ಬಿರುಮಲೆಬೆಟ್ಟದಲ್ಲಿ ಬಿರುಮಲೋತ್ಸವ ಸಂಭ್ರಮ

0

‘ಬಿರುಮಲೆಬೆಟ್ಟ ಪ್ರವಾಸಿತಾಣವಾಗಿಸಲು ರೂ.2 ಕೋಟಿ ಅನುದಾನ’ – ಶಾಸಕ ಅಶೋಕ್ ರೈ

ಪುತ್ತೂರು: ಬಿರುಮಲೆ ಬೆಟ್ಟವನ್ನು ಹಂತ ಹಂತವಾಗಿ ಅಭಿವೃದ್ಧಿ ಮಾಡಬೇಕೆನ್ನುವ ಪರಿಕಲ್ಪನೆಯೊಂದಿಗೆ ಅದು ಹತ್ತೂರಿಗೆ ಬೆಳಗಬೇಕೆನ್ನುವ ನಿಟ್ಟಿನಲ್ಲಿ ಮೊದಲ ಹಂತದಲ್ಲಿ ರೂ.2 ಕೋಟಿ ಹಣವು ಸರಕಾರದಿಂದ ಬಿಡುಗಡೆಯಾಗಿದ್ದು ಮುಂದಿನ ಕೆಲವು ದಿನಗಳಲ್ಲಿ ಟೆಂಡರ್ ಆಗುವ ಕೆಲಸವಾಗಬೇಕಿದೆ. ಆದ್ದರಿಂದ ಬಿರುಮಲೆ ಬೆಟ್ಟವನ್ನು ರಮಣೀಯವನ್ನಾಗಿಸಿ ಪ್ರೇಕ್ಷಕರ ಪ್ರವಾಸಿತಾಣವನ್ನಾಗಿ ಮಾರ್ಪಡಿಸುವುದೇ ನನ್ನ ಉದ್ಧೇಶವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಬಿರುಮಲೆಬೆಟ್ಟ ಅಭಿವೃದ್ಧಿ ಯೋಜನೆ ಪುತ್ತೂರು ಇವರ ಆಶ್ರಯದಲ್ಲಿ ಫೆ.2 ರಂದು ಬಿರುಮಲೆ ಬೆಟ್ಟದಲ್ಲಿ ಜರಗಿದ ಗಾಳಿಪಟ ಸ್ಪರ್ಧೆ, ಫುಡ್ ಕೋರ್ಟ್, ಫ್ಯಾಶನ್ ಶೋ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ‘ಬಿರುಮಲೋತ್ಸವ-2025’ ಕಾರ್ಯಕ್ರಮವನ್ನು ಅವರು ದೀಪ ಬೆಳಗಿಸಿ, ಗಾಳಿಪಟವನ್ನು ಅನಾವರಣಗೊಳಿಸುತ್ತಾ ಉದ್ಘಾಟಿಸುವ ಮೂಲಕ ಮಾತನಾಡಿದರು.

ಪುತ್ತೂರಿನಲ್ಲಿ ಯಾವುದೇ ಆಕರ್ಷಣೀಯ ತಾಣಗಳು ಕಾಣ ಸಿಗದಿರುವುದರಿಂದ ಯಾತ್ರಿಕರು ಸುಬ್ರಹ್ಮಣ್ಯ, ಧರ್ಮಸ್ಥಳದತ್ತ ಸಾಗುತ್ತಿದ್ದಾರೆ. ಪುತ್ತೂರಿನ ಎತ್ತರದ ಪ್ರದೇಶವಾದ ಈ ಬಿರುಮಲೆ ಬೆಟ್ಟ ಪ್ರವಾಸಿತಾಣವನ್ನಾಗಿ ಮಾಡಿ ಪ್ರವಾಸಿಗರು ಪುತ್ತೂರಿನತ್ತ ಮುಖ ಮಾಡುವುದು ನನ್ನ ಉದ್ಧೇಶವಾಗಿದೆ. ಆದ್ದರಿಂದ ಪ್ರಸಿದ್ಧ ಲೈಟಿಂಗ್ ಕಂಪೆನಿಯವರು ಬಿರುಮಲೆ ಬೆಟ್ಟದಲ್ಲಿ ಬೃಹತ್ ಕಲರ್‌ಫುಲ್ ಲೈಟಿಂಗ್ ಸ್ಕ್ರೀನ್ ಅಳವಡಿಸುವ ಕಾರ್ಯ ಯೋಜನೆಯನ್ನು ಈಗಾಗಲೇ ಸಿದ್ಧಗೊಳಿಸಿದ್ದಾರೆ ಎಂದರು.

ಬಿರುಮಲೆ ಅಭಿವೃದ್ಧಿಗೆ ನಗರಸಭೆ ಯೋಜನೆಯಡಿ ರೂ.80 ಲಕ್ಷ ಅನುದಾನ ನೀಡಲಾಗಿದೆ. ಮಿಂಚು ನಿರೋಧಕ ಟವರ್ ನಿರ್ಮಾಣ ಮಾಡಲಾಗಿದೆ. ಸುಸಜ್ಜಿತ ಸಭಾಭವನ ನಿರ್ಮಾಣದ ಕನಸು ಇದೆ ಎಂದರು. ಭಯದ ವಾತಾವರಣವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ದಿನವಿಡೀ ಪೊಲೀಸ್ ಚೌಕಿಯ ನಿರ್ಮಾಣ ಜೊತೆಗೆ ಬೆಟ್ಟವನ್ನು ಸೌಂದರೀಕರಣಗೊಳಿಸುವ ವಿವಿಧ ಕೆಲಸ ಕಾರ್ಯಗಳು ಮಾಡಲಿಕ್ಕಿದೆ. ಒಟ್ಟಾರೆಯಾಗಿ ಬಿರುಮಲೆ ಬೆಟ್ಟವನ್ನು ಆಕರ್ಷಣೆಯ ಕೇಂದ್ರವನ್ನಾಗಿ ಮಾಡಬೇಕು ಮತ್ತು ಹೆಚ್ಚೆಚ್ಚು ಪ್ರವಾಸಿಗಳು ಬಿರುಮಲೆ ಬೆಟ್ಟದತ್ತ ಬರಬೇಕು ಎನ್ನುವುದೇ ನನ್ನ ಉದ್ಧೇಶವಾಗಿದೆ ಎಂದರು.


ನಗರಸಭೆಯು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ-ಬಾಲಚಂದ್ರ:
ಪುತ್ತೂರು ನಗರಸಭೆ ಉಪಾಧ್ಯಕ್ಷ ಕೆ.ಬಾಲಚಂದ್ರ ಮಾತನಾಡಿ, ಪುತ್ತೂರು ನಗರಸಭೆಯು ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ. ಶಾಸಕರ ಅಭಿವೃದ್ಧಿ ಯೋಜನೆ, ಯೋಚನೆಗಳಿಗೆ ನಗರಸಭೆಯು ಯಾವಾಗಲೂ ಕೈಜೋಡಿಸುತ್ತದೆ. ಶಾಸಕರ ಯೋಚನೆಗಳು ಸಕಾರಾತ್ಮಕವಾಗಿದ್ದು ಅವುಗಳ ಅನುಷ್ಠಾನಗಳಿಗೆ ನಾವು ಸದಾ ಬದ್ಧರಿದ್ದೇವೆ ಎಂದು ಹೇಳಿ ಬಿರುಮಲೆ ಬೆಟ್ಟದ ಅಭಿವೃದ್ಧಿಯ ಕನಸನ್ನು ಹೊತ್ತು ನಮ್ಮನ್ನು ಅಗಲಿದ ಕೋಚಣ್ಣ ರೈಯವರಿಗೆ ಇದೀಗ ಬಿರುಮಲೆ ಬೆಟ್ಟ ಅಭಿವೃದ್ಧಿಯತ್ತ ಸಾಗುತ್ತಿರುವುದು ನೋಡಿದಾಗ ಖಂಡಿತಾ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂದರು.


ಬಿರುಮಲೋತ್ಸವ ಪುತ್ತೂರು ಉತ್ಸವ ಆಗಲಿ-ಸುಬ್ಬಯ್ಯ:
ಅರಣ್ಯ ಇಲಾಖೆಯ ಪುತ್ತೂರು ಉಪವಿಭಾಗದ ಎಸಿಎಫ್ ಸುಬ್ಬಯ್ಯ ಮಾತನಾಡಿ, ದಿವಂಗತ ಕೋಚಣ್ಣ ರೈಯವರ ಬಿರುಮಲೆ ಬೆಟ್ಟದ ಅಭಿವೃದ್ಧಿ ಕನಸಿಗೆ ಅರಣ್ಯ ಇಲಾಖೆ ಸದಾ ಸ್ಪಂದಿಸುತ್ತಲೇ ಬಂದಿದೆ. ಇಲ್ಲಿರುವ ಅಕೇಶಿಯ ಮರಗಳನ್ನು ಕಡಿದು ಅವುಗಳ ಜಾಗದಲ್ಲಿ ಔಷಧೀಯ ಹಾಗೂ ಹಣ್ಣು ಹಂಪಲುಗಳ ಗಿಡಗಳನ್ನು ನೆಡುವ ಮೂಲಕ ಪೋಷಿಸುತ್ತಿದ್ದು ಬಿರುಮಲೋತ್ಸವ ಮುಂದಿನ ದಿನಗಳಲ್ಲಿ ಪುತ್ತೂರು ಉತ್ಸವ ಆಗಲಿ ಎಂದರು.


ಸಮಾನ ಮನಸ್ಕರು ಒಗ್ಗೂಡಿ ಬಿರುಮಲೆ ಬೆಟ್ಟದ ಅಭಿವೃದ್ಧಿಗೆ ಕೈಜೋಡಿಸಿರುವುದು ಶ್ಲಾಘನೀಯ-ದೇವಿಪ್ರಸಾದ್ ಶೆಟ್ಟಿ:
ಬ್ಯಾಂಕ್ ಆಫ್ ಬರೋಡದ ರೀಜನಲ್ ಮ್ಯಾನೇಜರ್ ದೇವಿಪ್ರಸಾದ್ ಶೆಟ್ಟಿ ಮಾತನಾಡಿ, ಮೂವತ್ತು ವರ್ಷದ ಹಿಂದೆ ಬರಡು ಭೂಮಿಯಾಗಿರುವ ಈ ಬಿರುಮಲೆ ಪ್ರದೇಶವು ಇಂದು ಅಭಿವೃದ್ಧಿಯತ್ತ ಸಾಗುತ್ತಿದೆ. ಯಾವುದೇ ಧಾರ್ಮಿಕ ಕೇಂದ್ರಗಳು ಅಭಿವೃದ್ಧಿ ಹೊಂದಲು ಅಲ್ಲಿ ಭಕ್ತಾಧಿಗಳ ನೆರವು ಇರುತ್ತದೆ. ಶಿಕ್ಷಣ ಕೇಂದ್ರಗಳು ಅಭಿವೃದ್ಧಿ ಹೊಂದಲು ಅಲ್ಲಿ ಎಸ್.ಡಿ.ಎಂ.ಸಿ, ಹಿರಿಯ ವಿದ್ಯಾರ್ಥಿಗಳಿರುತ್ತಾರೆ. ಆದರೆ ಬೆಟ್ಟದ ಅಭಿವೃದ್ಧಿ ಮಾಡಲು ಯಾರು ಮುಂದೆ ಬರುತ್ತಾರೆ?. ಬಿರುಮಲೆ ಬೆಟ್ಟವು ಆಕರ್ಷಣೆಯ ತಾಣವಾಗಬೇಕು ಎಂಬ ನಿಟ್ಟಿನಲ್ಲಿ ಸಮಾನ ಮನಸ್ಕರು ಒಗ್ಗೂಡಿ ಈ ಬಿರುಮಲೆ ಬೆಟ್ಟದ ಅಭಿವೃದ್ಧಿಯತ್ತ ಕೈಜೋಡಿಸಿರುವುದು ಶ್ಲಾಘನೀಯ ಎಂದರು.


ಗಾಳಿಪಟ ಸ್ಪರ್ಧೆಯ ಫಲಿತಾಂಶ;
ಪ್ರಾಥಮಿಕ ವಿಭಾಗ:ಪ್ರಶ್ನಾಹಿ(ಪ್ರ), ಗಗನ್ ಕುಸುಮ್(ದ್ವಿ), ಪ್ರೌಢಶಾಲಾ ವಿಭಾಗ:ನಿಖಿಲ್ ಜೆ.ಎನ್(ಪ್ರ), ಕಾರ್ತಿಕ್(ದ್ವಿ), ಕಾಲೇಜು ವಿಭಾಗ:ಪರಮೇಶ್ವರ(ಪ್ರ), ಪೂಜಿತ್(ದ್ವಿ), ಸ್ಥಳದಲ್ಲಿ ತಯಾರಿಸಿದ್ದು:ಸಾಯಿರಾಂ(ಪ್ರ), ಪದ್ಮಪ್ರಸಾದ್ ಜೈನ್(ದ್ವಿ), ಸಾರ್ವಜನಿಕ(ಮುಕ್ತ) ವಿಭಾಗ: ಪರಮೇಶ್ವರ(ಪ್ರ), ಮಂಜುನಾಥ(ದ್ವಿ), ತೇಜಸ್(ಪ್ರೋತ್ಸಾಹಕ), ಅತೀ ಎತ್ತರದಲ್ಲಿ ಹಾರಿಸಿದ ಗಾಳಿಪಟ:ಆಮೋಘ್ ಆಳ್ವ, ಉತ್ತಮ ವಿನ್ಯಾಸದ ಗಾಳಿಪಟ:ಪೂಜಿತ್‌ರವರು ಆಯ್ಕೆಯಾಗಿರುತ್ತಾರೆ. ಈ ಸ್ಪರ್ಧೆಯು ರೋಟರಿ ಸೆಂಟ್ರಲ್ ಸ್ಥಾಪಕಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಸಾಜರವರು ಆಯೋಜಿಸಿದ್ದು, ತೀರ್ಪುಗಾರರಾಗಿ ಪ್ರೊ|ಝೇವಿಯರ್ ಡಿ’ಸೋಜ, ವಿ.ಜೆ ಫೆರ್ನಾಂಡೀಸ್, ಹೆರಾಲ್ಡ್ ಮಾಡ್ತಾ, ಪ್ರೊ|ದತ್ತಾತ್ರೇಯ ರಾವ್‌ರವರು ಸಹಕಾರ ನೀಡಿರುತ್ತಾರೆ.


ಸ್ವಾದಿಷ್ಟ ತಿನಸುಗಳ ಫುಡ್‌ಕೋರ್ಟ್:
ಬಿರುಮಲೆಬೆಟ್ಟದಲ್ಲಿನ ರಮಣೀಯ ತಾಣದಲ್ಲಿ ವಿವಿಧ ಸ್ವಾದಿಷ್ಠ ತಿಂಡಿ ತಿನಸುಗಳ ಫುಡ್ ಕೋರ್ಟ್‌ನ ಮಳಿಗೆಯನ್ನು ತೆರೆದು ಪ್ರೇಕ್ಷಕರಿಗೆ ಉಣಬಡಿಸುವ ಮೂಲಕ ಕಾರ್ಯಕ್ರಮವನ್ನು ಆಹ್ಲಾದಿಸುವಂತೆ ಮಾಡಿದೆ. ಕಾರ್ಯಕ್ರಮಕ್ಕೆ ಮಕ್ಕಳು, ಹಿರಿಯರೊಂದಿಗೆ ಆಗಮಿಸಿದ ಕುಟುಂಬಕ್ಕೆ ಫುಡ್‌ಕೋರ್ಟ್ ಮಳಿಗೆಯು ವಿಶೇಷ ಉತ್ತೇಜನ ನೀಡಿದಂತಿತ್ತು. 15ಕ್ಕೂ ಮಿಕ್ಕಿ ಫುಡ್ ಕೋರ್ಟ್‌ನಲ್ಲಿ ಗ್ರಾಹಕರು ತಮ್ಮ ಸ್ವಾದಿಷ್ಟ ತಿಂಡಿ-ತಿನಸುಗಳನ್ನು ಸವಿದು ಕಾರ್ಯಕ್ರಮಕ್ಕೆ ಮೆರುಗು ನೀಡಿದ್ದರು.


ಕರೋಕೆ ಹಾಡುಗಳು/ಸಾಂಸ್ಕೃತಿಕ ಕಾರ್ಯಕ್ರಮ:
ಒಂದೆಡೆ ಗಾಳಿಪಟ ಸ್ಪರ್ಧೆ, ಮತ್ತೊಂದೆಡೆ ಫುಡ್‌ಕೋರ್ಟ್ ನಡೆಯುತ್ತಿದ್ದಾಗ ಇತ್ತ ವೇದಿಕೆಯಲ್ಲಿ ಪೊರ್ಲು ಇವೆಂಟ್ಸ್ ನೇತೃತ್ವದಲ್ಲಿ ಕರೋಕೆ ಹಾಡುಗಳು, ಝೀ ಕನ್ನಡ ಸರಿಗಮಪ ಇದರ ಸಮನ್ವಿ ರೈ ಮದಕರವರಿಂದ ಸುಮಧುರ ಹಾಡು, ಅಕ್ಷಯ ಕಾಲೇಜು ವಿದ್ಯಾರ್ಥಿಗಳಿಂದ ಫ್ಯಾಶನ್ ಶೋ, ವರ್ಣಕುಟೀರ ತಂಡದಿಂದ ಪ್ರಕೃತಿಗೆ ಸಂಬಂಧಪಟ್ಟ ಲೈಟ್ಸ್‌ಗಳಿಂದ ಆವೃತ್ತಗೊಂಡ ನೃತ್ಯ, ಕಾಮಿಡಿ ಪ್ರಹಸನ, ಸಿನಿಮಾ ಪ್ರೊಮೊ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು ಪ್ರೇಕ್ಷಕರ ಮನ ತಣಿಸಿದವು. ಈ ಕಾರ್ಯಕ್ರಮದಲ್ಲಿ ಭಕ್ತಿಗೀತೆಗಳು, ಹಿಂದಿ, ಕನ್ನಡ ಚಲನಚಿತ್ರ ಗೀತೆಗಳು, ಜೊತೆಗೆ ಕಾರ್ಯಕ್ರಮಕ್ಕೆ ಆಗಮಿಸಿದ ಹಾಡುಗಾರರು ಹಾಡುವ ಮೂಲಕ ಹಾಡುಗಾರರಿಗೆ ಒಂದು ವೇದಿಕೆಯನ್ನು ನಿರ್ಮಿಸಿಕೊಡುವ ಮೂಲಕ ಹಾಡುಗಾರರನ್ನು ಹುರಿದುಂಬಿಸುವ ಕಾರ್ಯ ಅಲ್ಲಿ ನಡೆದಿತ್ತು ಎನ್ನಬಹುದು.


ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈಯವರನ್ನು ಕಾರ್ಯಕ್ರಮದಲ್ಲಿ ಸಂಘಟಕರ ವತಿಯಿಂದ ಸನ್ಮಾನಿಸಲಾಯಿತು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ ಶಿವಾನಂದ, ಪೊರ್ಲು ಇವೆಂಟ್ಸ್ ಮುಖ್ಯಸ್ಥ ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಜೆಸಿಐ ಪುತ್ತೂರು ಅಧ್ಯಕ್ಷ ಭಾಗ್ಯೇಶ್ ರೈ, ಮಾರ್ಕ್ ಟೆಲಿಕಾಂನ ಶಶಿರಾಜ್ ರೈ, ಅಕ್ಷಯ ಕಾಲೇಜು ಸಂಚಾಲಕ ಜಯಂತ್ ನಡುಬೈಲು, ರೋಟರಿ ಕ್ಲಬ್ ಪುತ್ತೂರು ಬಿರುಮಲೆ ಹಿಲ್ಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ದಿ.ಕೋಚಣ್ಣ ರೈಯವರ ಪುತ್ರ ಡಾ.ಮಂಜುನಾಥ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಸಮಿತಿ ಅಧ್ಯಕ್ಷ ಎ.ಜೆ ರೈರವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಸದಸ್ಯ ಪ್ರೊ.ದತ್ತಾತ್ರೇಯ ರಾವ್ ಪ್ರಾರ್ಥಿಸಿದರು. ಕು.ಅಪೂರ್ವ ರೈ ಚಿಲ್ಮೆತ್ತಾರುರವರ ಪ್ರಾರ್ಥನಾ ನೃತ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆಯ ಸದಸ್ಯ ಪ್ರೊ|ಝೇವಿಯರ್ ಡಿ’ಸೋಜ ವಂದಿಸಿದರು. ಮಮತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


ದಿ.ಕೋಚಣ್ಣ ರೈಯವರ ಕನಸು ಬಿರುಮಲೆ ಬೆಟ್ಟ..
ಬಿರುಮಲೆ ಬೆಟ್ಟವು ಪುತ್ತೂರಿನ ರಮಣೀಯ ತಾಣವಾಗಬೇಕು, ಆಕರ್ಷಣೆಯ ಕೇಂದ್ರವಾಗಬೇಕು, ಶ್ರೀ ಮಹಾಲಿಂಗೇಶ್ವರ ದೇವರ ದರ್ಶನ ಪಡೆದ ಬಳಿಕ ಈ ಬೆಟ್ಟಕ್ಕೆ ಆಗಮಿಸಿ ಪುನೀತರಾಗಬೇಕು ಎಂಬ ನಿಟ್ಟಿನಲ್ಲಿ ಬರಡು ಪ್ರದೇಶವಾದ ಈ ಬಿರುಮಲೆ ಬೆಟ್ಟವನ್ನು ಅಂದಿನ ತಹಶಿಲ್ದಾರ್ ಕೋಚಣ್ಣ ರೈಯವರು ಬಿರುಮಲೆ ಹಿಲ್ ಪ್ರಾಜೆಕ್ಟ್ ಎಂಬ ಸಮಿತಿಯನ್ನು ರಚಿಸಿ ನಾಂದಿ ಹಾಡಿದ್ದರು. ಬಳಿಕ ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಎ.ವಿ ನಾರಾಯಣ ರೈಯವರು ಅದನ್ನು ಮುಂದುವರೆಸಿದ್ದರು ಎಂದ ಅವರು ಈ ಬೆಟ್ಟದ ಅಭಿವೃದ್ಧಿಗೆ ಮಾಜಿ ಶಾಸಕರಾದ ಶಕುಂತಲಾ ಶೆಟ್ಟಿ, ಸಂಜೀವ ಮಠಂದೂರು, ಮಾಜಿ ಅರಣ್ಯ ಸಚಿವ ರಮಾನಾಥ ರೈಯವರೂ ಕೂಡ ಶ್ರಮಿಸಿರುತ್ತಾರೆ. ಪ್ರಸ್ತುತ ಶಾಸಕ ಅಶೋಕ್ ರೈಯವರಿಂದ ಬಿರುಮಲೆ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳು ಬರಲಿಕ್ಕಿದೆ.
-ಎ.ಜೆ ರೈ, ಅಧ್ಯಕ್ಷರು, ಬಿರುಮಲೆ ಬೆಟ್ಟ ಅಭಿವೃದ್ಧಿ ಯೋಜನೆ ಸಮಿತಿ

275 ಫೀಟ್ ಎತ್ತರದಲ್ಲಿ ರಾಷ್ಟ್ರಧ್ವಜ..
ಚಿತ್ರಕಲಾ ಶಿಕ್ಷಕ ಜಗನ್ನಾಥ್ ಅರಿಯಡ್ಕರವರ ಬಿಡಿಸಿದ ಬಿರುಮಲೆ ಬೆಟ್ಟದ ಅಭಿವೃದ್ದಿಯ ಹರಿಕಾರ ದಿ.ಕೋಚಣ್ಣ ರೈಯವರ ರೇಖಾ ಚಿತ್ರವನ್ನು ಶಾಸಕ ಅಶೋಕ್ ಕುಮಾರ್ ರೈಯವರು ಅನಾವರಣಗೊಳಿಸಿ ಮಾತನಾಡಿ, ಸರಕಾರ ಅನುದಾನ ಕೊಡುವುದು ಜನರ ದುಡ್ಡಿನ ತೆರಿಗೆಯಿಂದ. ಶಾಸಕರ ಹಣದಿಂದಲ್ಲ. ಬಿರುಮಲೆ ಬೆಟ್ಟದಲ್ಲಿ ರೂ.1 ಕೋಟಿ ವೆಚ್ಚದಲ್ಲಿ 275 ಫೀಟ್ ಎತ್ತರದಲ್ಲಿ ರಾಷ್ಟ್ರಧ್ವಜವನ್ನು ಹಾರಿಸಬೇಕು ಎನ್ನುವ ಕನಸು ಇದೆ ಎಂದರು.

ಶಾರ್ಟ್ ವಿಡಿಯೋ ಸ್ಪರ್ಧೆ..
ಬಿರುಮಲೋತ್ಸವ ಕಾರ್ಯಕ್ರಮದ ಒಟ್ಟು ಹೈಲೈಟ್ ವಿಡಿಯೋವನ್ನು ಆಕರ್ಷಕ ರೀತಿಯಲ್ಲಿ ಒಂದು ನಿಮಿಷ(ಶಾರ್ಟ್ ವಿಡಿಯೋ)ಕ್ಕೆ ಮೀರದಂತೆ ಕ್ರಿಯೇಟಿವ್ ಆಗಿ ಪ್ರಸ್ತುತಪಡಿಸುವ ವಿಶೇಷ ಸ್ಪರ್ಧೆಯಲ್ಲಿ ಪ್ರೇಕ್ಷಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿರುವ ದೃಶ್ಯ ಕಂಡು ಬಂದಿತ್ತು. ಅವುಗಳಲ್ಲಿ ಒಂದು ಉತ್ತಮ ಶಾರ್ಟ್ ವಿಡಿಯೋವನ್ನು ಆಯ್ಕೆ ಮಾಡಲಾಗುತ್ತಿದ್ದು ಫೆ.9 ರಂದು ಬಿರುಮಲೆ ಬೆಟ್ಟದಲ್ಲಿ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಬಹುಮಾನವನ್ನು ವಿತರಿಸಲಾಗುತ್ತದೆ.

LEAVE A REPLY

Please enter your comment!
Please enter your name here