ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಭರದ ಸಿದ್ಧತೆ- ಭಕ್ತರಿಂದ ಹಗಲು-ರಾತ್ರಿ ನಿರಂತರ ಶ್ರಮದಾನ

0

ಫೆ.5ರಿಂದ 10ರ ತನಕ ಬ್ರಹ್ಮಕಲಶೋತ್ಸವ

ನೆಲ್ಯಾಡಿ: ನಂಬಿ ಬರುವ ಭಕ್ತರ ಇಷ್ಟಾರ್ಥ ಪೂರೈಸುತ್ತಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಫೆ.5ರಿಂದ 10ರ ತನಕ ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದ್ದು ಇದಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಗ್ರಾಮದ ಭಕ್ತರು ಕಳೆದ 1 ತಿಂಗಳಿನಿಂದ ಹಗಲು-ರಾತ್ರಿ ನಿರಂತರ ಶ್ರಮದಾನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.


ಈ ದೇವಸ್ಥಾನ ಸುಮಾರು 100 ವರ್ಷಗಳಷ್ಟು ಹಳೆಯದು ಎಂದು ಅಂದಾಜಿಸಲಾಗಿದೆ. ಎಲಿಕ್ಕಳ ದಿ.ಕೃಷ್ಣ ಶಬರಾಯರು ಕುಟುಂಬ ಶ್ರೇಯಸ್ಸಿಗಾಗಿಯೂ, ಗ್ರಾಮದ ಜನತೆಯ ರಕ್ಷಣೆಗಾಗಿಯೂ ಅಭಯ ಹಸ್ತನಾದ ಚತುರ್ಬಾಹು ಮಹಾವಿಷ್ಣುಮೂರ್ತಿ ಶಿಲಾ ವಿಗ್ರಹವನ್ನು ಪ್ರಾಚೀನತೆ ಇರುವ ಬೃಹತ್ ಅಶ್ವತ್ಥ ವೃಕ್ಷದ ಹತ್ತಿರ ದೇವಾಲಯ ನಿರ್ಮಿಸಿ ಪ್ರತಿಷ್ಠಾಪಿಸಿದ್ದರು. ದೇವರಿಗೆ ಪೂಜೆ ಆದಂತೆ ಶನಿದೋಷ ಪರಿಹಾರಾರ್ಥವಾಗಿ ಹರಕೆಗಳಿದ್ದಲ್ಲಿ ಅಶ್ವತ್ಥ ಪೂಜೆಯು ನಡೆಯುತ್ತದೆ. ಇಲ್ಲಿ ಒಮ್ಮೆ ಬಂದವರು ಮನ:ಶಾಂತಿ ಉಂಟಾಗಿ ಆಗಾಗ ಬಂದು ದೇವರ ಪ್ರಸಾದ ಪಡೆದು ವ್ಯಾಜ್ಯಗಳ ಜಯ, ರೋಗ ರುಜಿನದಿಂದ ಪರಿಹಾರ, ವಿವಾಹ ಸಿದ್ಧಿ, ಸಂತಾನ ಲಾಭ ಹಾಗೂ ಕುಟುಂಬ ಸ್ನೇಹಗಳನ್ನು ಪಡೆದಿದ್ದಾರೆ. ಪ್ರತಿವರ್ಷ ಫೆ.26ರಂದು ವಾರ್ಷಿಕ ರಂಗಪೂಜೆ, ನಿತ್ಯಪೂಜೆ ನೈವೇದ್ಯಗಳು ನಡೆಯುತ್ತಿದೆ.

ದೇವಾಲಯ ಪುನರ್‌ನಿರ್ಮಾಣ:
12 ವರ್ಷದ ಹಿಂದೆ ಅಷ್ಟಮಂಗಲದಲ್ಲಿ ಚಿಂತಿಸಿ ಪುನ: 12-9-2019ರಂದು ದೈವಜ್ಞ ಚೆಕೋಡು ಸುಬ್ರಹ್ಮಣ್ಯ ಭಟ್ಟರಿಂದ ತಾಂಬೂಲ ಪ್ರಶ್ನೆ ನಡೆಸಲಾಗಿ, ದೇವಾಲಯದ ವಾಸ್ತುಶಿಲ್ಪ ತಜ್ಞರಾದ ಬೆದ್ರಡ್ಕ ರಮೇಶ ಕಾರಂತರ ವಾಸ್ತು ಶಿಲ್ಪ ಮಾರ್ಗದರ್ಶನದೊಂದಿಗೆ ದೇವಾಲಯ ನಿರ್ಮಾಣಗೊಂಡಿದೆ. ಶ್ರೀ ಮಹಾವಿಷ್ಣು ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಪೌಳಿ, ಕೊಣಾಲು ದೇವತೆಯ ದೈವಸ್ಥಾನ ನಿರ್ಮಾಣಗೊಂಡಿದ್ದು ಪುನರ್ ನಿರ್ಮಾಣಕ್ಕೆ 1.50 ಕೋಟಿ ರೂ.ವ್ಯಯಿಸಲಾಗಿದೆ. ದೇವಾಲಯದ ಜೀರ್ಣೋದ್ಧಾರ ಕೆಲಸಗಳು ಪೂರ್ಣಗೊಂಡಿದ್ದು ನವೀಕರಣ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ.

ಹಗಲು-ರಾತ್ರಿ ಶ್ರಮದಾನ:
ಬ್ರಹ್ಮಕಲಶೋತ್ಸವಕ್ಕೆ ದಿನ ಸಮೀಪಿಸುತ್ತಿದ್ದಂತೆ ಗ್ರಾಮದ ಭಕ್ತರು ಹಗಲು-ರಾತ್ರಿ ಶ್ರಮದಾನ ನಡೆಸುತ್ತಿದ್ದಾರೆ. ಚಪ್ಪರ, ಬ್ಯಾನರ್ ಅಳವಡಿಕೆ, ಶೃಂಗಾರ, ಆಮಂತ್ರಣ ಪತ್ರ ವಿತರಣೆ ಸೇರಿದಂತೆ ವಿವಿಧ ಕೆಲಸಗಳಲ್ಲಿ ಭಕ್ತರು ತಂಡೋಪತಂಡವಾಗಿ ತೊಡಗಿಕೊಂಡಿದ್ದಾರೆ. ಇದಕ್ಕಾಗಿಯೇ ವಿವಿಧ ಸಮಿತಿಗಳನ್ನು ರಚನೆ ಮಾಡಲಾಗಿದ್ದು ಸಮಿತಿಯ ಸಂಚಾಲಕರು, ಸಹಸಂಚಾಲಕರು, ಸದಸ್ಯರು ಕೆಲಸದಲ್ಲಿ ನಿರತರಾಗಿದ್ದಾರೆ. ಫೆ.5ರಿಂದ 10ರ ತನಕ ವಿವಿಧ ವೈದಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.


ಊರವರಿಂದ ಉತ್ತಮ ಸ್ಪಂದನೆ:
2 ವರ್ಷದ ಹಿಂದೆ ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಲಾಗಿತ್ತು. ಊರಿನವರ, ಭಕ್ತರನ್ನು ಸೇರಿಸಿಕೊಂಡು ಜೀರ್ಣೋದ್ದಾರ ಸಮಿತಿ ರಚನೆ ಮಾಡಿಕೊಂಡು ಎಲ್ಲರ ಸಹಕಾರದಿಂದ ಜೀರ್ಣೋದ್ದಾರ ಕೆಲಸ ನಡೆದಿದೆ. ಅಷ್ಟಮಂಗಳ ಪ್ರಶ್ನೆಯಲ್ಲಿ ಕಂಡುಬಂದಿರುವ ಎಲ್ಲಾ ಕೆಲಸಗಳು ಪೂರ್ಣಗೊಂಡಿದೆ. ದೇವರ ಗರ್ಭಗುಡಿ, ನಮಸ್ಕಾರ ಮಂಟಪ, ಆವರಣ, ಕೊಣಾಲು ದೇವತೆ ಗುಡಿ ಸಹಿತ ಎಲ್ಲಾ ಕೆಲಸಗಳು ಮುಗಿದಿವೆ. ಇದೀಗ ಬ್ರಹ್ಮಕಲಶೋತ್ಸವದ ತಯಾರಿ ನಡೆಯುತ್ತಿದೆ. ಊರಿನವರಿಂದ ಉತ್ತಮ ಸ್ಪಂದನೆ ದೊರೆತಿದೆ.

-ಶಿವಾನಂದ ಕಾರಂತ ಕಾಂಚನ, ಅಧ್ಯಕ್ಷರು, ಜೀರ್ಣೋದ್ದಾರ ಸಮಿತಿ/ಬ್ರಹ್ಮಕಲಶೋತ್ಸವ ಸಮಿತಿ

LEAVE A REPLY

Please enter your comment!
Please enter your name here