ಪುತ್ತೂರು: ಆರ್ಯಾಪು ಗ್ರಾಮದ ಸಂಪ್ಯ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾ ವಾರ್ಷಿಕೋತ್ಸವ, ಜಾತ್ರೋತ್ಸವ ಹಾಗೂ ಕ್ಷೇತ್ರದ ದೈವಗಳ ನೇಮೋತ್ಸವವು ಜ.26ರಂದು ವಿವಿಧ ವೈದಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ವೇ.ಮೂ ಸುರೇಶ ನಕ್ಷತ್ರಿತ್ತಾಯರವರ ಉಪಸ್ಥಿತಿಯಲ್ಲಿ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ರವರ ನೇತೃತ್ವದಲ್ಲಿ ಜ.25ರಂದು ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಗ್ರಾಮದ ವಿವಿಧ ಭಾಗಗಳಲ್ಲಿ ಸಂಗ್ರಹಗೊಂಡ ಹೊರೆಕಾಣಿಕೆಯು ಸಂಜೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆಯ ಮೂಲಕ ದೇವಸ್ಥಾನಕ್ಕೆ ಆಗಮಿಸಲಿದೆ. ಮೆರವಣಿಗೆಯು ದೇವಸ್ಥಾನದ ಮುಂಭಾಗದಿಂದ ಹೊರಟು ಮುಖ್ಯರಸ್ತೆ ದರ್ಬೆ, ಬೈಪಾಸ್ ಮೂಲಕ ಮುಕ್ರಂಪಾಡಿ, ಸಂಪ್ಯ ಮೂಲಕ ಸಾಗಿ ದೇವಸ್ಥಾನಕ್ಕೆ ಆಗಮಿಸಲಿದೆ. ಮೆರವಣಿಗೆಯಲ್ಲಿ ದೇವರಿಗೆ ನೂತನವಾಗಿ ಸಮರ್ಪಣೆಯಾಗಲಿರುವ ಪಲ್ಲಕ್ಕಿಯು ದೇವಸ್ಥಾನಕ್ಕೆ ಆಗಮಿಸಲಿದೆ. ನಂತರ ಕ್ಷೇತ್ರದಲ್ಲಿ ಉಗ್ರಾಣ ಪೂಜೆ, ದುರ್ಗಾಪೂಜೆ, ಶ್ರೀ ದೇವರಿಗೆ ವಿಶೇಷ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.
ಜ.26ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಗಣಪತಿಹೋಮ, ನಾಗತಂಬಿಲ, ಆಶ್ಲೇಷ ಬಲಿ, ದೈವ ತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, ಶ್ರೀ ದೇವರಿಗೆ ಕಲಶ ಪೂಜೆ, ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಕ್ಷೇತ್ರದ ದೈವಗಳಾದ ಧೂಮಾವತಿ ಹಾಗೂ ಗುಳಿಗ ದೈವಗಳ ಭಂಡಾರ ತೆಗೆದ ಬಳಿಕ ಶ್ರೀ ದೇವರ ಉತ್ಸವ ಬಲಿ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆದ ಬಳಿಕ ಧೂಮಾವತಿ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ.
ಪಲ್ಲಕ್ಕಿ ಸಮರ್ಪಣೆ:
ಈ ವರ್ಷದ ಜಾತ್ರೋತ್ಸವದಲ್ಲಿ ವಿಶೇಷವಾಗಿ ಗಿರಿಜಾ, ರವೀಂದ್ರ ಗೌಡ ಎಸ್ ಮತ್ತು ಮನೆಯವರಿಂದ ದೇವರಿಗೆ ಪಲ್ಲಕ್ಕಿ ಸಮರ್ಪಣೆಯಾಗಲಿದೆ. ನಂತರ ಇದೇ ಪಲ್ಲಕ್ಕಿಯಲ್ಲಿ ದೇವರ ಪಲ್ಲಕ್ಕಿ ಉತ್ಸವವು ನಡೆಯಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
2020ರಲ್ಲಿ ಪುನಃ ಪ್ರತಿಷ್ಠೆ ಬ್ರಹ್ಮಕಲಶೋತ್ಸವಗಳು ನಡೆದು ಪ್ರತಿ ವರ್ಷ ಪ್ರತಿಷ್ಠಾದಿ ಕಾರ್ಯಕ್ರಮ ಹಾಗೂ ದೈವಗಳ ನೇಮೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿತ್ತು. ದೇವಸ್ಥಾನದಲ್ಲಿ ಜಾತ್ರೋತ್ಸವ ನಡೆಸಬೇಕು ಎಂಬ ಭಕ್ತಾದಿಗಳ ಆಶಯದಂತೆ ಕ್ಷೇತ್ರದಲ್ಲಿ ಪ್ರಶ್ನಾ ಚಿಂತನೆ ನಡೆಸಲಾಗಿದ್ದು ತೀರ್ಥ ಮಂಟಪವಿರುವ ದೇವರ ಸಾನಿಧ್ಯವಿರುವಲ್ಲಿ ಜಾತ್ರೆ ನಡೆಯಬೇಕು ಎಂಬ ನಿಯಮವಿದೆ. ಹೀಗಾಗಿ ಕ್ಷೇತ್ರದಲ್ಲಿ ಜಾತ್ರೋತ್ಸವ ನಡೆಸುವಂತೆ ದೈವಜ್ಞರು ಸೂಚನೆ ನೀಡಿದ್ದು ಕಳೆದ ವರ್ಷದಿಂದ ಜಾತ್ರೋತ್ಸವವು ನಡೆಯುತ್ತಿದ್ದು ಈ ವರ್ಷ ಮೂರನೇ ವರ್ಷದ ಜಾತ್ರೋತ್ಸವ ನಡೆಯುತ್ತಿದೆ.