*ಕಸ ಬಿಸಾಡುವ ಸಂಸ್ಕೃತಿ ಬದಲಾಗಬೇಕು: ನವೀನ್ ಭಂಡಾರಿ
*ನಮ್ಮ ಕಸಕ್ಕೆ ನಾವೇ ಜವಬ್ದಾರರು : ತ್ರಿವೇಣಿ ಪಲ್ಲತ್ತಾರು
ಪುತ್ತೂರು:ಸ್ವಚ್ಚತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಅದರಲ್ಲೂ ಪುತ್ತೂರು ತಾಲೂಕು ರಾಜ್ಯಕ್ಕೆ ಮಾದರಿಯಾಗಬೇಕು, ಕಸ ಬಿಸಾಡುವ ಸಂಸ್ಕೃತಿ ಬದಲಾಗಬೇಕು ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಬಹಳಷ್ಟು ಅಗತ್ಯವಿದೆ. ಸ್ವಚ್ಛ ಸಂಸ್ಕೃತಿ, ನಮ್ಮ ಸಂಸ್ಕೃತಿ ಎಂಬಂತೆ ತಾಲೂಕಿನಾದ್ಯಂತ ನಡೆದ ಬೃಹತ್ ಸ್ವಚ್ಚತಾ ಅಭಿಯಾನದಲ್ಲಿ ಒಳಮೊಗ್ರು ಗ್ರಾಪಂ ಎಲ್ಲರ ಸಹಕಾರ ಪಡೆದುಕೊಂಡು ಒಂದು ಮಾದರಿ ಕೆಲಸ ಮಾಡಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿಯವರು ಶ್ಲಾಘನೆ ವ್ಯಕ್ತಪಡಿಸಿದರು.
ಅವರು ಫೆ.01 ರಂದು ನಡೆದ ಒಳಮೊಗ್ರು ಗ್ರಾ.ಪಂ ಕಛೇರಿ ಸಭಾಂಗಣದಲ್ಲಿ ನಡೆದ ಬೃಹತ್ ಸ್ವಚ್ಛತಾ ಶ್ರಮದಾನದ ಸಮಾರೋಪ, ಸಹಕರಿಸಿದವರಿಗೆ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕುಂಬ್ರದ ವರ್ತಕರ ಸಂಘ ಕೂಡ ಸ್ವಚ್ಚತೆಗೆ ಒತ್ತು ನೀಡಿರುವುದು ಖುಷಿ ತಂದಿದೆ ಎಂದ ಅವರು ಒಂದು ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಸ್ವಚ್ಚತೆ ಪ್ರಮುಖ ಪಾತ್ರ ವಹಿಸುತ್ತದೆ ಎಂದ ನವೀನ್ ಭಂಡಾರಿಯವರು ಒಳಮೊಗ್ರು ಗ್ರಾಪಂ ಆಡಳಿತ ಮಂಡಳಿ ಹಾಗೂ ಅಧಿಕಾರಿ, ಸಿಬ್ಬಂದಿ ವರ್ಗಕ್ಕೆ ಅಭಿನಂದನೆ ಸಲ್ಲಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಮಾತನಾಡಿ, 10 ದಿನಗಳ ಕಾಲ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪ್ರತಿಯೊಬ್ಬರು ತಮ್ಮ ಸ್ಥಾನಮಾನ ನೋಡದೆ ಪಂಚಾಯತ್ನೊಂದಿಗೆ ಕೈಜೋಡಿಸಿದ್ದಾರೆ. ನಮ್ಮ ಕಸಕ್ಕೆ ನಾವೇ ಜವಬ್ದಾರರು ಎಂಬುದನ್ನು ಪ್ರತಿಯೊಬ್ಬರು ತಿಳಿದುಕೊಂಡರೆ ನಮ್ಮ ಪರಿಸರ ಸ್ವಚ್ಛ ಪರಿಸರವಾಗಲು ಸಾಧ್ಯವಿದೆ ಎಂದ ಅವರು ಸಹಕರಿಸಿದ ಗ್ರಾಮದ ಸಮಸ್ತ ಬಂಧುಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಸ್ವಚ್ಚತಾ ಶ್ರಮದಾನದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿದ ಕುಂಬ್ರ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ ಕೈಕಾರರವರು, ಕಸ ಬಿಸಾಡುವುದು ನಿಲ್ಲಬೇಕು ಈ ಮನಸ್ಥಿತಿ ನಮ್ಮಲ್ಲಿ ಯಾವಾಗ ಬರುತ್ತದೋ ಆಗ ಸ್ವಚ್ಚತೆ ತನ್ನಿಂದ ತಾನೆ ಬರುತ್ತದೆ ಈ ನಿಟ್ಟಿನಲ್ಲಿ ಒಳಮೊಗ್ರು ಗ್ರಾಪಂ ಜಾಗೃತಿ ಮೂಡಿಸಿದೆ ಎಂದು ಹೇಳಿದರು.
ಸ್ಪಂದನಾ ಸೇವಾ ಬಳಗದ ಗೌರವ ಸಲಹೆಗಾರರಾದ ನಿತೀಶ್ ಕುಮಾರ್ ಶಾಂತಿವನ ಮಾತನಾಡಿ, ಪ್ರಧಾನಿ ಮೋದಿ ಪೊರಕೆ ಹಿಡಿದು ಕಸ ಗುಡಿಸುವ ಮೂಲಕ ಗಾಂಧಿ ಕಲ್ಪನೆಯ ಸ್ವಚ್ಛತೆಗೆ ಚಾಲನೆ ನೀಡಿದ್ದರು. ಅದರಂತೆ ಒಳಮೊಗ್ರು ಗ್ರಾ.ಪಂನಲ್ಲೂ ತಾಪಂ ಇಓ, ಗ್ರಾ.ಪಂ ಅಧ್ಯಕ್ಷರಿಂದ ಹಿಡಿದು ಪ್ರತಿಯೊಬ್ಬರು ಪೊರಕೆ ಹಿಡಿದು ಸ್ವಚ್ಚತೆಯ ಜಾಗೃತಿ ಮೂಡಿಸಿದ್ದಾರೆ ಇದು ಶ್ಲಾಘನೀಯ ಎಂದರು.
ಅನುಗ್ರಹ ಸಂಜೀವಿನಿ ಒಕ್ಕೂಟದ ಎಂಬಿಕೆ ಚಂದ್ರಿಕಾ ಮಾತನಾಡಿ, ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರು ಹೇಸಿಗೆ ಬಿಟ್ಟು ಕಸ ಹೆಕ್ಕಿದ್ದಾರೆ. ಇದನ್ನು ನೋಡಿಯಾದರೂ ನಾವುಗಳು ನಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಲ್ಲಿ ಶ್ರಮಿಸೋಣ ಎಂದು ಹೇಳಿದರು. ಗ್ರಾಪಂ ಸದಸ್ಯ ಮಹೇಶ್ ರೈ ಕೇರಿ ಮಾತನಾಡಿ, ಅಧಿಕಾರಿಗಳಿಂದ ಹಿಡಿದು ಪ್ರತಿಯೊಬ್ಬರು ಸ್ವಚ್ಚತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಜಾಗೃತಿ ಮೂಡಿಸಲಾಗಿದೆ. ಮುಂದಕ್ಕೆ ನಾವು ಕಸ ಹಾಕುವುದನ್ನು ತಡೆಯುವ ಕಾವಲುಗಾರರಾಗಬೇಕು ಎಂದು ಹೇಳಿದರು. ಕುಂಬ್ರ ಕೆಐಸಿಯ ಬಶೀರ್ ಕೌಡಿಚ್ಚಾರ್ ಮಾತನಾಡಿ, ಸ್ವಚ್ಚತೆಯಲ್ಲಿ ತಮ್ಮ ಕೆಐಸಿ ವಿದ್ಯಾರ್ಥಿಗಳು ಕೂಡ ಪಾಲ್ಗೊಂಡಿದ್ದು ಅವರು ಕೂಡ ಬಹಳಷ್ಟು ಖುಷಿ ಪಟ್ಟಿದ್ದಾರೆ. ಒಂದು ಮಾದರಿ ಕಾರ್ಯಕ್ರಮ ಗ್ರಾಪಂನಿಂದ ಆಗಿದೆ ಎಂದರು.
ಸ್ವಚ್ಚತಾ ಕಾರ್ಯಕ್ರಮದಲ್ಲಿ ಉಪಹಾರದ ವ್ಯವಸ್ಥೆಯನ್ನು ಮಾಡಿಕೊಟ್ಟಿರುವ ದಾನಿಗಳಿಗೆ ಈ ಸಂದರ್ಭದಲ್ಲಿ ಹೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಅಶ್ರಫ್ ಉಜಿರೋಡಿ ಉಪಸ್ಥಿತರಿದ್ದರು. ಸಭೆಯಲ್ಲಿ ಗ್ರಾಪಂ ಸದಸ್ಯರುಗಳಾದ ವಿನೋದ್ ಶೆಟ್ಟಿ ಮುಡಾಳ, ಶೀನಪ್ಪ ನಾಯ್ಕ, ಲತೀಫ್ ಟೈಲರ್, ರೇಖಾ ಯತೀಶ್, ಚಿತ್ರಾ ಬಿ.ಸಿ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅನುಗ್ರಹ ಸಂಜೀವನಿ ಒಕ್ಕೂಟದ ಸದಸ್ಯರು, ಸ್ವಚ್ಚತಾ ಸೇನಾನಿಗಳು, ಗ್ರಾಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು. ಗ್ರಾಪಂ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳರವರು ಸ್ವಾಗತಿಸಿ, ಸಹಕರಿಸಿದ ಎಲ್ಲಾ ಸಂಘ ಸಂಸ್ಥೆಗಳಿಗೆ, ದಾನಿಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು. ಕಾರ್ಯದರ್ಶಿ ಜಯಂತಿ ವಂದಿಸಿದರು. ಸಿಬ್ಬಂದಿಗಳಾದ ಕೇಶವ, ಗುಲಾಬಿ, ಜಾನಕಿ, ಮೋಹನ್, ಸಿರಿನಾ ಸಹಕರಿಸಿದ್ದರು.
ಕಸದ ಬುಟ್ಟಿ ಅಳವಡಿಕೆ, ಕರಪತ್ರ ಹಂಚಿಕೆ
ಕುಂಬ್ರ ವರ್ತಕರ ಸಂಘವು ಪಂಚಾಯತ್ಗೆ ಕೊಡುಗೆಯಾಗಿ ನೀಡಿದ್ದ ಎರಡು ಕಸದ ಬುಟ್ಟಿಗಳನ್ನು ಕುಂಬ್ರ ಜಂಕ್ಷನ್ನಲ್ಲಿರುವ ಎರಡು ಬಸ್ಸು ತಂಗುದಾಣಗಳಿಗೆ ಅಳವಡಿಸಲಾಯಿತು. ಅಲ್ಲದೆ ಒಣ ಕಸ, ಹಸಿ ಕಸ ವಿಂಗಡಣೆ ಸೇರಿದಂತೆ ಸ್ವಚ್ಚತೆಯ ಬಗ್ಗೆ ಮಾಹಿತಿ ಹೊಂದಿರುವ ಕರಪತ್ರಗಳನ್ನು ಪೇಟೆಯ ಅಂಗಡಿಗಳಿಗೆ ಹಂಚಲಾಯಿತು. ಈ ಸಂದರ್ಭದಲ್ಲಿ ಇಓ ನವೀನ್ ಭಂಡಾರಿ, ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು,ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮನ್ಮಥ ಅಜಿರಂಗಳ,ಕಾರ್ಯದರ್ಶಿ ಜಯಂತಿ, ರಾಜೇಶ್ ರೈ ಪರ್ಪುಂಜ, ಎಸ್.ಮಾಧವ ರೈ ಕುಂಬ್ರ ಸೇರಿದಂತೆ ಗ್ರಾಪಂ ಸದಸ್ಯರುಗಳು ಮತ್ತಿತರರು ಉಪಸ್ಥಿತರಿದ್ದರು.
ಗ್ರಾಪಂ ಕಾರ್ಯಕ್ಕೆ ಶ್ಲಾಘನೆ
10 ದಿನಗಳ ಕಾಲ ನಡೆದ ಸ್ವಚ್ಚತಾ ಶ್ರಮದಾನದಲ್ಲಿ ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ವಿಶೇಷ ಮುತುವರ್ಜಿ ತೆಗೆದುಕೊಂಡು ಜನರನ್ನು ಒಟ್ಟುಗೂಡಿಸುವಲ್ಲಿ ಶ್ರಮ ವಹಿಸಿದ್ದಾರೆ. ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಪಿಡಿಓ,ಸದಸ್ಯರುಗಳು, ಸಿಬ್ಬಂದಿ ವರ್ಗ ಕೂಡ ಇವರಿಗೆ ಸಹಕಾರ ನೀಡಿದರ ಫಲವಾಗಿ ಸುಮಾರು 800 ಕ್ಕೂ ಅಧಿಕ ಮಂದಿ ಶ್ರಮದಾನದಲ್ಲಿ ಭಾಗವಹಿಸುವ ಮೂಲಕ ಜಾಗೃತಿ ಮೂಡಿಸಿದ್ದಾರೆ. ಗ್ರಾಪಂನ ಈ ಕಾರ್ಯಕ್ಕೆ ಸಭೆಯಿಂದ ಶ್ಲಾಘನೆ ವ್ಯಕ್ತವಾಯಿತು. ಇದು ಇಲ್ಲಿಗೆ ಮಾತ್ರ ನಿಲ್ಲದೆ ಮುಂದೆಯೂ ಗ್ರಾಮದಲ್ಲಿ ಸ್ವಚ್ಚತೆಯ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ ಎಂದು ಗ್ರಾಪಂ ಆಡಳಿತ ಮಂಡಳಿ ತೀರ್ಮಾನಿಸಿತು.
“ ಹೇಸಿಗೆ ಬಿಟ್ಟು ಕೆಲವು ಮಹಿಳೆಯರು ವಾಂತಿ ಮಾಡಿಕೊಂಡರೂ ಸ್ವಚ್ಚತೆಯೇ ಆರೋಗ್ಯ ಎಂಬಂತೆ ರಸ್ತೆ ಬದಿಯಲ್ಲಿನ ಕಸ,ತ್ಯಾಜ್ಯ ಹೆಕ್ಕಿದ್ದಾರೆ. ನಾವು ಕಸ ಹೆಕ್ಕಲು ಇರುವವರು ಎಂಬುದನ್ನು ದಯವಿಟ್ಟು ಮರೆತು ಇನ್ನಾದರೂ ನಮ್ಮ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳಲು ನಾವು ನೀವು ಪ್ರತಿಯೊಬ್ಬರು ಪ್ರಯತ್ನಿಸೋಣ. ನಮ್ಮ ಕಸಕ್ಕೆ ನಾವೇ ಜವಬ್ದಾರರಾಗೋಣ. ಸಹಕರಿಸಿದ ಪ್ರತಿಯೊಬ್ಬರಿಗೂ ಗ್ರಾಪಂ ವತಿಯಿಂದ ಅಭಿಮಾನದ ಅಭಿನಂದನೆಗಳನ್ನು ಅರ್ಪಿಸುತ್ತೇವೆ.”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಪಂ