ಇರ್ದೆ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಾಳೆಯಿಂದ ಜಾತ್ರೋತ್ಸವದ ಸಂಭ್ರಮ

0

ಪುತ್ತೂರು: ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಗೋಪಾಲಕ್ಷೇತ್ರ ಹಾಗೂ ಪೂಮಾಣಿ-ಕಿನ್ನಿಮಾಣಿ ಮತ್ತು ರಾಜನ್ ದೈವಗಳ ಕದಿಕೆ ಚಾವಡಿ ಬೆಂದ್ರ್‌ತೀರ್ಥದಲ್ಲಿ ವರ್ಷಾವಧಿ ಜಾತ್ರೋತ್ಸವವು ಫೆ.1ರಿಂದ ಪ್ರಾರಂಭಗೊಂಡು ಫೆ.6ರ ತನಕ ವಿವಿಧ ವೈದಿಕ, ತಾಂತ್ರಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಯವರ ನೇತೃತ್ವದಲ್ಲಿ ಜರುಗಲಿದೆ.


ಫೆ.1ರಂದು ಸಂಜೆ ಬಲಿವಾಡು, ಹಸಿರುವಾಣಿ ಶೇಖರಣೆ, ದೇವತಾ ಪ್ರಾರ್ಥನೆ, ಉಗ್ರಾಣ ಮುಹೂರ್ತ, ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಿಂದ ದೈವಗಳ ಭಂಡಾರ ಆಗಮನ, ರಾತ್ರಿ ಅತ್ತಾಳ ಪೂಜೆ, ಮಹಾಪೂಜೆ , ಮಂಗಳಾರತಿ ನಡೆಯಲಿದೆ. ಫೆ.2ರಂದು ಪ್ರಾತಃಕಾಲ ಪೂಜೆ, ದೇವತಾ ಪ್ರಾರ್ಥನೆ, ಬೆಂದ್ರ್‌ತೀರ್ಥ ಪೂಜೆ, ನವಕ ಕೊಪ್ಪರಿಗೆ ಪೂಜೆ, ಗಣಪತಿ ಹವನ, ಕಲಶಾಭಿಷೇಕ ಮಧ್ಯಾಹ್ನ ಪಲ್ಲಪೂಜೆ, ಮಹಾಪೂಜೆ, ಮಂಗಳಾರತಿ ಶ್ರೀದೇವರ ಬಲಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ದೈವಗಳ ತಂಬಿಲ, ರಾತ್ರಿ ಕಾರ್ತಿಕ ಪೂಜೆ, ಮಹಾಪೂಜೆ, ಶ್ರೀ ದೇವರ ಬಲಿ ಹೊರಟು ಬೆಂದ್ರ್ ತೀರ್ಥಕ್ಕೆ ಸವಾರಿ, ಭೂತ ಬಲಿ ಉತ್ಸವ, ಸೇವೆಗಳು, ಕಟ್ಟೆಪೂಜೆ, ವಸಂತಕಟ್ಟೆಪೂಜೆ, ಸಿಡಿಮದ್ದು ಪ್ರದರ್ಶನ ನಡೆಯಲಿದೆ. ಬೆಳಿಗ್ಗೆ ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆ ನಡೆಯಲಿದೆ.

ಫೆ.3ರಂದು ಪ್ರಾತ:ಕಾಲ ಪೂಜೆ, ದರ್ಶನ ಬಲಿ ಬಟ್ಟಲು ಕಾಣಿಕೆ, ರಾಜಾಂಗಣ ಪ್ರಸಾದ, ಮಹಾಪೂಜೆ, ಮಂತ್ರಾಕ್ಷತೆ, ಅನ್ನಸಂತರ್ಪಣೆ, ಅಪರಾಹ್ನ ದೈವಗಳ ತಂಬಿಲ, ಸಂಜೆ ಕದಿಕೆ ಚಾವಡಿಯಲ್ಲಿ ಮಕರ ತೋರಣ ಏರಿಸುವುದು, ರಾತ್ರಿ ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ, ದುರ್ಗಾಪರಮೇಶ್ವರಿ ದೇವಿಗೆ ಹೂವಿನ ಪೂಜೆ, ವಿಷ್ಣುಮೂರ್ತಿ ದೇವರಿಗೆ ರಂಗಪೂಜೆಯ ಬಳಿಕ ದೈವಗಳ ಭಂಡಾರ ದೇವಸ್ಥಾನದಿಂದ ಹೊರಟು ಕದಿಕೆ ಚಾವಡಿಗೆ ಆಗಮಿಸಲಿದೆ. ಸಂಜೆ ಶ್ರೀವಿಷ್ಣುಮೂರ್ತಿ ಭಜನಾ ಸಂಘ ಮತ್ತು ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ, ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.


ಫೆ.4ರಿಂದು ಕದಿಕೆ ಚಾವಡಿಯಲ್ಲಿ ದೈವಗಳ ನೇಮೋತ್ಸವ ನಡೆಯಲಿದ್ದು ಮೊದಲ ದಿನ ಕಿನ್ನಿಮಾಣಿ ದೈವ, ಫೆ.5ರಂದು ಪೂಮಾಣಿ ದೈವ, ಫೆ.6ರಂದು ಮಲರಾಯ ಮತ್ತು ರಾಜನ್ ದೈವ(ಹುಲಿಭೂತ)ಗಳ ನೇಮ ನಡೆಯಲಿದೆ. ಸಂಜೆ ನವಕ ಗಣಹೋಮ, ತಂಬಿಲ, ದೈವಗಳ ಭಂಡಾರ ಕದಿಕೆ ಚಾವಡಿಯಿಂದ ದೇವಸ್ಥಾನಕ್ಕೆ ಆಗಮನ ಬಳಿಕ ದೇವಾಲಯದಲ್ಲಿ ಪಿಲಿಚಾಮುಂಡಿ ದೈವದ ನೇಮ ನಡೆದು ರಾತ್ರಿ ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ದೈವಗಳ ಭಂಡಾರ ನಿರ್ಗಮನದೊಂದಿಗೆ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here