350ಕೋ.ರೂ ಅನುದಾನ ನೀಡುವಂತೆ ಮನವಿ
ಪುತ್ತೂರು: ಉಪ್ಪಿನಂಗಡಿ ಗ್ರಾ.ಪಂ ವ್ಯಾಪ್ತಿಗೊಳಪಟ್ಟ ಕುಮಾರಧಾರ ಮತ್ತು ನೇತ್ರಾವತಿ ನದಿಗಳ ಸಂಗಮ ಪ್ರದೇಶದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವಲ್ಲಿ ಅನುದಾನ ಬಿಡುಗಡೆ ಮಾಡುವಂತೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕುಮಾರಧಾರ ಮತ್ತು ನೇತ್ರಾವತಿ ಸಂಗಮ ಕ್ಷೇತ್ರದಲ್ಲಿ ದಕ್ಷಿಣ ಕಾಶಿ ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನವಿದ್ದು, ಕಿಂಡಿ ಅಣೆಕಟ್ಟು ನಿರ್ಮಾಣವಾದಲ್ಲಿ ಸ್ಥಳೀಯ ಕೃಷಿಕರಿಗೆ ನೀರಾವರಿ ಸೌಲಭ್ಯದ ಜೊತೆಗೆ ಕ್ಷೇತ್ರಕ್ಕೂ ಪ್ರವಾಸೋಧ್ಯಮದ ಮೆರುಗನ್ನು ನೀಡಲಿದೆ. ಇಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಬೇಕೆಂಬುದು ಇಲ್ಲಿನ ಜನತೆಯ ಬಹುವರ್ಷಗಳ ಬೇಡಿಕೆಯೂ ಆಗಿದೆ. ಇಲ್ಲಿನ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವಲ್ಲಿ ಈಗಾಗಲೇ ಡಿಪಿಆರ್ ಸಿದ್ಧಪಡಿಸಲಾಗಿದ್ದು ಸುಮಾರು 350 ಕೋಟಿ ರೂ ಅನುದಾನದ ಅಗತ್ಯವಿದೆ ಎಂದು ಶಾಸಕರು ಮನವಿಯಲ್ಲಿ ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ವೆಂಕಟೇಶ್ ಪ್ರಸಾದ್ ಅವರ ಜೊತೆ ಶಾಸಕರು ಮಾತುಕತೆ ನಡೆಸಿದ್ದಾರೆ.
ಉದ್ದೇಶಿತ ಸ್ಥಳದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣವಾದಲ್ಲಿ ಉಪ್ಪಿನಂಗಡಿ ಪ್ರವಾಸೋದ್ಯಮ ಕೇಂದ್ರವಾಗುವುದರಲ್ಲಿ ಅನುಮಾನವೇ ಇಲ್ಲ. ಉಪ್ಪಿನಂಗಡಿ ದೇವಸ್ಥಾನದ ಸುತ್ತ ಅತ್ಯಂತ ಸುಂದರ ತಾಣ ನಿರ್ಮಾಣವಾಗಲಿದೆ. ಸಂಗಮ ಭಾಗದಲ್ಲಿಯೇ ಇದು ನಿರ್ಮಾಣವಾಗುವುದರಿಂದ ಕ್ರಿಕೆಟಿಕರಿಗೂ ಪ್ರಯೋಜನವಾಗಲಿದೆ. ಇಲ್ಲಿನ ಕಿಂಡಿ ಅಣೆಕಟ್ಟು ನಿರ್ಮಾಣ ಯೋಜನೆ ನನ್ನ ಕನಸಾಗಿದ್ದು ಅದನ್ನು ನನಸ ಮಾಡಿಸುವಲ್ಲಿ ಈಗಾಗಲೇ ಎರಡು ಹೆಜ್ಜೆ ಮುಂದಿಟ್ಟಿದ್ದೇವೆ. ಸುಮಾರು 350 ಕೋಟಿ ರೂ ಯೋಜನೆ ಇದಾಗಿದ್ದು, ಈಗಾಗಲೇ ಉಪಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದೇನೆ, ನೀರಾವರಿ ನಿಗಮದ ಮುಖ್ಯ ಇಂಜನಿಯರ್ ಜೊತೆಯೂ ಮಾತನಾಡಿದ್ದೇನೆ. ಅನುದಾನ ಸಿಗುತ್ತದೆ ಎಂಬ ಸಂಪೂರ್ಣ ಭರವಸೆ ಇದೆ.
ಶಾಸಕ ಅಶೋಕ್ ರೈ