ಒಂದು ಗೋಣಿ ಸಿಮೆಂಟ್ ಕೆಲಸ ಆಗಿಲ್ಲ ಎಂದವರಿಗೆ ಒಂದು ಕೋಟಿ ಸಿಮೆಂಟ್ ಗೋಣಿ ರೆಡಿ ಇದೆ; ಅಶೋಕ್ ರೈ
ಪುತ್ತೂರು: ಪುತ್ತೂರಿನಲ್ಲಿ ಅಭಿವೃದ್ದಿ ಕೆಲಸಗಳು ನಡೆಯುತ್ತಿಲ್ಲ, ಶಾಸಕರು ಸುಮ್ಮನೆ ಹೇಳಿಕೆಯನ್ನು ಕೊಡುವುದರಲ್ಲೇ ಕಾಲ ಕಳೆಯುತ್ತಿದ್ದಾರೆ ಎಂದು ಸಾರ್ವಜನಿಕ ಹೇಳಿಕೆ ನೀಡಿದವರಿಗೆ ನಾವು ಇಲ್ಲಿ ನಡೆಸಿರುವ ಕಾಮಗಾರಿಗಾಗಿ ಬಳಸಿರುವ ಒಂದು ಕೋಟಿ ಖಾಲಿ ಸಿಮೆಂಟ್ ಗೋಣಿ ಇದ್ದು ನಾವು ಅದನ್ನು ನೀಡಲು ಸಿದ್ದವಾಗಿದ್ದೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಜ. 27ರಂದು ಕೆದಂಬಾಡಿ ಗ್ರಾಮದ ಬಿಜೆಪಿಯ ಪ್ರಮುಖ ಐದು ಮಂದಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿ ಮಾತನಾಡಿದರು.
ರಾಜ್ಯ ಸರಕಾರದ ವಿವಿಧ ಅಭಿವೃದ್ದಿ ಯೋಜನೆಗಳನ್ನು ಮೆಚ್ಚಿಕೊಂಡ ಹಲವಾರು ಬಿಜೆಪಿ ಕಾರ್ಯಕರ್ತರು ಸದ್ದಿಲ್ಲದೆ ನಮ್ಮ ಜೊತೆ ಈಗಾಗಲೇ ಸೇರಿಕೊಂಡಿದ್ದಾರೆ. ಪಂಚ ಗ್ಯಾರಂಟಿ ಯೋಜನೆ ಬಿಜೆಪಿ ಕಾರ್ಯಕರ್ತರ ಮನೆಯನ್ನು ಬೆಳಗಿಸಿದ್ದು ಇದು ಅವರಿಗೂ ಸಂತಸ ತಂದಿದೆ, ಕರ್ನಾಟಕದಲ್ಲಿ ಅಥವಾ ಪುತ್ತೂರಿನಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿರಬೇಕು. ಕಾಂಗ್ರೆಸ್ ಅಧಿಕಾರದ್ದಲ್ಲಿದ್ದರೆ ಮಾತ್ರ ಜನ ನೆಮ್ಮದಿಯಿಂದ ಇರಲು ಸಾಧ್ಯ ಎಂಬುದು ಬಹುತೇಕರಿಗೆ ಅರಿವಾಗಿದೆ ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ತಂಡೋಪ ತಂಡವಾಗಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಸೇರಲಿದ್ದಾರೆ ಎಂದು ಶಾಸಕರು ಹೇಳಿದರು.
ಪುತ್ತೂರಿನ ಅಭಿವೃದ್ದಿ ನೋಡಲು ಮನವಿ:
ಪುತ್ತೂರಿನಲ್ಲಿ ಒಂದು ಗೋಣಿ ಚೀಲದ ಕಾಮಗಾರಿ ನಡೆದಿಲ್ಲ ಎಂದು ಸಾರ್ವಜನಿಕ ಹೇಳಿಕೆ ನೀಡಿದ್ದ ಮಾಜಿ ಶಾಸಕರು ಪುತ್ತೂರಿನಲ್ಲಿ ಆಗಿರುವ ಮತ್ತು ಆಗುತ್ತಿರುವ ಕಾಮಗಾರಿಗಳನ್ನು ಒಮ್ಮೆ ವೀಕ್ಷಣೆ ಮಾಡಿ ಬರಬೇಕು. ಗ್ರಾಮ ಗ್ರಾಮಗಳ ರಸ್ತೆಯನ್ನು ಕಾಂಕ್ರೀಟ್ ಮಾಡಿದ್ದೇವೆ, ಶಾಲಾ ,ಕಾಲೇಜುಗಳಿಗೆ ಕಟ್ಟಡವನ್ನು ಮಂಜೂರು ಮಾಡಿದ್ದೇವೆ, ತಾಲೂಕಿಗೆ ಕ್ರೀಡಾಂಗಣ, ಆರ್ ಟಿ ಒ ಕಚೇರಿ, ಕೆ ಎಂ ಎಫ್ ಗೆ ಜಾಗ, ಮತ್ತು ಕ್ಷೇತ್ರದಲ್ಲಿ ಮನೆ ಇಲ್ಲದ ಬಡ ಕುಟುಂಬಗಳಿಗೆ ಮನೆ ನಿವೇಶನ ನೀಡಲು 9 ಗ್ರಾಮಗಳಲ್ಲಿ ಜಾಗ ಕಾಯ್ದಿರಿಸಲಾಗಿದೆ. ಕ್ಷೇತ್ರದಲ್ಲಿ ಕರೆಂಟ್ ಸಂಪರ್ಕ ಇಲ್ಲದೆ ಕತ್ತಲೆಯಲ್ಲಿದ್ದ ನೂರಾರು ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕೊಡಿಸಲಾಗಿದೆ, ಲಂಚ ಪಡೆಯದೆ ಅಕ್ರಮ ಸಕ್ರಮ ವಿಲೇವಾರಿಯಾಗಿದೆ, 94 ಸಿ ಮನೆ ಬಾಗಿಲಿಗೆ ನೀಡಿದ್ದೇವೆ ಇದೆಲ್ಲವನ್ನೂ ಮಾಜಿ ಶಾಸಕರು ತಿಳಿದುಕೊಳ್ಳಬೇಕು ಎಂದು ಶಾಸಕರು ಮಾಜಿ ಶಾಸಕರ ಕಾಲೆಳೆದರು.
ಶಾಸಕರ ಕಾರ್ಯವೈಖರಿ ಮೆಚ್ಚಿ ಕಾಂಗ್ರೆಸ್ ಸೇರಿದ್ದೇವೆ:
ಕಾಂಗ್ರೆಸ್ ಸೇರಿದ ಬೋಳೋಡಿಗುತ್ತು ರಾಕೇಶ್ ರೈ ಮಾತನಾಡಿ ಪುತ್ತೂರು ಶಾಸಕರಾದ ಅಶೋಕ್ ರೈ ಅವರು ಶಾಸಕರಾದ ಬಳಿಕ ಅವರ ಕಾರ್ಯವೈಖರಿ ಬಹಳ ಚೆನ್ನಾಗಿದೆ. ಪಕ್ಷ ಬೇದವಿಲ್ಲದೆ ಎಲ್ಲರ ಕೆಲಸವನ್ನೂ ರಾಜಧರ್ಮ ಪಾಲನೆ ಮೂಲಕ ಮಾಡುತ್ತಿದ್ದಾರೆ , ಪುತ್ತೂರಿನಲ್ಲಿ ನಡೆಯುತ್ತಿರುವ ಅಭಿವೃದ್ದಿ ಕೆಲಸವನ್ನು ನೋಡಿದರೆ ಹಿಂದೆಂದೂ ಇಷ್ಟು ಕೆಲಸಗಳು ನಡೆದಿರಲಿಲ್ಲ. ಮುಂದೆ ಇವರೇ ಶಾಸಕರಾಗಿ ಗೆದ್ದು ಬರಬೇಕು, ಇವರು ಶಾಸಕರಾಗಿರುವುದು ಪುತ್ತೂರು ಜನತೆಯ ಭಾಗ್ಯವಾಗಿದೆ. ಮುಂದೆ ನಾವು ಕಾಂಗ್ರೆಸ್ ಪಕ್ಷದ ಪರವಾಗಿ ಗ್ರಾಮದಲ್ಲಿ ಕೆಲಸ ಮಾಡಲಿದ್ದೇವೆ ಎಂದು ಹೇಳಿದರು. ಇವರ ಜೊತೆ ಬಿಜೆಪಿ ಕಾರ್ಯಕರ್ತರಾದ ಶರತ್ ರೈ ಕೊಡೆಂಕಿರಿ, ರಂಜಿತ್ ರೈ ಕೊಡೆಂಕಿರಿ, ಸಂದೀಪ್ ನಾಯ್ಕ ಬೋಳೋಡಿ ಮತ್ತು ಚಿರಂಜಿತ್ ರೈ ಕಾಂಗ್ರೆಸ್ ಗೆ ಸೇರ್ಪಡೆಯಾದರು.
ಪಂಚ ಗ್ಯಾರಂಟಿಯಿಂದ ಜನ ನೆಮ್ಮದಿಯಲ್ಲಿದ್ದಾರೆ-ಕೆ ಪಿ ಆಳ್ವ:
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವರು ಮಾತನಾಡಿ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಜನ ನೆಮ್ಮದಿಯಿಂದಿದ್ದಾರೆ. ಗೃಹಲಕ್ಷ್ಮಿ , ಗೃಹಜ್ಯೋತಿ ಮತ್ತು ಶಕ್ತಿ ಯೋಜನೆಗಳು ಪ್ರತೀ ಕುಟುಂಬಕ್ಕೆ ಶಕ್ತಿ ನೀಡಿದೆ. ಕಾಂಗ್ರೆಸ್ ಪಕ್ಷದ ಈ ಯೋಜನೆಯನ್ನು ರಾಜ್ಯದ ಎಲ್ಲಾ ವರ್ಗದ ಜನರಿಗೂ ನೀಡಲಾಗುತ್ತಿದೆ. ಕಾಂಗ್ರೆಸ್ ಬಡವರ ಪರ ಇರುವ ಪಕ್ಷ ಎಂದು ಇದರಿಂದ ಸಾಬೀತಾಗಿದೆ. ಮುಂದಿನ ದಿನಗಳಲ್ಲಿ ಅನೇಕ ಮಂದಿ ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದು ಈಗಾಗಲೇ ಮಾತುಕತೆಗಳು ನಡೆದಿದೆ ಎಂದು ಕೃಷ್ಣಪ್ರಸಾದ್ ಆಳ್ವರು ಹೇಳಿದರು.
ಇನ್ನೂ ಇದ್ದಾರೆ
ಕಾಂಗ್ರೆಸ್ ಮುಖಂಡ ಬೋಳೋಡಿ ಚಂದ್ರಹಾಸ ರೈ ಮಾತನಾಡಿ ಇದು ಒಂದು ಹಂತದ ಸೇರ್ಪಡೆಯಾಗಿದೆ. ಎರಡನೇ ಹಂತದ ಸೇರ್ಪಡೆ ಕಾರ್ಯ ಬಳಿಕ ಮೂರು , ನಾಲ್ಕನೇ ಹಂತ ಹೀಗೇ ಮುಂದುವರೆಯುತ್ತದೆ. ಶಾಸಕರ ಹಾಗೂ ಕಾಂಗ್ರೆಸ್ ಸರಕಾರದ ಆಡಳಿತವನ್ನು ಬಿಜೆಪಿಗರೂ ನೆಚ್ಚಿಕೊಂಡಿದ್ದಾರೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮುಖಂಡರಾದ ಮುರಳೀಧರ್ ರೈ ಮಠಂತಬೆಟ್ಟು, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಕಾಂಗ್ರೆಸ್ ಪ್ರಮುಖರಾದ ಚಂದ್ರಹಾಸ ರೈ ಬೋಳೋಡಿ, ಶ್ರೀರಾಂ ಪಕ್ಕಳ, ಪುತ್ತೂರು ಬ್ಲಾಕ್ ಕಾಂಗ್ರೆಸ್ ವಕ್ತಾರೆ ಚಂದ್ರಪ್ರಭಾ, ಮನೋಹರ್ ರೈ ಎಂಡೆಸಾಗು, ಪುರುಷೋತ್ತಮ ರೈ ಬೂಡಿಯಾರ್, ಹಬೀಬ್ ಕಣ್ಣೂರು, ಸಾರ್ಥಕ್ ರೈ ಅರಿಯಡ್ಕ, ಭಾಸ್ಕರ್ ನಾಯ್ಕ್, ಅಂಕಿತ್ ರೈ, ಅಬ್ದುಲ್ಲಾ ಗಟ್ಟಮನೆ, ಗಂಗಾಧರ್ ಬೋಳೋಡಿ, ಸಿತಾರಾಮ ರೈ ಗುತ್ತು, ಸಲೀಂ ಬೋಳೋಡಿ, ರಘುನಾಥ ರೈಚಾವಡಿ ಮೊದಲಾದವರು ಉಪಸ್ಥಿತರಿದ್ದರು.