ರಾಮಕುಂಜ: ದ.ಕ.ಜಿಲ್ಲಾಡಳಿತದ ಸಹಭಾಗಿತ್ವದಲ್ಲಿ ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ವಠಾರದಲ್ಲಿ ನಡೆಯುತ್ತಿರುವ ಎಂಡೋ ಸಲ್ಫಾನ್ ಸಂತ್ರಸ್ತರ ಪುನರ್ವಸತಿ ಕೇಂದ್ರದ ನಿರ್ವಹಣಾ ಜವಾಬ್ದಾರಿಯನ್ನು ಬೆಂಗಳೂರಿನ ಉದ್ಬವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಹಸ್ತಾಂತರಿಸಲಾಯಿತು.
![](https://puttur.suddinews.com/wp-content/uploads/2025/02/koila-2-2-1.jpg)
ಕೇಂದ್ರದ ನಿರ್ವಹಣಾ ಜವಾಬ್ದಾರಿಯನ್ನು ಹೊತ್ತಿದ್ದ ಬೆಳ್ತಂಗಡಿಯ ಸಿಯೋನ್ ಆಶ್ರಮ ಟ್ರಸ್ಟ್‌ನ ಟೆಂಡರ್ ಅವಧಿ ಜ.31ರಂದು ಮುಗಿದಿರುವ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ಉದ್ಬವ್ ಶೈಕ್ಷಣಿಕ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಅಧಿಕಾರ ಹಸ್ತಾಂತರ ಮಾಡಲಾಯಿತು. ಫೆ.1ರಂದು ಬೆಳ್ತಂಗಡಿ ಸಿಯೋನ್ ಆಶ್ರಮ ಟ್ರಸ್ಟ್‌ನ ಮುಖ್ಯಸ್ಥ ಯು.ಸಿ.ಪೌಲೋಸ್‌ರವರು ಜಿಲ್ಲಾ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಜೆಸಿಂತಾ ಡಿ.ಸೋಜ ಅವರಿಗೆ ಅಧಿಕಾರ ಹಸ್ತಾಂತರಿಸಿದರು. ಫೆ.3ರಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ ಅವರು ಉದ್ಬವ್ ಶೈಕ್ಷಣಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಮುಖ್ಯಸ್ಥೆ ಚಂದ್ರಕಲಾ ಹಾಗೂ ಶಿವಾನಂದ್ ಅವರಿಗೆ ನಿರ್ವಹಣಾ ಅಧಿಕಾರವನ್ನು ಹಸ್ತಾಂತರಿಸಿದರು.
![](https://puttur.suddinews.com/wp-content/uploads/2025/02/koila-3-1.jpg)
ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಮಾರ್, ಜಿಲ್ಲಾ ಎಂಡೋ ಸಲ್ಫಾನ್ ಸಂಯೋಜಕ ಸಾಜುದ್ದೀನ್, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಕೊಯಿಲ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರವಿಶಂಕರ್, ಹಿರಿಯ ಆರೋಗ್ಯ ಸುರಕ್ಷಾಧಿಕಾರಿ ಮರಿಯಮ್ಮ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಉಮೇಶ್, ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾ ಸುಭಾಸ್ ಶೆಟ್ಟಿ ಉಪಸ್ಥಿತರಿದ್ದರು.