ಬಹುಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿದೆ 4.5 ಕಿ ಮೀ ರಸ್ತೆ
ಪುತ್ತೂರು: ಬೆಳ್ಳಿಪ್ಪಾಡಿ ಗ್ರಾಮದ ಬೇರಿಕೆ, ಕುದುಂಬ್ಲಗುರಿ, ಜರಿ-ಕೊಟ್ಲಾರು-ನೆಕ್ಕರೆ-ದೇವಸ್ಯ-ಕಜೆ ಕೋಡಿಂಬಾಡಿ ರಸ್ತೆ ಪ್ರಧಾನಮಂತ್ರಿ ಸಡಕ್ ಯೋಜನೆಗೆ ಆಯ್ಕೆಯಾಗಿದ್ದು, ಬಹುಕೋಟಿ ರೂ ವೆಚ್ಚದಲ್ಲಿ ಸುಮಾರು 4.5 ಕಿ ಮೀ ರಸ್ತೆ ಅಭಿವೃದ್ದಿಯಾಗಲಿದೆ.ಹಲವು ವರ್ಷಗಳಿಂದ ಈ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸಂಚಾರಕ್ಕೂ ಅಡಚಣೆಯಾಗಿತ್ತು ಇದಕ್ಕೆ ಅನುದಾನ ಒದಗಿಸುವ ಬಗ್ಗೆ ಪುತ್ತೂರು ಶಾಸಕರಾದ ಅಶೋಕ್ ರೈ ಅವರ ಶಿಫಾರಸ್ಸಿನಂತೆ ಬೆಳ್ಳಿಪ್ಪಾಡಿ ಗ್ರಾಮದ ಈ ರಸ್ತೆಯನ್ನು ಆಯ್ಕೆಮಾಡಲಾಗಿದೆ.
5 ವರ್ಷ ಮೈಂಟೆನೆನ್ಸ್ 6 ನೇ ವರ್ಷ ಮತ್ತೆ ಡಾಮರೀಕರಣ
ಪ್ರಧಾನಮಂತ್ರಿ ಸಡಕ್ ಯೋಜನೆಯಡಿ ಮಂಜೂರಾದ ರಸ್ತೆಯು ಬಹುಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾರಣ ಇದರ ಪರಿಪಾಲನೆಯೂ ಗುತ್ತಿಗೆದಾರನಿಗೆ ಇರುತ್ತದೆ. ಒಂದು ಬಾರಿ ಕಾಮಗಾರಿ ಮಾಡಿದ ಬಳಿಕ 5 ವರ್ಷ ರಸ್ತೆಯನ್ನು ಪರಿಪಾಲನೆ ಮಾಡಬೇಕು ಮತ್ತೆ ಆರನೇ ವರ್ಷ ಮರು ಡಾಮರೀಕರಣ ಮಾಡಬೇಕಾಗುತ್ತದೆ. ಗುಣಮಟ್ಟದಲ್ಲಿ ಖಾತ್ರಿಯೂ ಇದರಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುತ್ತದೆ. ರಸ್ತೆ ನಿರ್ಮಾಣವಾಗುವ ಮೊದಲೇ ಇಲ್ಲಿ ಚರಂಡಿ , ಮೋರಿ ಮತ್ತು ಅಗಲೀಕರಣ ಕಾಮಗಾರಿಯೂ ನಡೆದು ಆ ಬಳಿಕ ರಸ್ತೆ ಡಾಮರೀಕರಣಗೊಳ್ಳುತ್ತದೆ.
5 ವರ್ಷಕ್ಕೊಮ್ಮೆ ಈ ಯೋಜನೆ
ಈ ಯೋಜನೆಯು 5 ವರ್ಷಕ್ಕೊಮ್ಮೆ ಮಾತ್ರ ದೊರೆಯುತ್ತದೆ. ಆಯಾ ಕ್ಷೇತ್ರದ ಶಾಸಕರು ಈ ವಿಚಾರದಲ್ಲಿ ಮುತುವರ್ಜಿ ವಹಿಸಿದರೆ ಮಾತ್ರ ಈ ಯೋಜನೆ ಲಭ್ಯವಾಗುತ್ತದೆ. ಈ ಬಾರಿಯ ಯೋಜನೆಯನ್ನು ಶಾಸಕರು ತನ್ನ ಸ್ವ ಗ್ರಾಮಕ್ಕೆ ಮೀಸಲಿಡುವ ಮೂಲಕ ತನ್ನ ಸ್ವ ಗ್ರಾಮದ ಅಭಿವೃದ್ದಿಗೆ ಒತ್ತು ನೀಡಿದ್ದಾರೆ.
ತನ್ನ ಸ್ವ ಗ್ರಾಮಕ್ಕೆ ಪ್ರಧಾನಮಂತ್ರಿ ಸಡಕ್ ಯೋಜನೆಯಡಿ ಬೆಳ್ಳಿಪ್ಪಾಡಿ ಗ್ರಾಮದ ರಸ್ತೆಯನ್ನು ಆಯ್ಕೆ ಮಾಡಲಾಗಿದೆ. ರಸ್ತೆ ಕಾಮಗಾರಿ ಅತ್ಯುತ್ತಮವಾಗಿ ನಡೆಯಲಿದೆ. ಅನೇಕ ಒತ್ತಡಗಳ ನಡುವೆಯೂ ಈ ಯೋಜನೆಯನ್ನು ತರುವಲ್ಲಿ ಯಶಶ್ವಿಯಾಗಿದ್ದೇವೆ. ಗ್ರಾಮಸ್ಥರ ಬಹುವರ್ಷದ ಬೇಡಿಕೆಯನ್ನು ಈಡೇರಿಸಿದ ತೃಪ್ತಿ ನನಗಿದೆ
ಅಶೋಕ್ ರೈ ,ಶಾಸಕರು ಪುತ್ತೂರು
200 ಕುಟುಂಬಗಳಿಗೆ ರಸ್ತೆಯ ಪ್ರಯೋಜನ
ಪ್ರಧಾನಮಂತ್ರಿ ಸಡಕ್ ಯೋಜನೆಯಡಿ ರಸ್ತೆ ಮಂಜೂರಾಗಬೇಕಾದಲ್ಲಿ ಆ ಭಾಗದಲ್ಲಿ ಕನಿಷ್ಠ 200 ಕುಟುಂಬಗಳು ಇರಬೇಕಾಗುತ್ತದೆ. ಶಾಸಕರು ಶಿಫಾರಸ್ಸು ಮಾಡಿರುವ ಬೆಳ್ಳಿಪ್ಪಾಡಿ ಗ್ರಾಮದ ಈ ರಸ್ತೆಯು ಸುಮಾರು 200 ಕುಟುಂಬಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ಬಹಳ ವರ್ಷಗಳ ಬೇಡಿಕೆ ಈ ಬಾರಿ ಈಡೇರಿದೆ. ಈ ರಸ್ತೆಯನ್ನು ಆಯ್ಕೆ ಮಾಡುವಂತೆ ನಾನು ಶಾಸಕರಿಗೆ ಮನವಿ ಮಾಡಿದ್ದೆ. ಸ್ವ ಗ್ರಾಮಕ್ಕೆ ಈ ಯೋಜನೆಯನ್ನು ಕರುಣಿಸಿದ ಶಾಸಕರಿಗೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ
ಜಯಪ್ರಕಾಶ್ ಬದಿನಾರ್, ಉಪಾಧ್ಯಕ್ಷರು ಕೋಡಿಂಬಾಡಿ ಗ್ರಾಪಂ