ಬದುಕಿನುದ್ದಕ್ಕೂ ಸವಾಲು ಮೆಟ್ಟಿ ನಿಲ್ಲುವ ಶಿಕ್ಷಣ ನಮ್ಮದಾಗಬೇಕು-ಬಿಷಪ್ ಮಕಾರಿಯೋಸ್
ಪುತ್ತೂರು:ಸಮಾಜವನ್ನು ಕಟ್ಟುವ ವಿಚಾರದ ಬಗ್ಗೆ ಶಿಕ್ಷಣ ಬೇಕೇ ವಿನಹ ಸಮಾಜವನ್ನು ಒಡೆಯುವ ಶಿಕ್ಷಣ ಬೇಡ. ದೇವರ ಸ್ಮರಣೆಯುಳ್ಳ ಸಾನಿಧ್ಯದ ದೇಗುಲ ವಿದ್ಯಾದೇಗುಲವಾಗಿದೆ. ಈ ವಿದ್ಯಾದೇಗುಲದಲ್ಲಿ ವಿದ್ಯಾರ್ಥಿಗಳು ವಿದ್ಯೆ, ಸದ್ಗುಣ ಹಾಗೂ ವ್ಯಕ್ತಿತ್ವವನ್ನು ಬೆಳೆಸಿ ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬೆಳೆಯಬೇಕು ಜೊತೆಗೆ ಬದುಕಿನುದ್ದಕ್ಕೂ ಸವಾಲುಗಳನ್ನು ಮೆಟ್ಟಿ ನಿಲ್ಲುವ ಶಿಕ್ಷಣವನ್ನು ನಾವು ಹೊಂದುವಂತಾಗಬೇಕು ಎಂದು ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಹೇಳಿದರು.
ಜ.23 ರಂದು ಪಂಜಳದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರು ಧರ್ಮಪ್ರಾಂತ್ಯದ ಶಾಂತಿಗಿರಿ ವಿದ್ಯಾನಿಕೇತನ್ ಶಾಲೆಯ ವಾರ್ಷಿಕೋತ್ಸವದ ಸಂದರ್ಭದಲ್ಲಿ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಗವಂತ ಹಾಗೂ ವಿದ್ಯಾರ್ಥಿಗಳ ನಡುವೆ ಶಿಕ್ಷಕರು ಕೊಂಡಿಯಾಗಿ ಶಿಕ್ಷಣದ ಧಾರೆಯೆರೆಯುತ್ತಾರೆ. ವಿದ್ಯಾರ್ಥಿಗಳಲ್ಲಿ ಕೇವಲ ಬುದ್ಧಿವಂತಿಕೆ ಮಾತ್ರ ಇದ್ದರೆ ಸಾಧ್ಯವಿಲ್ಲ, ಹೃದಯವಂತಿಕೆಯನ್ನೂ ಕೂಡ ಬೆಳೆಸಿಕೊಂಡಾಗ ಸಮಾಜವು ಸದೃಢವೆನಿಸಿಕೊಳ್ಳುತ್ತದೆ ಎಂದರು.
ವಿದ್ಯಾರ್ಥಿಶಕ್ತಿಯಾಗಿ, ವಿದ್ಯಾರ್ಥಿಸ್ನೇಹಿಯಾಗಿದೆ ಸಂಸ್ಥೆ-ಡಾ.ಎಲ್ದೊ ಪುತ್ತನಕಂಡತ್ತಿಲ್:
ವಿಕಾರ್ ಜನರಲ್ ಅತಿ.ವಂ.ಡಾ.ಎಲ್ದೊ ಪುತ್ತನಕಂಡತ್ತೀಲ್ ಕೊರೆಪಿಸ್ಕೊಪೊ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿನ ಈ ಶಾಂತಿಗಿರಿ ವಿದ್ಯಾಲಯವು ಸರಳತೆಯನ್ನು ಮೈಗೂಡಿಸಿಕೊಂಡು ಮೌಲ್ಯಯುತ ಶಿಕ್ಷಣವನ್ನು ನೀಡುವ ಮೂಲಕ ಸಮಾಜಸೇವೆಯೊಂದಿಗೆ ಪ್ರಗತಿಪಥದತ್ತ ಸಾಗುತ್ತಿದೆ ಮಾತ್ರವಲ್ಲ ವಿದ್ಯಾರ್ಥಿಶಕ್ತಿಯಾಗಿ, ವಿದ್ಯಾರ್ಥಿಸ್ನೇಹಿಯಾಗಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಯಾವುದೇ ಶಿಕ್ಷಣ ಸಂಸ್ಥೆ ಯಶಸ್ವಿಯಾಗಬೇಕಾದರೆ ಅಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು, ಆಡಳಿತ ಮಂಡಳಿ, ಪೋಷಕರು, ಸರಕಾರಿ ಇಲಾಖೆ, ಸಾರ್ವಜನಿಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.
ಶುಭ್ರ ಹೃದಯವಿದ್ದಲ್ಲಿ ಶುಭ್ರ ನಾಡು-ಪರಮೇಶ್ವರಿ ಪ್ರಸಾದ್:
ನರಿಮೊಗರು ಕ್ಲಸ್ಟರ್ ಸಿ.ಆರ್.ಪಿ ಶ್ರೀಮತಿ ಪರಮೇಶ್ವರಿ ಪ್ರಸಾದ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಈ ಶಾಲೆ ಪ್ರಸ್ತುತ ಪ್ರಗತಿಪಥದತ್ತ ದಾಪುಗಾಲಿಡುತ್ತಿರುವುದಕ್ಕೆ ಕಾರಣ ಈ ಸಂಸ್ಥೆಯಲ್ಲಿನ ಸಕರಾತ್ಮಕ ಶಿಕ್ಷಣವಾಗಿದೆ. ಜೊತೆಗೆ ಇಲ್ಲಿನ ಕ್ಯಾಂಪಸ್ ಸ್ವಚ್ಛತೆಗೆ ಆದ್ಯತೆ ನೀಡುವ ಮೂಲಕ ಪರಿಸರ ಪ್ರೇಮವನ್ನು ತೋರಿಸುತ್ತದೆ. ಒಂದು ವೃಕ್ಷವು ಬೆಳೆದು ಅದು ಸಾವಿರ ಜನರಿಗೆ ಕಲ್ಪವೃಕ್ಷವಾಗುತ್ತದೆಯೋ ಹಾಗೆಯೇ ವಿದ್ಯಾಸಂಸ್ಥೆಗಳು ಕೂಡ ವಿದ್ಯಾರ್ಥಿಗಳಿಗೆ ಒಳ್ಳೆಯ ವಿದ್ಯಾಭ್ಯಾಸ ನೀಡುತ್ತಾ ಅವರನ್ನು ಸಮಾಜದ ಉತ್ತಮ ಪ್ರಜೆಯನ್ನಾಗಿ ಮಾಡುತ್ತದೆ. ಎಲ್ಲಿ ಶುಭ್ರ ಹೃದಯವಿದೆಯೋ ಅಲ್ಲಿ ಶುಭ್ರ ನಾಡನ್ನು ಕಟ್ಟಲು ಸಾಧ್ಯವಾಗುತ್ತದೆ ಎಂದರು.
ಸಕರಾತ್ಮಕ ಯೋಚನೆಯಿದ್ದಾಗ ಸದೃಢ ಸಮಾಜ, ಆರೋಗ್ಯ-ಮಾಮಚ್ಚನ್ ಎಂ:
ಕಷ್ಟದ ಹುದ್ದೆಯೆಂದರೆ ಅದು ಶಿಕ್ಷಕ ಹುದ್ದೆ ಹಾಗೂ ಪೊಲೀಸ್ ಹುದ್ದೆ. ಯಾವುದೇ ನಾಗರಿಕ ಅಥವಾ ವಿದ್ಯಾರ್ಥಿ ತಪ್ಪೆಸಗಿದರೆ ಅವರನ್ನು ಸಕರಾತ್ಮಕ ದೃಷ್ಟಿಕೋನದಿಂದ ತಿದ್ದುವತ್ತ ಸರಿ ದಾರಿಗೆ ತಂದರೆ ಸಮಾಜ ಬೇರೆಯೇ ದೃಷ್ಟಿಯಿಂದ ನೋಡುತ್ತಿರುವುದು ಇಂದಿನ ವಾಸ್ತವತೆ. ಶೈಕ್ಷಣಿಕವಾಗಿ ಪೋಷಕರು ಹಾಗೂ ಶಿಕ್ಷಕರು ಒಂದೇ ದಾರಿಯಲ್ಲಿ ಯೋಚನೆ ಮಾಡಿದಾಗ ಶಿಕ್ಷಣವು ಸಮರ್ಪಕ ದಾರಿಯಲ್ಲಿ ಸಾಗುವಂತಾಗಬಹುದು ಮಾತ್ರವಲ್ಲ ಸದೃಢ ಆರೋಗ್ಯದೊಂದಿಗೆ ಸದೃಢ ಸಮಾಜದ ನಿರ್ಮಾಣವಾಗಬಲ್ಲುದು ಎಂದರು.
ಶಿಸ್ತು ಮೈಗೂಡಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಿ-ರತ್ನಾಕರ್ ರೈ:
ಶಾಲಾ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷ ರತ್ನಾಕರ್ ರೈ ಮಾತನಾಡಿ, ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು, ಸಾರ್ವಜನಿಕರ ಒಗ್ಗೂಡುವಿಕೆಯೊಂದಿಗೆ ವಾರ್ಷಿಕ ಹಬ್ಬದ ಸಂಭ್ರಮ ದ್ವಿಗುಣಗೊಳ್ಳುತ್ತದೆ. ಶಾಲೆಯಲ್ಲಿ ಎಲ್ಲಾ ತರಹದ ವಿದ್ಯಾರ್ಥಿಗಳಿದ್ದು ಯಾವುದೇ ತಾರತಾಮ್ಯವಿಲ್ಲದೆ ಶಿಕ್ಷಕರು ಶಿಕ್ಷಣ ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಿ ಹೊರ ಹೊಮ್ಮಿ ಎಂದರು.
ಜೋಸ್ ಅಲುಕ್ಕಾಸ್ ಮ್ಯಾನೇಜರ್ ರತೀಶ್ ಸಿ.ಪಿ, ಶಾಲಾ ನಾಯಕ ಮೊಹಮದ್ ಶಹೀಮ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಅಶ್ವತಿ ಅರವಿಂದ್ ಶಾಲಾ ವಾರ್ಷಿಕ ವರದಿ ಮಂಡಿಸಿದರು. ಶಾಲಾ ಸಂಚಾಲಕ ವಂ|ಬಿಜು ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಪುನೀತಾ ವಂದಿಸಿದರು. ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳನ್ನು ಏರ್ಪಡಿಸಿದ್ದು, ಈ ಚಟುವಟಿಕೆಯ ಸ್ಪೆಷಲ್ ಅಚೀವರ್ಸ್ ಹೆಸರನ್ನು ಹಾಗೂ ಕ್ರೀಡಾ ಚಾಂಪಿಯನ್ಸ್ ಹೆಸರನ್ನು ಶಿಕ್ಷಕಿಯರಾದ ವಿನುತಾ ಹಾಗೂ ರಾಜೀವಿ ಓದಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಶಿಕ್ಷಕಿಯರಾದ ಅಕ್ಷತಾ ಎನ್ ಹಾಗೂ ಕಾವ್ಯ ಪಿ.ಎಚ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿದ್ದು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಶಿಕ್ಷಕಿ ದೀಕ್ಷಿತಾ ವಂದಿಸಿದರು.
ಸನ್ಮಾನ/ಗೌರವ..
ಸಂಸ್ಥೆಯ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಪುತ್ತೂರು ಮಲಂಕರ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ.ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್, ವಿಕಾರ್ ಜನರಲ್ ಅತಿ.ವಂ.ಡಾ.ಎಲ್ದೊ ಪುತ್ತನಕಂಡತ್ತಿಲ್ ಕೊರೆಪಿಸ್ಕೊಪೊ, ಬಾಲ್ಯದಲ್ಲಿ ಕ್ರೀಡಾಪಟುವಾಗಿ ಪ್ರಸ್ತುತ ಪೊಲೀಸ್ ಇಲಾಖೆಯಲ್ಲಿ ವೃತ್ತ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುವ ಜಾನ್ಸನ್ ಕಿರಣ್ ಡಿ’ಸೋಜ, ಸಂಸ್ಥೆಗೆ ನೆರವಿನ ಹಸ್ತ ಚಾಚುತ್ತಿರುವ ಜೋಸ್ ಆಲುಕ್ಕಾಸ್ ಮ್ಯಾನೇಜರ್ ರತೀಶ್ ಸಿ.ಪಿ, ಸದಾ ಸಹಕಾರ ನೀಡುತ್ತಿರುವ ನರಿಮೊಗರು ಕ್ಲಸ್ಟರ್ ಸಿ.ಆರ್.ಪಿ ಪರಮೇಶ್ವರಿ ಪ್ರಸಾದ್, ಕರ್ನಾಟಕ ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ಮಾಮಚ್ಚನ್ ಎಂ., ಪೊಲೀಸ್ ಸ್ಕರಿಯರವರುಗಳನ್ನು ಶಾಲು ಹೊದಿಸುವ ಮೂಲಕ ಗೌರವಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳು ಪೋಷಕರ ಕನಸುಗಳನ್ನು ನಿರಾಶೆಗೊಳಿಸದಿರಿ..
ಪ್ರಸ್ತುತ ವಿದ್ಯಾಮಾನದಲ್ಲಿ ಅದೆಷ್ಟೋ ವಿದ್ಯಾರ್ಥಿಗಳು ದುಶ್ಚಟಗಳಿಗೆ ದಾಸನಾಗಿ ತನ್ನ ಸುಂದರ ಜೀವನವನ್ನು ಕಳೆದುಕೊಳ್ಳುತ್ತಿರುವುದು ಖೇದಕರವಾಗಿದೆ. ಜೊತೆಗೆ ವಿದ್ಯಾರ್ಥಿಗಳು ಕ್ರಿಮಿನಲ್ ಚಟುವಟಿಕೆಗಳಲ್ಲಿ ಭಾಗಿಯಾಗಿ ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುವ ಮೂಲಕ ಪೋಷಕರಿಗೆ ಮುಜುಗರವನ್ನು ತಂದೊಡ್ಡುತ್ತಿದ್ದಾರೆ. ವಿದ್ಯಾರ್ಥಿಗಳು ಅನಗತ್ಯ ಚಟುವಟಿಕೆಗಳಲ್ಲಿ ಭಾಗಿಯಾಗದೆ ತಮ್ಮ ಭವಿಷ್ಯವನ್ನು ಉಜ್ವಲಗೊಳಿಸುವ ಚಟುವಟಿಕೆಗಳಲ್ಲಿ ಭಾಗವಹಿಸಿ. ವಿದ್ಯಾರ್ಥಿಗಳ ಪೋಷಕರು ತಮ್ಮ ಮಕ್ಕಳಲ್ಲಿ ಅದಮ್ಯ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ, ಅವನ್ನು ನಿರಾಶಗೊಳಿಸಬೇಡಿ, ಸಾಕಾರಗೊಳಿಸಿ.
-ಜಾನ್ಸನ್ ಡಿ’ಸೋಜ, ವೃತ್ತ ನಿರೀಕ್ಷಕರು, ಪುತ್ತೂರು ಪೊಲೀಸ್ ಠಾಣೆ