ಉಪ್ಪಿನಂಗಡಿ: ಟ್ಯಾಂಕರ್‌ನಿಂದ ಪೆಟ್ರೋಲ್ ಕಳ್ಳತನ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯಾಗಿದ್ದ ಬಶೀರ್ ಎಂಬಾತನನ್ನು ದೋಷಮುಕ್ತಗೊಳಿಸಿ ಪುತ್ತೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯ ಆದೇಶ ನೀಡಿದೆ.
2013ರ ಜೂನ್ 12ರಂದು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿ ಗ್ರಾಮದ ಅಡ್ಡಹೊಳೆಯ ಪುಲ್ಲೋಪೆ ಎಂಬಲ್ಲಿರುವ ಹೆಚ್.ಪಿ. ಪೆಟ್ರೋಲ್ ಬಂಕ್‌ನ ಎದುರುಗಡೆ ಬೆಳಗ್ಗಿನ ಜಾವ 5ಕ್ಕೆ ಸೆಲ್ ಇಂಡಿಯಾ ಮಾರ್ಕೆಟ್ಸ್ ಪ್ರೈವೆಟ್ ಲಿಮಿಟೆಡ್ ಕಂಪೆನಿಯ ಟ್ಯಾಂಕರಿನ ನಂ.4 ಕಂಪಾರ್ಟ್‌ಮೆಂಟ್‌ನಿಂದ ಗೇಟ್‌ವಾಲ್ ಮೂಲಕ ಆರೋಪಿಗಳು ಸುಮಾರು 155 ಲೀ. ಪೆಟ್ರೋಲನ್ನು ಕಳವು ಮಾಡುವುದನ್ನು ಜಿಲ್ಲಾ ಅಪರಾಧ ಗುಪ್ತವಾರ್ತೆ ವಿಭಾಗದ ಪೊಲೀಸ್ ನಿರೀಕ್ಷಕರಾದ ವಿನಯ ಎಸ್. ನಾಯಕ್ ಮತ್ತು ತಂಡದವರು ಪತ್ತೆ ಹಚ್ಚಿ ಆರೋಪಿಗಳನ್ನು ದಸ್ತಗಿರಿ ಮಾಡಿದ್ದರು. ಅದರಲ್ಲಿ ಮೂರನೇ ಆರೋಪಿಯಾದ ಬಶೀರ್ ಎಂಬವರ ಪಲ್ಸರ್ ಮೋಟಾರ್ ಸೈಕಲ್ ಅನ್ನು ಕೂಡಾ ಸ್ವಾಧೀನಪಡಿಸಿಕೊಂಡು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದ ವಾದ-ವಿವಾದಗಳನ್ನು ಆಲಿಸಿದ ಪುತ್ತೂರಿನ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಯವರ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಎಚ್.ಆರ್. ರವರು 10 ಜನ ಸಾಕ್ಷಿದಾರರನ್ನು ವಿಚಾರಣೆಗೊಳಪಡಿಸಿ, ಈ ಬಗ್ಗೆ ಯಾವುದೇ ಸಾಕ್ಷ್ಯಗಳು ಇಲ್ಲದಿರುವುದರಿಂದ 3ನೇ ಆರೋಪಿಯಾದ ಬಶೀರ್‌ರನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಯ ಪರವಾಗಿ ನ್ಯಾಯವಾದಿಗಳಾದ ದೇವಾನಂದ ಕೆ. ಮತ್ತು ಹರಿಣಿ ವಾದಿಸಿದರು.