ಪುತ್ತೂರು: ಮುಕ್ವೆ ಮಖಾಂ ಉರೂಸ್ ಕಾರ್ಯಕ್ರಮದ ಐದನೇ ದಿನವಾದ ಜ.23ರಂದು ವಲಿಯುದ್ದೀನ್ ಫೈಝಿ ವಾಝಕ್ಕಾಡ್ ನೇತೃತ್ವದಲ್ಲಿ ನೂರೇ ಆಜ್ಮೀರ್ ಆಧ್ಯಾತ್ಮಿಕ ಸಂಗಮ ನಡೆಯಿತು.
ನೂರೇ ಅಜ್ಮೀರ್ ಮಜ್ಲಿಸ್ಗೆ ನೇತೃತ್ವ ನೀಡಿದ ವಲಿಯುದ್ದೀನ್ ಫೈಝಿ ಮಾತನಾಡಿ ನಾವು ಪ್ರತಿನಿತ್ಯ ದಿಕ್ರ್, ಸ್ವಲಾತ್ಗಳ ಮೂಲಕ ನಮ್ಮ ಹೃದಯವನ್ನು ಶುದ್ದಿಗೊಳಿಸುತ್ತಿರಬೇಕು, ದಿಕ್ರ್ ಮಜ್ಲಿಸ್ಗಳಲ್ಲಿ ಭಾಗವಹಿಸುವುದರಿಂದ ಅನೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುವುದಲ್ಲದೇ ಮಾನಸಿಕ ನೆಮ್ಮದಿಯೂ ಸಿಗುತ್ತದೆ ಎಂದು ಹೇಳಿದರು. ಕ್ಷಣಿಕವಾದ ಈ ಭೂಮಿ ಮೇಲಿನ ಜೀವನವನ್ನು ಅಲ್ಲಾಹು ಇಷ್ಟಪಡುವ ಕ್ಷೇತ್ರಗಳಲ್ಲಿ ವಿನಿಯೋಗಿಸಬೇಕು, ಇಸ್ಲಾಂ ಧರ್ಮ ಆಜ್ಞಾಪಿಸಿದ ರೀತಿಯಲ್ಲಿ ಜೀವನ ನಡೆಸುವ ಮೂಲಕ ನೈಜ ಸತ್ಯವಿಶ್ವಾಸಿಯಾಗಬೇಕು ಎಂದು ಅವರು ಹೇಳಿದರು. ಮುಕ್ವೆ ಮಸೀದಿಯ ಅಧ್ಯಕ್ಷ ಇಬ್ರಾಹಿಂ ಮುಲಾರ್ ಅಧ್ಯಕ್ಷತೆ ವಹಿಸಿದ್ದರು.
ಉಸ್ಮಾನ್ ಫೈಝಿ ತೋಡಾರ್ ದುವಾ ನಿರ್ವಹಿಸಿದರು. ಸ್ಥಳೀಯ ಖತೀಬ್ ಇರ್ಷಾದ್ ಫೈಝಿ ಪಾಲ್ತಾಡ್ ಸ್ವಾಗತಿಸಿ ಪ್ರಸ್ತಾವನೆಗೈದರು. ಹಲವು ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಾನಾ ಭಾಗಗಳಿಂದ ಸಾವಿರಾರು ಮಂದಿ ಭಾಗವಹಿಸಿದ್ದರು.