ಪರಸ್ಪರ ಗೌರವಿಸುವುದರಿಂದ ದೇಶದಲ್ಲಿ ಸೌಹಾರ್ದತೆ ನೆಲೆ ನಿಲ್ಲಲು ಸಾಧ್ಯ-ನಿಕೇತ್‌ರಾಜ್
ಪುತ್ತೂರು: ಪರಸ್ಪರ ಪ್ರೀತಿ ಸೌಹಾರ್ದತೆಯ ಬದುಕು ಮಾಡಲು ಎಲ್ಲ ಧರ್ಮಗಳು ಕಲಿಸಿಕೊಟ್ಟಿದ್ದು ಅಂತಹ ಜೀವನ ನಡೆಸಲು ಪ್ರತಿಯೊಬ್ಬರೂ ಮನಸ್ಸು ಮಾಡಬೇಕು, ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ಮಾನವ ಸರಪಳಿಯಂತಹ ಕಾರ್ಯಕ್ರಮಗಳ ಮೂಲಕ ಸೌಹಾರ್ದ ಸಮಾಜ ನಿರ್ಮಿಸಲು ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಖ್ಯಾತ ವಾಗ್ಮಿ ನಿಕೇತ್‌ರಾಜ್ ಮೌರ್ಯ ಹೇಳಿದರು.
ಅವರು ಎಸ್ಕೆಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾ ಸಮಿತಿ ವತಿಯಿಂದ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದೊಂದಿಗೆ ಜ.26ರಂದು ಕುಂಬ್ರದಲ್ಲಿ ಹಮ್ಮಿಕೊಂಡ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು.
ದೇಶವು ಸ್ವತಂತ್ರಪೂರ್ವ ಕೇವಲ ರಾಜರುಗಳ ದೇಶವಾಗಿತ್ತು, ಸ್ವಾತಂತ್ರ್ಯದ ಬಳಿಕ ಭಾರತವು ದೇಶದ ಪ್ರತಿಯೊಬ್ಬ ನಾಗರಿಕನ ದೇಶವಾಗಿ ಮಾರ್ಪಟ್ಟಿತು, ನಾವೆಲ್ಲರೂ ಮನುಷ್ಯ-ಮನುಷ್ಯರ ಮನಸ್ಸುಗಳನ್ನು ಬೆಸೆಯುವಂತಹ ಕೆಲಸ ಕಾರ್ಯಗಳನ್ನು ಮಾಡಬೇಕು, ರಾಮ-ರಹೀಮರು ಒಂದೇ ತಾಯಿಯ ಮಕ್ಕಳಂತೆ ಈ ದೇಶದಲ್ಲಿ ಬದುಕಬೇಕು, ಯುವ ಮನಸ್ಸುಗಳನ್ನು ಜೋಡಿಸುವ ಮತ್ತು ಇತರ ಧರ್ಮವನ್ನು ಪ್ರೀತಿಸುವ ಮತ್ತು ಆರಾಧನೆಯನ್ನು ಗೌರವಿಸುವ ಮನಸ್ಸು ಉಂಟಾದರೆ ಈ ದೇಶದಲ್ಲಿ ಸೌಹಾರ್ದತೆ ನೆಲೆ ನಿಲ್ಲಲು ಸಾಧ್ಯ ಎಂದು ಅವರು ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಸಂಘಟನೆ ಬಹಳ ವಿಶಾಲವಾದ ಮತ್ತು ಜವಾಬ್ದಾರಿಯುತ ಸಂಘಟನೆಯಾಗಿದ್ದು ದೇಶದಲ್ಲಿ ಐಕ್ಯತೆ ಮತ್ತು ಸೌಹಾರ್ದತೆಯನ್ನು ಮೂಡಿಸುವ ಕೆಲಸವನ್ನು ನಿರಂತರ ಮಾಡುತ್ತಾ ಬಂದಿದೆ ಇದು ಶ್ಲಾಘನೀಯ ಎಂದು ಅವರು ಹೇಳಿದರು.
ಎಲ್ಲರಿಗೆ ಸಮಾನ ಅವಕಾಶ ನೀಡಿರುವ ಸಂವಿಧಾನ ಶ್ರೇಷ್ಠ ಗ್ರಂಥ-ಬಂಬ್ರಾಣ:
ಉದ್ಘಾಟಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯರಾದ ಅಬ್ದುಲ್ ಖಾದರ್ ಅಲ್ ಖಾಸಿಮಿ ಮಾತನಾಡಿ, ನಮ್ಮ ಸಂವಿಧಾನದಲ್ಲಿ ದೇಶದ ನಾಗರಿಕರು ಸಮಾನರು ಮತ್ತು ಅವರವರ ಧರ್ಮದ ಅನುಷ್ಠಾನ ಮತ್ತು ಆಚರಣೆ ಅವರಿಗೆ ಸಂವಿಧಾನ ನೀಡಿದೆ, ಬೇರೆ ಬೇರೆ ರಾಷ್ಟ್ರಗಳ ಕಾನೂನು ಪಾಲನೆ, ನಿಯಮಗಳಲ್ಲಿ ಧರ್ಮ ಗ್ರಂಥಗಳನ್ನು ಆಧರಿಸಿ ಮಾಡುತ್ತಾರೆ, ಆದರೆ ನಮ್ಮ ದೇಶದ ಸಂವಿಧಾನವು ಎಲ್ಲಾ ನಾಗರಿಕರಿಗೆ ಅನ್ವಯಿಸುವ ರೀತಿಯಲ್ಲಿ ಮಾಡಿರುವುದು ನಮ್ಮ ಸಂವಿಧಾನದ ಶ್ರೇಷ್ಠತೆಯಾಗಿದೆ, ಇದನ್ನು ಗೌರವಿಸುವ ಜೊತೆಗೆ ಪಾಲನೆಯು ಕೂಡಾ ನಮ್ಮಿಂದ ಆಗಬೇಕಾಗಿದೆ ಎಂದು ಹೇಳಿದರು.
ಎಸ್ಕೆಎಸ್ಸೆಸ್ಸೆ- ಸಮಾಜವನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತಿದೆ-ಅಶೋಕ್ ರೈ:
ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ಸಮಾಜದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ರಕ್ತದಾನ ಶಿಬಿರ, ಮಾದಕ ವ್ಯಸನಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯವನ್ನು ಮಾಡುವ ಶಿಸ್ತುಬದ್ದ ಸಂಘಟನೆಯಾಗಿದೆ, ಇಂತಹ ಸಂಘಟನೆಗಳು ಸಮಾಜಕ್ಕೆ ಮಾದರಿ ಮತ್ತು ಸೌಹಾರ್ದತೆಯನ್ನು ತೋರಿಸಿಕೊಡುತ್ತಿದೆ ಎಂದು ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಎಲ್ಲಾ ಕಾರ್ಯಕ್ರಮಗಳು ನಮ್ಮದೇ ಎನ್ನುವ ಮನಸ್ಥಿತಿ ಎಲ್ಲರಲ್ಲೂ ಬರಬೇಕು, ಹಾಗಿದ್ದಲ್ಲಿ ಮಾತ್ರ ಸಮಾಜದಲ್ಲಿ ಶಾಂತಿ ನೆಲೆಗೊಳ್ಳಲು ಸಾಧ್ಯ ಎಂದು ಅವರು ಹೇಳಿದರು.
ಎಲ್ಲರನ್ನು ಗೌರವಿಸುವವರು ನಾವಾಗಬೇಕು-ಡಾ.ಆಂಟನಿ ಪ್ರಕಾಶ್ :
ಪುತ್ತೂರು ಸಂತ ಪೀಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ.ಆಂಟನಿ ಪ್ರಕಾಶ್ ಮೊಂತೆರೋ ಮಾತನಾಡಿ ಮನುಷ್ಯರು ‘ನಾನು’ ಎಂದು ಆಗಬೇಕಾದರೆ ಮೊದಲು ‘ನಾವು’ಗಳು ಆಗಬೇಕು, ಸಮಾಜದಲ್ಲಿ ನಾವು ಬೆಳೆಯಬೇಕು, ಸ್ವಾರ್ಥಮಯ ಜೀವನವನ್ನು ನಾವು ಬಿಡಬೇಕು, ಮೊದಲು ನಾವು ಮಾನವರಾದರೆ ಮಾತ್ರ ಇತರರನ್ನು ನಾವು ಗೌರವಿಸಲು ಮತ್ತು ಪ್ರೀತಿಸಲು ಸಾಧ್ಯ ಎಂದು ಅವರು ಹೇಳಿದರು. ನಮ್ಮ ಜವಾಬ್ದಾರಿಯನ್ನು ಪರಿಪೂರ್ಣವಾಗಿ ನಾವು ಮಾಡಿದಾಗ ಮಾತ್ರ ಆ ಕೆಲಸಕ್ಕೆ ಶಕ್ತಿ ಇರುತ್ತದೆ, ದೇಶದ ಸ್ವಾತಂತ್ರ್ಯಕ್ಕೆ ಬೇಕಾಗಿ ಪ್ರತಿಯೊಂದು ಧರ್ಮದವರು ತ್ಯಾಗ ಬಲಿದಾನವನ್ನು ಮಾಡಿದ್ದಾರೆ ಎಂದರು. ನಮ್ಮ ಸಂಸ್ಥೆಯಲ್ಲಿ ಕಲಿಯುವ ವಿದ್ಯಾರ್ಥಿಗಳು ಕಾಲೇಜಿನ ಒಳಗೆ ಸಂಸ್ಥೆಯ ವಿದ್ಯಾರ್ಥಿಗಳಾಗಿ ಗುರುತಿಸಿಕೊಳ್ಳಬೇಕು, ಅಲ್ಲಿಂದ ಹೊರ ಬಂದಾಗ ದೇಶದ ಒಬ್ಬ ನಾಗರಿಕನಾಗಿ ಸಮಾಜದಲ್ಲಿ ಗುರುತಿಸಿಕೊಳ್ಳಬೇಕು, ಇದು ನಮ್ಮ ಆಧ್ಯತೆಯಾಗಿದೆ ಎಂದು ಹೇಳಿದರು.
ನಾಡಿನ ಸೌಹಾರ್ದತೆಗೆ ಎಸ್ಕೆಎಸ್ಸೆಸ್ಸೆಫ್ ಕೊಡುಗೆ ನೀಡುತ್ತಿದೆ-ಅನೀಸ್ ಕೌಸರಿ:
ಎಸ್ಕೆಎಸ್ಸೆಸ್ಸೆಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮೌಲಾನಾ ಅನೀಸ್ ಕೌಸರಿ ಮಾತನಾಡಿ ದೇಶವು ಒಂದು ಹೂದೋಟವಿದ್ದಂತೆ, ಇಲ್ಲಿ ಹಲವಾರು ಹೂವುಗಳು ಅದರದೇ ಆದ ಸುಗಂಧವನ್ನು ಬೀರುತ್ತದೆ, ನಾವು ಭಾರತೀಯರು ದೇಶದ ಸೌಹಾರ್ದತೆಗಾಗಿ ಮತ್ತು ಐಕ್ಯತೆಗಾಗಿ ಒಂದು ತೋಟದ ಹೂವುಗಳಂತೆ ಸದಾ ಬೆಸೆಯುತ್ತಿರಬೇಕು, ಈ ಒಂದು ಕಾರ್ಯಗಳನ್ನು ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ಬಹಳ ಹಿಂದಿನಿಂದಲೇ ಮಾಡುತ್ತಾ ಬರುತ್ತಿದೆ, ಮಾನವ ಸರಪಳಿ ಕಾರ್ಯಕ್ರಮ ಕೂಡಾ ಅದರ ಒಂದು ಭಾಗವಾಗಿದ್ದು ಆ ಮೂಲಕ ನಾಡಿನಲ್ಲಿ ಸೌಹಾರ್ದತೆಯನ್ನು ಉಳಿಸುವ ಮತ್ತು ಬೆಳೆಸುವ ಕೆಲಸವನ್ನು ಮಾಡುತ್ತಿದೆ ಎಂದು ಹೇಳಿದರು.
ಸ್ವಾರ್ಥಕ್ಕಾಗಿ ಧರ್ಮಗಳ ನಡುವೆ ಕಂದಕ ಸೃಷ್ಟಿಸಲಾಗುತ್ತದೆ -ಪಂಜಿಗುಡ್ಡೆ ಈಶ್ವರ ಭಟ್:
ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮಾತನಾಡಿ ಎಲ್ಲಾ ಧರ್ಮಗಳು ಪರಸ್ಪರ ಸೌಹಾರ್ದತೆಯನ್ನು ಕಲಿಸುತ್ತದೆ, ನಮ್ಮ-ನಮ್ಮ ಧರ್ಮದ ಬಗ್ಗೆ ಅರಿವು ಮೂಡಿಸುವ ಕಾರ್ಯಗಳು ನಮ್ಮಿಂದ ಆಗಬೇಕು, ನನ್ನ ಬಾಲ್ಯ ಜೀವನವನ್ನು ಓರ್ವ ಮುಸಲ್ಮಾನ ಬಾಂಧವರ ಜೊತೆಯಲ್ಲಿ ಕಳೆದಿದ್ದೇವೆ, ಅಂತಹ ವ್ಯಕ್ತಿ ಪವಿತ್ರ ಹಜ್ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಅವರನ್ನು ಪ್ರೋತ್ಸಾಹಿಸುವ ಕೆಲಸ ನಾವು ಮಾಡಿದ್ದೇವೆ, ಇದನ್ನು ನಮ್ಮ ಹಿರಿಯರಿಂದ ನಾವು ಕಲಿತಿದ್ದೇವೆ ಎಂದು ಹೇಳಿದರು. ಕೆಲವು ರಾಜಕೀಯ ನಾಯಕರು ಸ್ವಾರ್ಥ ಹಿತಾಸಕ್ತಿಗಾಗಿ ಧರ್ಮ-ಧರ್ಮಗಳ ನಡುವೆ ಕಂದಕ ಸೃಷ್ಟಿಸುವ ಕೆಲಸ ಮಾಡಿಸುತ್ತಾರೆ, ಅತ್ತ ನಾವು ಗಮನ ಹರಿಸದೇ ನಮ್ಮ ಸಮಾಜದ ಸೌಹಾರ್ದತೆಗಾಗಿ ನಾವು ಮುಂದುವರಿಯಬೇಕು ಎಂದು ಅವರು ಹೇಳಿದರು.
ಎಸ್ಕೆಎಸ್ಸೆಸ್ಸೆಫ್ ಶಿಸ್ತುಬದ್ದ ಸಂಘಟನೆ-ಎಂ.ಎಸ್ ಮುಹಮ್ಮದ್:
ಜಿ.ಪಂ ಮಾಜಿ ಉಪಾಧ್ಯಕ್ಷ ಎಂ.ಎಸ್ ಮುಹಮ್ಮದ್ ಮಾತನಾಡಿ ಎಸ್ಕೆಎಸ್ಸೆಸ್ಸೆಫ್ ಸಂಘಟನೆ ಒಂದು ಶಿಸ್ತುಬದ್ದ ಸಂಘಟನೆಯಾಗಿದ್ದು ದೇಶಕ್ಕೆ ಶಾಂತಿ ಮತ್ತು ಸೌಹಾರ್ದತೆಯನ್ನು ಸಾರುವ ಅನೇಕ ಉಲಮಾ ಉಮರಾ ಮುಖಂಡರು ಈ ಸಂಘಟನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ, ಅವರೆಲ್ಲರ ಕೆಲಸ ಕಾರ್ಯಗಳು ಸಮಾಜವನ್ನು ಒಂದುಗೂಡಿಸುವ ದಿಕ್ಕಿಗೆ ಕೊಂಡೊಯುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾನವ ಸರಪಳಿ ಮೂಲಕ ಉತ್ತಮ ಸಂದೇಶ-ಬಡಗನ್ನೂರು:
ತಾಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಮಾತನಾಡಿ ಮಾನವ ಸರಪಳಿಯಂತಹ ಮಾದರಿ ಕಾರ್ಯಕ್ರಮವನ್ನು ಎಸ್ಕೆಎಸ್ಸೆಸ್ಸೆಫ್ ಸಂಘಟನೆ ಆಯೋಜಿಸಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ, ಇಂತಹ ಕಾರ್ಯಕ್ರಮಗಳು ಮುಂದಕ್ಕೂ ನಡೆಯಬೇಕು, ಅದಕ್ಕೆ ನಮ್ಮ ಸಹಕಾರ ಸದಾ ಇದೆ ಎಂದು ಹೇಳಿದರು. ಕುಂಬ್ರ ಕೆಐಸಿ ಪ್ರಾಂಶುಪಾಲ ಅಬೂಬಕ್ಕರ್ ಮದನಿ ದುವಾ ನೆರವೇರಿಸಿದರು. ಮಾನವ ಸರಪಳಿ ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಕೆ.ಎಚ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಜ್ಞಾ ವಿಧಿ ಬೋಧನೆ:
ಎಸ್ಕೆಎಸ್ಸೆಸ್ಸೆಫ್ ದ.ಕ ಈಸ್ಟ್ ಜಿಲ್ಲಾಧ್ಯಕ್ಷ ಮಹಮ್ಮದ್ ನವವಿ ಮುಂಡೋಳೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರತಿಜ್ಞಾ ವಿಧಿ ಬೋಧಿಸಿದರು. ಈ ಸಂದರ್ಭದಲ್ಲಿ ವೇದಿಕೆ ಮೇಲಿದ್ದ ಮುಖಂಡರುಗಳು ಹಾಗೂ ಸಭೆಯಲ್ಲಿದ್ದ ಸಾವಿರಾರು ಮಂದಿ ತಮ್ಮ ಕೈಗಳನ್ನು ಪರಸ್ಪರ ಹಿಡಿದುಕೊಂಡು ಪ್ರತಿಜ್ಞಾ ವಿಧಿ ಸ್ವೀಕರಿಸಿದರು.
ವೇದಿಕೆಯಲ್ಲಿ ಪ್ರಮುಖರಾದ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಎಸ್.ಬಿ ದಾರಿಮಿ, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ನ್ಯಾಯವಾದಿ ದುರ್ಗಾಪ್ರಸಾದ್ ರೈ ಕುಂಬ್ರ, ಅಶ್ರಫ್ ಉಜಿರೋಡಿ, ರಕ್ಷಿತ್ ರೈ ಮುಗೇರು, ವಿನೋದ್ ಶೆಟ್ಟಿ ಮುಡಾಳ, ಹನೀಫ್ ಹಾಜಿ ಉದಯ, ಎಲ್ ಟಿ ರಝಾಕ್ ಹಾಜಿ, ಟಿ.ಎಂ ಶಹೀದ್ ಸುಳ್ಯ, ಹಮೀದ್ ದಾರಿಮಿ ಸಂಪ್ಯ, ಇಸ್ಮಾಯಿಲ್ ಫಾಝಿ, ಮೋಹನದಾಸ ರೈ ಕುಂಬ್ರ, ರಫೀಕ್ ಅಲ್‌ರಾಯಾ, ಹಮೀದ್ ಹಾಜಿ ಸುಳ್ಯ, ನಝೀರ್ ಮಠ, ಅಬ್ದುಲ್ ಖಾದರ್ ಹಾಜಿ, ಅಬ್ದುಲ್ಲ ಹಾಜಿ ಎನ್.ಎಸ್, ಅಬ್ದುಲ್ ಖಾದರ್ ಹಾಜಿ ಹಿರಾ, ಇಬ್ರಾಹಿಂ ಹಾಜಿ ಕುಕ್ಕಾಜೆ, ಮಹಮ್ಮದ್ ಮುಸ್ಲಿಯಾರ್, ಮಂಗಳ ಅಬೂಬಕ್ಕರ್ ಹಾಜಿ, ನ್ಯಾಯವಾದಿ ಸಿದ್ದೀಕ್, ಇರ್ಷಾದ್ ಫಾಝಿ ಮುಕ್ವೆ, ಉಮರ್ ದಾರಿಮಿ ಸಾಲ್ಮರ, ತಾಜುದ್ದೀನ್ ರಹ್ಮಾನಿ, ಅಬ್ದುಲ್ ಕರೀಂ ದಾರಿಮಿ, ಅಮಳ ರಾಮಚಂದ್ರ, ಮಜೀದ್ ಬಾಳಾಯ, ಪಿ.ಕೆ ಮುಹಮ್ಮದ್ ಕೂಡುರಸ್ತೆ, ನೌಫಲ್ ಅಜ್ಜಿಕ್ಕಲ್, ಶರೀಫ್ ಅಜ್ಜಿಕ್ಕಲ್, ಜಮಾಲುದ್ದೀನ್ ಹಾಜಿ ಮುಕ್ವೆ, ತಾಜ್ ಮಹಮ್ಮದ್ ಸುಳ್ಯ, ಅಬ್ದುಲ್ ಹಮೀದ್ ಫಾಮಿಲಿ, ಅಬೂಬಕ್ಕರ್ ಪೂಪಿ ಸುಳ್ಯ, ಜಿ.ಕೆ ಅಬ್ದುಲ್ ಹಮೀದ್ ಸಂಪಾಜೆ ಮತ್ತಿತರರು ಉಪಸ್ಥಿತರಿದ್ದರು.
ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಈಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾರಿಸ್ ಕೌಸರಿ ಕೋಲ್ಪೆ ಸ್ವಾಗತಿಸಿದರು. ಸ್ವಾಗತ ಸಮಿತಿ ಆರ್ಥಿಕ ಸಮಿತಿ ಸಂಚಾಲಕ ಅಬ್ದುಲ್ ಸಲಾಂ ಈಶ್ವರಮಂಗಲ ವಂದಿಸಿದರು.
ಎಸ್ಕೆಎಸ್ಸೆಸ್ಸೆಫ್ ಕುಂಬ್ರ ವಲಯ ಅಧ್ಯಕ್ಷ ಮನ್ಸೂರ್ ಅಸ್ಲಮಿ ಅಮ್ಚಿನಡ್ಕ, ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಸುಲ್ತಾನ್ ಕೂಡುರಸ್ತೆ, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ ಹಾಜಿ ದರ್ಬೆ ಹಾಗೂ ಪದಾಧಿಕಾರಿಗಳು, ಸದಸ್ಯರು ಸಹಕರಿಸಿದರು.
ಕಣ್ಮನ ಸೆಳೆದ ಆಕರ್ಷಕ ಜಾಥಾ
ಪರ್ಪುಂಜ ಅಬ್ರೋಡ್ ಹಾಲ್ ಬಳಿಯಿಂದ ಮಧ್ಯಾಹ್ನ 2 ಗಂಟೆಗೆ ಜಾಥಾಕ್ಕೆ ಚಾಲನೆ ನೀಡಲಾಯಿತು.
ಮಹಮ್ಮದ್ ಬಡಗನ್ನೂರುರವರು ಎಸ್ಕೆಎಸ್ಸೆಸ್ಸೆಫ್ ವಿಖಾಯ ದ.ಕ ಈಸ್ಟ್ ಜಿಲ್ಲಾ ಸಮಿತಿ ಚೇರ್‌ಮೆನ್ ಅಶ್ರಫ್ ಶೇಡಿಗುಂಡಿರವರಿಗೆ ಸಂಘಟನೆಯ ಧ್ವಜ ಹಸ್ತಾಂತರಿಸಿ ಚಾಲನೆ ನೀಡಿದರು. ಧಾರ್ಮಿಕ ಮುಖಂಡರಾದ ತಾಜುದ್ದಿನ್ ರಹ್ಮಾನಿ ದುವಾ ನೆರವೇರಿಸಿದರು. ಜಾಥಾದಲ್ಲಿ ಸಾವಿರಾರು ಮಂದಿ ಕಾರ್ಯಕರ್ತರುಗಳು, ಸುಮಾರು 20 ಕ್ಕೂ ಹೆಚ್ಚು ದಫ್ ತಂಡಗಳು, ಸ್ಕೌಟ್, ಗೈಡ್ಸ್ ತಂಡ ಮದ್ರಸಾ ವಿದ್ಯಾರ್ಥಿಗಳ ಕಲರವ ಜಾಥಾಗೆ ಮೆರಗು ನೀಡಿತು. ವಿಖಾಯ ವಿಂಗ್ಸ್ ತಂಡದ ಸದಸ್ಯರು ಸ್ವಯಂ ಸೇವಕರಾಗಿ ರ‍್ಯಾಲಿಯಲ್ಲಿ ನೇತೃತ್ವ ವಹಿಸಿದ್ದರು. ಎಸ್ಕೆಎಸ್ಸೆಸ್ಸೆಫ್ ಕ್ಯಾಂಪಸ್, ದಹವಾ, ತ್ವೈಬಾ, ವಿಜಿಲಿಯನ್ಸ್ ಹಾಗೂ ಶಾಖೆಯ ವಿವಿಧ ಭಾಗಗಳ ಆಂಬುಲೆನ್ಸ್ ವಾಹನಗಳು ಜಾಥಾದಲ್ಲಿ ಪಾಲ್ಗೊಂಡಿದ್ದವು. ಕೇಸರಿ ಬಿಳಿ ಹಸಿರು ಬಣ್ಣದ ಬಲೂನ್, ಧ್ವಜ ಗಮನ ಸೆಳೆಯಿತು.
ಅಭೂತಪೂರ್ವ ಯಶಸ್ಸು ಕಂಡಿದೆ-ಮಹಮ್ಮದ್ ಕೆ.ಎಚ್
ಎಸ್ಕೆಎಸ್ಸೆಸ್ಸೆಫ್ ಸಂಘಟನೆಯು ದೇಶಕ್ಕೆ ಮಾದರಿಯಾದ ಕೆಲಸ ಕಾರ್ಯಗಳನ್ನು ಮಾಡುತ್ತಾ ಬರುತ್ತಿದ್ದು ಮಾನವ ಸರಪಳಿಯು ವರ್ಷಂಪ್ರತಿ ಆಚರಿಸಿಕೊಂಡು ಬರುವ ಕಾರ್ಯಕ್ರಮವಾಗಿದೆ, ಇದರ ಯಶಸ್ಸಿಗೆ ನಮ್ಮ ಸಂಘಟನೆಯ ನಾಯಕರು, ಕಾರ್ಯಕರ್ತರು, ನಾನಾ ಸಂಘಟನೆಗಳ ಮುಖಂಡರು ಸಹೋದರ ಧರ್ಮದ ನಾಯಕರುಗಳು ಕೈಜೋಡಿಸಿದ್ದು ಕಾರ್ಯಕ್ರಮದ ಯಶಸ್ಸಿಗೆ ಕಾರಣವಾಗಿದೆ, ನಮ್ಮ ನಿರೀಕ್ಷೆಗೂ ಮೀರಿದ ಜನರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ಮಾನವ ಸರಪಳಿ ಕಾರ್ಯಕ್ರಮ ಅಭೂತಪೂರ್ವ ಯಶಸ್ಸು ಕಂಡಿದೆ ಎಂದು ಮಾನವ ಸರಪಳಿ ಸ್ವಾಗತ ಸಮಿತಿ ಅಧ್ಯಕ್ಷ ಮಹಮ್ಮದ್ ಕೆ.ಎಚ್ ತಿಳಿಸಿದ್ದಾರೆ. ಬಿರುಬಿಸಿಲನ್ನು ಲೆಕ್ಕಿಸದೇ ನಮ್ಮ ಯುವ ಪಡೆಯು ಮಾನವ ಸರಪಳಿ ರ‍್ಯಾಲಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿನ ಪಾಲುದಾರರಾಗಿದ್ದಾರೆ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ನಾವು ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಅವರು ಹೇಳಿದರು.