ಪುತ್ತೂರು: ಪ್ರಜಾಪ್ರಭುತ್ವ ದೇಶದಲ್ಲಿ ಇಂದು ಫ್ಯಾಶಿಸಂ ಚಿಂತನೆಗಳ ಕಾರ್ಯಸೂಚಿಗಳು, ಶಾಸನ ಸಭೆಯಲ್ಲಿ ಆದೇಶ ಅಧಿನಿಯಮಗಳಾಗಿ ಜಾರಿಯಾಗುತ್ತಿದೆ, ಫ್ಯಾಶಿಸಂ ಮತ್ತು ಪ್ರಜಾಪ್ರಭುತ್ವ ಎಂಬುದು ಯಾವತ್ತೂ ಒಂದೇ ದಿಕ್ಕಿನಲ್ಲಿ ಸಾಗಲು ಸಾಧ್ಯವಿಲ್ಲ, ಫ್ಯಾಶಿಸಂ ಬಲ ಹೆಚ್ಚಾದಂತೆ ಸಂವಿಧಾನ ಪ್ರತಿಪಾದಿಸಿದ ಜಾತ್ಯತೀತ, ಸಹಬಾಳ್ವೆ ಮತ್ತು ಏಕತೆಯ ಚಿಂತನೆಗಳು ಕ್ಷೀಣಗೊಳ್ಳುತ್ತದೆ, ನಮಗೆ ಘನತೆ ಗೌರವ ಸ್ವಾಭಿಮಾನದ ಬದುಕು ತಂದುಕೊಟ್ಟ ಸಂವಿಧಾನವನ್ನು, ಸಂವಿಧಾನ ಪ್ರತಿಪಾದಿಸಿದ ಸಹಬಾಳ್ವೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಪ್ರಯತ್ನಗಳು ಕಳೆದ ಕೆಲವು ವರ್ಷಗಳಿಂದ ದೇಶದಲ್ಲಿ ವೇಗ ಪಡೆಯುತ್ತಿದೆ, ಫ್ಯಾಶಿಸಂನ ಮೂಲೋತ್ಪಾಟನೆಯಿಂದ ಮಾತ್ರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಉಳಿಸಲು ಸಾಧ್ಯ ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಹೇಳಿದರು.
ಅವರು ಎಸ್‌ಡಿಪಿಐ ಜಿಲ್ಲಾ ಸಮಿತಿಯಿಂದ ಕೂರ್ನಡ್ಕದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ, ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಪ್ರ.ಕಾರ್ಯದರ್ಶಿ ಸಿದ್ದೀಕ್ ಪುತ್ತೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಶಾಕಿರ್ ಅಳಕೆಮಜಲು, ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಹಮೀದ್ ಸಾಲ್ಮರ, ಸದಸ್ಯ ಇಬ್ರಾಹಿಂ ಸಾಗರ್ ಮಾತನಾಡಿ, ಶುಭ ಹಾರೈಸಿದರು. ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಸಂವಿಧಾನ ದೀಕ್ಷೆಯನ್ನು ಬೋಧಿಸಿದರು.
ಈ ಸಂದರ್ಭದಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದೀಕ್ ಅಲೆಕ್ಕಾಡಿ, ಫೀರ್ ಮೊಹಲ್ಲಾ ಜುಮಾ ಮಸೀದಿ ಅಧ್ಯಕ್ಷರಾದ ಕೆ ಹೆಚ್ ಖಾಸಿಂ, ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು, ಸದಸ್ಯರಾದ ವಿಶ್ವನಾಥ್ ಪುಣ್ಚತ್ತಾರು, ಚುಟುಕು ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಅಧ್ಯಕ್ಷರಾದ ಹಾಜಿ ಅಬ್ದುಲ್ ಸಮದ್ ಬಾವ, ಸಲ್ ಸಬೀಲ್ ಯಂಗ್ ಮೆನ್ಸ್ ಕೂರ್ನಡ್ಕ ಇದರ ಅಧ್ಯಕ್ಷ ಹೈದರ್ ಚೊಯ್ಸ್, ಎಸ್‌ಡಿಟಿಯು ಪುತ್ತೂರು ತಾಲೂಕು ಅಧ್ಯಕ್ಷರಾದ ಆಸಿಫ್ ಮುಕ್ವೆ, ಎಸ್‌ಡಿಪಿಐ ಪುತ್ತೂರು ನಗರ ಅಧ್ಯಕ್ಷ ಯಹ್ಯಾ ಕೂರ್ನಡ್ಕ ಸಹಿತ ಹಲವು ನಾಯಕರು, ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಉಪಸ್ಥಿತರಿದ್ದರು.
ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಕಾರ್ಯದರ್ಶಿ ಉಸ್ಮಾನ್ ಕೆದಿಲ ಸ್ವಾಗತಿಸಿದರು. ಕುಂಬ್ರ ಬ್ಲಾಕ್ ಅಧ್ಯಕ್ಷ ರಿಯಾಝ್ ಬಳಕ್ಕ ಕಾರ್ಯಕ್ರಮ ನಿರೂಪಿಸಿದರು.