ಉಪ್ಪಿನಂಗಡಿ: ಕಾರಣಿಕ ಕ್ಷೇತ್ರವಾದ ಬೆಳ್ತಂಗಡಿ ತಾಲೂಕು ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಗಳ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವು ಬುಧವಾರ ಮತ್ತು ಗುರುವಾರದಂದು ಸಹಸ್ರಾರು ಭಕ್ತಾದಿಗಳ ಭಾಗೀಧಾರಿಕೆಯೊಂದಿಗೆ ನಡೆಯಿತು.
ಬುಧವಾರದಂದು ಬಬ್ಬರಿ ಗುಡ್ಡೆಯಲ್ಲಿ ದೈವಂಕ್ಳು ಪರ್ವ, ದೈವಸ್ಥಾನದಲ್ಲಿ ತೋರಣ ಮೂಹೂರ್ತ , ದೈವಗಳ ಭಂಡಾರ ಕ್ಷೇತ್ರಕ್ಕೆ ಆಗಮನ, ಶುದ್ಧಕಲಶ, ಮತ್ತು ನೂತನ ಹುಲಿ ಬಂಡಿ ದೈವಕ್ಕೆ ಒಪ್ಪಿಸುವಿಕೆ, ದೈವಂಕುಳು, ಬಿರ್ಮೆರ್, ಗಿಳಿರಾಮ, ಕುಮಾರ, ಬಸ್ತಿ ನಾಯ್ಕ ಸಹಿತ ಪರಿವಾರ ದೈವಗಳ ನೇಮೋತ್ಸವ ನಡೆಯಿತು.
ಗುರುವಾರದಂದು ಕ್ಷೇತ್ರದ ಪ್ರಧಾನ ದೈವಗಳಾದ ಕಲ್ಕುಡ, ಪಿಲಿಚಾಮುಂಡಿ, ಶಿರಾಡಿ ದೈವಗಳ ಗಗ್ಗರ ನರ್ತನ ಸೇವೆ, ಶಿರಾಡಿ ದೈವದ ಹುಲಿ ಸವಾರಿ, ಬಸ್ತಿ ನಾಯ್ಕ ದೈವದ ನರ್ತನ ಸೇವೆಗಳು ನಡೆದು ದೈವದ ಭಂಡಾರವು ಕ್ಷೇತ್ರದಿಂದ ಭಂಡಾರದ ಮನೆಗೆ ನಿರ್ಗಮಿಸಿತು.
ರಾಜ್ಯ ಹೊರ ರಾಜ್ಯಗಳಿಂದ ಭಕ್ತರನ್ನು ಸೆಳೆಯುತ್ತಿರುವ ಕ್ಷೇತ್ರ:
ಭಕ್ತರ ಸಮಸ್ಯೆಗಳಿಗೆ ತ್ವರಿತ ಸ್ಪಂದಿಸುವ ದೈವಗಳೆಂಬ ಪ್ರತೀತಿಯನ್ನು ಪಡೆದಿರುವ ಈ ಮುಗೇರಡ್ಕ ದೈವಸ್ಥಾನದ ವಾರ್ಷಿಕ ನೇಮೋತ್ಸವಕ್ಕೆ ಯಾವುದೇ ಜಾಹೀರಾತು ಆಮಂತ್ರಣದ ವ್ಯವಸ್ಥೆ ಇಲ್ಲದಿದ್ದರೂ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಭಾರೀ ಸಂಖ್ಯೆಯ ಭಕ್ತರು ಆಗಮಿಸುತ್ತಿರುವುದು ಇಲ್ಲಿನ ವಿಶೇಷತೆಯಾಗಿದೆ. ದಶಕದ ಹಿಂದೆ ಕ್ಷೇತ್ರವನ್ನು ಮುಜರಾಯಿ ಇಲಾಖೆಗೆ ಒಪ್ಪಿಸುವ ಯತ್ನ ನಡೆದಾಗ , ಕಾರ್ಯಾಚರಣೆಗಿಳಿದ ಮುಜರಾಯಿ ಇಲಾಖಾಧಿಕಾರಿ ಕ್ಷೇತ್ರದ ಕಟ್ಟುಪಾಡುಗಳನ್ನು ಮುಂದುವರೆಸಲು ಒಪ್ಪಿಗೆ ನೀಡಬೇಕಾದರೆ ಲಂಚಕ್ಕೆ ಬೇಡಿಕೆಯನ್ನಿಟ್ಟಿದ್ದ ಪ್ರಸಂಗ ನಡೆದಿತ್ತು. ದೈವಸ್ಥಾನದ ಆಡಳಿತವು ಅಧಿಕಾರಿಯ ಬೇಡಿಕೆಯನ್ನು ದೈವದ ಮುಂದಿರಿಸಿ ಹಣವನ್ನು ಪಾವತಿಸಿದ್ದರು. ಆದರೆ ಹಣ ಸ್ವೀಕರಿಸಿದ ಅಧಿಕಾರಿಯು ಅದೇ ದಿನ ಅಪಘಾತಕ್ಕೀಡಾಗಿ ಆಸ್ಪತ್ರೆಗೆ ದಾಖಲಾದ ಕಾರಣ ಅಧಿಕಾರಿಯ ಪತ್ನಿ ದೈವಸ್ಥಾನಕ್ಕೆ ದೌಡಾಯಿಸಿ ಬಂದು ಪಡೆದ ಮೊತ್ತಕ್ಕಿಂತ ಹೆಚ್ಚುವರಿ ಮೊತ್ತವನ್ನು ತಪ್ಪು ಕಾಣಿಕೆಯಾಗಿ ದೈವಕ್ಕೆ ಸಮರ್ಪಿಸಿ ದೈವಸ್ಥಾನದಲ್ಲಿ ಕ್ಷಮೆ ಯಾಚಿಸಿದ ಪ್ರಸಂಗ ನಡೆದಿತ್ತು. ಆ ಬಳಿಕ ಕ್ಷೇತ್ರದ ವಿಚಾರದಲ್ಲಿ ಯಾರೊಬ್ಬರೂ ಅನಗತ್ಯ ವಿವಾದವನ್ನು ಮಾಡುವ ಗೋಜಿಗೆ ಹೋಗದೆ ಕ್ಷೇತ್ರಕ್ಕೆ ಭಾರೀ ಸಂಖ್ಯೆಯ ಭಕ್ತಾದಿಗಳು ಬಂದು ಸೇವೆ ಸಲ್ಲಿಸುವಂತಾಗಿದೆ. ಗುರುವಾರದಂದು ಸಾವಿರಾರು ಭಕ್ತರಿಗೆ ಅನ್ನ ಪ್ರಸಾದದ ವಿತರಣೆಯೂ ನಡೆಯಿತು.
ಕ್ಷೇತ್ರಕ್ಕೆ ಶಾಸಕ ಹರೀಶ್ ಪೂಂಜಾ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್, ಮಾಜಿ ಸಚಿವರಾದ ರಮಾನಾಥ ರೈ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮೊದಲಾದವರು ಕ್ಷೇತ್ರಕ್ಕೆ ಭೇಟಿ ನೀಡಿ ದೈವದ ಗಂಧ ಪ್ರಸಾದವನ್ನು ಸ್ವೀಕರಿಸಿದರು.