ರಾಮಕುಂಜ: ತನ್ನ ಅಜ್ಜಿಯ ಆಸೆಯಂತೆ ರಾಮಕುಂಜ ಶ್ರೀ ರಾಮಕುಂಜೇಶ್ವರ ಆಂಗ್ಲಮಾಧ್ಯಮ ಪ್ರೌಢಶಾಲೆಗೆ ಇಲ್ಲಿನ ಹಿರಿಯ ವಿದ್ಯಾರ್ಥಿಯೊಬ್ಬರು ರೂ.50 ಸಾವಿರ ದೇಣಿಗೆ ನೀಡಿದರು.
ಪಾಣೆಮಂಗಳೂರು ನಿವಾಸಿ ನರೇಂದ್ರನಾಥ ಕುಡ್ವ ಅವರ ಪುತ್ರ ಎನ್.ಅನಿರುದ್ಧ್ ಕುಡ್ವ ಅವರು 2008-09ರಿಂದ 2010-11ರ ವರೆಗೆ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ವಸತಿ ನಿಲಯದಲ್ಲಿ ಉಳಿದುಕೊಂಡು ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿ, ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಸ್ವಂತ ಉದ್ಯಮದಲ್ಲಿ ತೊಡಗಿಕೊಂಡಿದ್ದಾರೆ.
ಎನ್.ಅನಿರುದ್ಧ್ ಕುಡ್ವ ಅವರ ವಿದ್ಯಾಭ್ಯಾಸದ ವಿಶೇಷ ಪ್ರಗತಿಯನ್ನು ಕಂಡು ಅವರ ಅಜ್ಜಿ ಎನ್.ಗೌರಿ ಕುಡ್ವರವರು ಸಂಸ್ಥೆಯ ಮೇಲಿನ ಗೌರವದಿಂದ ತಮ್ಮ ಮರಣೋತ್ತರ ಇಚ್ಚಾಪತ್ರದಲ್ಲಿ ರೂ.50 ಸಾವಿರವನ್ನು ಈ ವಿದ್ಯಾಸಂಸ್ಥೆಗೆ ನೀಡಬೇಕೆಂದು ಬರೆದಿದ್ದರು. ಆ ಪ್ರಕಾರ ಎನ್.ಅನಿರುದ್ಧ್ ಕುಡ್ವ ಹಾಗೂ ಅವರ ತಂದೆ ಎನ್.ನರೇಂದ್ರನಾಥ ಕುಡ್ವ ಅವರು ಸಂಸ್ಥೆಗೆ ಆಗಮಿಸಿ ರೂ.50 ಸಾವಿರವನ್ನು ಸಂಸ್ಥೆಯ ಕಾರ್ಯದರ್ಶಿ ಕೆ.ಸೇಸಪ್ಪ ರೈಯವರಿಗೆ ಹಸ್ತಾಂತರಿಸಿದರು. ಸಂಸ್ಥೆಯ ವತಿಯಿಂದ ಹಿರಿಯ ವಿದ್ಯಾರ್ಥಿಯನ್ನು ಗೌರವಿಸಲಾಯಿತು.