ಪುತ್ತೂರು:ಮಹತೋಭಾರ ಶ್ರೀ ಮಹಾಲೀಂಗೇಶ್ವರ ದೇವಸ್ಥಾನಕ್ಕೆ 1920ರಿಂದ ನೆಲಬಾಡಿಗೆ ಪಾವತಿಸಿಕೊಂಡು ಬರುತ್ತಿರುವ 0.16 ಎಕ್ರೆ ಜಮೀನಿನಲ್ಲಿದ್ದ ತಮ್ಮ ತಾಯಿಯ ಹೆಸರಲ್ಲಿದ್ದ ಮನೆಗಳನ್ನು ಯಾವುದೇ ನೋಟೀಸ್ ನೀಡದೆ ಫೆ.3ರಂದು ಬೆಳಿಗ್ಗೆ ಕಾನೂನು ಬಾಹಿರವಾಗಿ ಧ್ವಂಸಗೊಳಿಸಲಾಗಿದೆ ಎಂದು ಆರೋಪಿಸಿ ಉಜಿರೆ, ರಾಘವೇಂದ್ರ ನಿಲಯದ ದಿ.ಎಸ್.ಎಸ್.ಐತಾಳ್ ಎಂಬವರ ಮಗ, ನ್ಯಾಯವಾದಿ ವಿಜಯ ರಾಘವೇಂದ್ರ ಅವರು ಪುತ್ತೂರು ಶ್ರೀ ಮಹಾಲೀಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಈಶ್ವರ್ ಭಟ್ ಪಂಜಿಗುಡ್ಡೆ ಮತ್ತು ಶಾಸಕ ಅಶೋಕ್ ಕುಮಾರ್ ರೈ ಅವರ ವಿರುದ್ದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರಿಗೆ ದೂರು ನೀಡಿದ್ದಾರೆ.
‘ನನ್ನ ಮುತ್ತಜ್ಜ ವಿಷ್ಣಯ್ಯ ಹೊಳ್ಳ ಎಂಬವರು ಪುತ್ತೂರು ಕಸಬಾ ಸ.ನಂ.78/1ರಲ್ಲಿ 16 ಸೆಂಟ್ಸ್ ಜಮೀನನ್ನು 1920ರಲ್ಲಿ ಮಹಾಲಿಂಗೇಶ್ವರ ದೇಗುಲದಿಂದ ನೆಲಬಾಡಿಗೆ ನೆಲೆಯಲ್ಲಿ ಪಡೆದುಕೊಂಡಿದ್ದು ದೇವಳಕ್ಕೆ ನಿಯಮಿತವಾಗಿ ನೆಲ ಬಾಡಿಗೆ ಪಾವತಿಸಿಕೊಂಡು ಬರುತ್ತಿದ್ದರು.ಅವರ ನಿಧನದ ನಂತರ ಅವರ ಪುತ್ರ ಗಣಪತಿ ವಿಷ್ಣು ಹೊಳ್ಳ ಅವರು ನೆಲ ಬಾಡಿಗೆ ಪಾವತಿಸುತ್ತಿದ್ದರು.ಅಜ್ಜ ಗಣಪತಿ ವಿಷ್ಣು ಹೊಳ್ಳ ಅವರು ದೇವಳಕ್ಕೆ ಸಂಬಂಧಿಸಿದವರ ಒಪ್ಪಿಗೆಯೊಂದಿಗೆ ಮೂರು ವಸತಿ ಕಟ್ಟಡಗಳನ್ನು ಸ್ವಂತ ಖರ್ಚಿನಲ್ಲಿ ನಿರ್ಮಿಸಿದ್ದರು.ಬಳಿಕ ಇದನ್ನು ನಾಲ್ಕು ಮನೆಗಳಾಗಿ ಸಬ್ಡಿವೈಡ್ ಮಾಡಿ ಎಲ್ಲ ಆರು ವಸತಿ ಕಟ್ಟಡಗಳಿಗೂ ನಗರಸಭೆಯಿಂದ ಪ್ರತ್ಯೇಕ ಡೋರ್ ನಂಬರ್, ಖಾತಾ ಇತ್ಯಾದಿಗಳನ್ನು ನೀಡಲಾಗಿದೆ.ಅಜ್ಜ ಗಣಪತಿ ವಿಷ್ಣು ಹೊಳ್ಳ ಅವರ ಸಾವಿನ ಬಳಿಕ ಅವರ ವಿಧವೆ ಪತ್ನಿ ಶಾರದಮ್ಮ, ಅವರ ಸಾವಿನ ಬಳಿಕ ತನ್ನ ಅಮ್ಮ ಶ್ರೀಮತಿ ಜಯಶ್ರೀ ಐತಾಳ್ ಅವರು ಸ್ಥಳ ಬಾಡಿಗೆ ಪಾವತಿಸಿಕೊಂಡು ಬರುತ್ತಿದ್ದರು.ಅವರ ಸಾವಿನ ಬಳಿಕ ನಾನು ದೇವಳಕ್ಕೆ ನೆಲ ಬಾಡಿಗೆ ಪಾವತಿಸಿಕೊಂಡು ಬರುತ್ತಿದ್ದೇನೆ.ಫೆ.3ರಂದು ಬೆಳಿಗ್ಗೆ 9.30ರ ಸುಮಾರಿಗೆ ಶಾಸಕ ಅಶೋಕ್ ರೈಯವರ ಚಿತಾವಣೆ ಮೇರೆಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ್ ಭಟ್ ಅವರು ತನ್ನ ಸಹಚರರೊಂದಿಗೆ ಬಂದು ಜೆಸಿಬಿ ಯಂತ್ರದ ಸಹಾಯದಿಂದ ಪ್ರತ್ಯೇಕ ಕದ ಸಂಖ್ಯೆಯಿರುವ 6 ವಸತಿ ಕಟ್ಟಡಗಳನ್ನು ಧ್ವಂಸ ಮಾಡಿರುತ್ತಾರೆ.ಇದು ಅಧಿಕಾರದ ದುರುಪಯೋಗವಾಗಿದ್ದು,ನನ್ನ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ಅವರು ಆರೋಪಿಸಿದ್ದು,ಆಪಾದಿತರ ವಿರುದ್ಧ ಎಫ್ಐಆರ್ ದಾಖಲಿಸಿ ಕಾನೂನು ಕ್ರಮಕೈಗೊಳ್ಳುವಂತೆ ಕೋರಿದ್ದಾರೆ.ದಕ.ಜಿಲ್ಲಾಧಿಕಾರಿ, ಪುತ್ತೂರು ಡಿವೈಎಸ್ಪಿ,ನಗರ ಠಾಣೆ ಪೊಲೀಸ್ ನಿರೀಕ್ಷಕ,ಪೊಲೀಸ್ ಉಪನಿರೀಕ್ಷಕ, ನಗರ ಸಭೆ ಪೌರಾಯುಕ್ತರು,ರಾಜ್ಯ ಮಾನವ ಹಕ್ಕುಗಳ ಆಯೋಗ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ ದೂರಿನ ಪ್ರತಿಯನ್ನು ರವಾನಿಸಲಾಗಿದೆ ಎಂದು ದೂರಿನಲ್ಲಿ ನಮೂದಿಸಿದ್ದಾರೆ.
ಅಧಿಕೃತ ನೋಟೀಸ್ ಬಂದಿಲ್ಲ
ಎಸ್ಪಿಯವರಿಗೆ ದೂರು ನೀಡಿರುವ ಕುರಿತು ನಮಗೆ ಅಧಿಕೃತ ನೋಟೀಸ್ ಬಂದಿಲ್ಲ.ಬಂದ ಬಳಿಕ ವಕೀಲರ ಸಲಹೆ ಪಡೆದು ಮುಂದಿನ ಕ್ರಮ ಕೈಗೊಳ್ಳುತ್ತೇವೆ-
ಈಶ್ವರ ಭಟ್ ಪಂಜಿಗುಡ್ಡೆ
ಅಧ್ಯಕ್ಷರು,ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ
ಮಹಾಲಿಂಗೇಶ್ವರನಿಗಾಗಿ ಕೇಸು ಆಗುವುದಿದ್ದರೆ ಆಗಲಿ
ಮಹಾಲಿಂಗೇಶ್ವರ ದೇವಳದ ಅಭಿವೃದ್ಧಿಗಾಗಿ ನಾವು ಕೆಲಸ ಮಾಡುತ್ತಿದ್ದೇವೆ.ವೈಯಕ್ತಿಕವಾಗಿ ನಮಗಾಗಿ ಅಲ್ಲ.ಹೀಗಿದ್ದರೂ ನನ್ನ ಮೇಲೆ ದೂರು ನೀಡಿದರೂ ಪರವಾಗಿಲ್ಲ.ಮಹಾಲಿಂಗೇಶ್ವರನಿಗಾಗಿ ನನ್ನ ಮೇಲೆ ಕೇಸು ಆಗುವುದಿದ್ದರೆ ಆಗಲಿ.ಅದು ಮಹಾಲಿಂಗೇಶ್ವರನಿಗೆ ಬಿಟ್ಟದ್ದು-
ಅಶೋಕ್ ಕುಮಾರ್ ರೈ, ಶಾಸಕರು,ಪುತ್ತೂರು