500ಕ್ಕೂ ಮಿಕ್ಕಿ ಮಂದಿಯಿಂದ ಸೂರ್ಯ ನಮಸ್ಕಾರ
ಪುತ್ತೂರು : ಎಸ್ಪಿವೈಎಸ್ಎಸ್ ಯೋಗ ಸಮಿತಿಯ ಸಹಕಾರದಲ್ಲಿ ರಥಸಪ್ತಮಿಯ ಪ್ರಯುಕ್ತ, ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ಬ್ರಹ್ಮರಥ ಬೀದಿಯಲ್ಲಿ ವಿಶೇಷ ಸಾಮೂಹಿಕ 108 ಸೂರ್ಯ ನಮಸ್ಕಾರ ಕಾರ್ಯಕ್ರಮ ಫೆ.04ರಂದು ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ನಡೆಯಿತು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವೇ ಮೂ ವಿ.ಎಸ್. ಭಟ್. ಕಾರ್ಯಕ್ರಮ ಸಂಚಾಲಕ ಭಾಸ್ಕರ್, ತಾಲೂಕು ಸಂಚಾಲಕರಾದ ಕೃಷ್ಣಾನಂದ, ಸಹಸಂಚಾಲಕಿ ವೀಣಾ ಪದ್ಮನಾಭ್, ಪ್ರಮುಖರುಗಳಾದ ಪುಷ್ಪರಾಜ್, ಹರಿಪ್ರಸಾದ, ಸುದೇಶರವರು ಜತೆಯಾಗಿ ದೀಪಬೆಳಗಿಸುವ ಮೂಲಕ ಚಾಲನೆ ನೀಡಿದರು. ಭಜನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಒಟ್ಟು 3 ಆವೃತ್ತಿಗಳಲ್ಲಿ 108 ಸುತ್ತು ಸೂರ್ಯ ನಮಸ್ಕಾರ ಸ್ತೋತ್ರ ಪಠಣದೊಂದಿಗೆ ನಡೆದು 6.30ಕ್ಕೆ ಕಾರ್ಯಕ್ರಮ ಸಮಾಪನಗೊಂಡಿತು. ಕಾರ್ಯಕ್ರಮದಲ್ಲಿ ರಥಸಪ್ತಮಿಯ ಮಹತ್ವವನ್ನು ಬನ್ನೂರು ಶಾಖೆಯ ಕಾವ್ಯ ಅವರು ಬೌದ್ಧಿಕ್ ನೀಡಿದರು.
500ಕ್ಕೂ ಮಿಕ್ಕಿ ಮಂದಿ ಭಾಗಿ:
ಸುಮಾರು 500ಕ್ಕೂ ಮಿಕ್ಕಿ ಸಂಖ್ಯೆಯಲ್ಲಿ ಸುಳ್ಯ, ಬೆಳಿಯೂರುಕಟ್ಟೆ ಹಾಗೂ ಪುತ್ತೂರು ತಾಲೂಕಿನ ಯೋಗಬಂಧುಗಳು ಭಾಗವಹಿಸಿದ್ದರು. ಶ್ರೀ ಕ್ಷೇತ್ರದ ರಥಬೀದಿಯಲ್ಲಿ ನೇರಸಾಲಿನೊಂದಿಗೆ ಶಿಸ್ತುಬದ್ಧವಾಗಿ ಸೂರ್ಯನಮಸ್ಕಾರ ಮಾಡಲಾಯಿತು. ತಾಲೂಕು ಶಿಕ್ಷಣ ಪ್ರಮುಖರಾದ ವಸಂತ, ಸತೀಶರವರ ನೇತೃತ್ವದಲ್ಲಿ ಸೂರ್ಯನಮಸ್ಕಾರದ ಮಾರ್ಗದರ್ಶನ ನೀಡಿದರು. ಪುತ್ತೂರಿನ ವಿವಿಧ ಶಾಖೆಯ ಬಂಧುಗಳು ವೇದಿಕೆಯಲ್ಲಿ ಪ್ರಾತ್ಯಕ್ಷಿಕೆಯಲ್ಲಿ ಜೋಡಿಸಿಕೊಂಡರು. ಮಹಾಲಿಂಗೇಶ್ವರ ಶಾಖೆಯ ಪ್ರಸನ್ನ ಸ್ವಾಗತಿಸಿ, ಕಾರ್ಯಕ್ರಮ ಸಂಚಾಲಕ ಭಾಸ್ಕರ್ ವಂದಿಸಿದರು. ಸಂಪ್ಯ ಶಾಖೆಯ ಶಿಲ್ಪಾ ಕಾರ್ಯಕ್ರಮ ನಿರೂಪಿಸಿದರು. ಪ್ರಾಂತ ಸಂಘಟನಾ ಪ್ರಮುಖರಾದ ಹರೀಶ್ ಕೋಟ್ಯಾನ್, ಜಿಲ್ಲಾ ಸಂಚಾಲಕ ನಾರಾಯಣ ಪಾವಂಜೆ, ಪ್ರಾಂತ ಪ್ರಮುಖರು ಶಿವಾನಂದ ರೈ, ಜಿಲ್ಲಾ ಪ್ರಮುಖರಾದ ಸುಬ್ರಹ್ಮಣ್ಯ ಭಟ್ ಮತ್ತಿತರ ಜಿಲ್ಲಾ ಪ್ರಮುಖರು ಭಾಗವಹಿಸಿದ್ದರು.