿಕೆಯ ಮೂಲಕ ಮಕ್ಕಳ ಪ್ರತಿಭೆ ಅನಾವರಣ ಅವಕಾಶ ಮಾಡಿಕೊಟ್ಟ ಜನಾರ್ಧನ ಪೂಜಾರಿ ಪದಡ್ಕ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪಡುಮಲೆ ಕಿನ್ನಿಮಾಣಿ ಪೂಮಾಣಿ ಸಾಂಸ್ಕೃತಿಕ ಕಲಾ ವೇದಿಕೆಯ ಸಂಘಟಕರಾದ ಜನಾರ್ಧನ ಪೂಜಾರಿ ಪದಡ್ಕ ಪ್ರಸ್ತಾವನೆಗೈದು ಸ್ವಾಗತಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಸುಪ್ತ ಪ್ರತಿಭೆಗಳು ಇವೆ. ಈ ಪ್ರತಿಭೆಗಳಿಗೆ ಅವಕಾಶ ಸಿಕ್ಕರೆ ಮುಂದೆ ಕಲಾವಿದರಾಗಿ ಸಮಾಜದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತದೆ. ಪಡುಮಲೆ ಕಿನ್ನಿಮಾಣಿ ಪೂಮಾಣಿ ಸಾಂಸ್ಕೃತಿಕ ಕಲಾ ವೇದಿಕೆ ಈ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದ್ದೆ ಎಂದು ಹೇಳಿದರು.
ಖ್ಯಾತ ದೈವ ನರ್ತಕ ಡಾ. ರವೀಶ್ ಪಡುಮಲೆ ಮಾತನಾಡಿ ಪಡುಮಲೆ ಸಾಂಸ್ಕೃತಿಕ ಕಲಾವೇದಿಕೆ ರೂಪು ರೇಷೆ ನೀಡಿದರು. ಪಡುಮಲೆ ಜಾತ್ರೆ ಹತ್ತೂರಿಗೆ ಪಸರಿಸಿದೆ. ಸಂಸ್ಕಾರ,ಸಂಸ್ಕೃತಿ, ಆಚಾರ, ವಿಚಾರಗಳು, ಆಚರಣೆ, ಸಂಪ್ರದಾಯಗಳ ಬಗ್ಗೆ ಮಕ್ಕಳು ಗಮನ ಹರಿಸಬೇಕು ಎಂದು ಹೇಳಿದರು.
ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ಸತೀಶ ರೈ ಕಟ್ಟಾವು, ಪಡುಮಲೆ ಶ್ರೀ ಕಟೀಲು ಮೇಳದ ಯಕ್ಷಗಾನ ಬಯಲಾಟ ಸಮಿತಿಯ ಅಧ್ಯಕ್ಷ ಉದಯ ಕುಮಾರ್ ಪಡುಮಲೆ, ದೈವಸ್ಥಾನದ ಸಂಘಟಕ ರವಿರಾಜ್ ರೈ ಉಪಸ್ಥಿತರಿದ್ದರು.
ಜಾತ್ರೋತ್ಸವ ಸಮಿತಿಯ ಕಾರ್ಯದರ್ಶಿ ಸುರೇಶ್ ರೈ ಪಲ್ಲತ್ತಾರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.