ಕುದ್ಮಾರು ಶಾಲೆಯಲ್ಲಿ ಸೈಬರ್ ಅಪರಾಧ, ಮಕ್ಕಳ ಹಕ್ಕುಗಳು, ಪೋಕ್ಸೋ ಮಾಹಿತಿ ಕಾರ್ಯಾಗಾರ

0

ಕಾಣಿಯೂರು: ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು ಘಟಕ ಇದರ ವತಿಯಿಂದ ಕುದ್ಮಾರು ಸ. ಉ. ಹಿ. ಪ್ರಾಥಮಿಕ ಶಾಲೆಯಲ್ಲಿ ಸೈಬರ್ ಅಪರಾಧ, ಮಕ್ಕಳ ಹಕ್ಕುಗಳು, ಪೋಕ್ಸೋ ಮಾಹಿತಿ ಕಾರ್ಯಾಗಾರವು ಫೆ 7ರಂದು ನಡೆಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಶಾಲಾ ಶಿಕ್ಷಣ ಕೇಂದ್ರ ಪುತ್ತೂರು ಇದರ ಅಧ್ಯಕ್ಷ ರಫೀಕ್ ಅವರು ಮಕ್ಕಳ ಹಕ್ಕುಗಳು ಮತ್ತು ಮಾಹಿತಿ ಕಾರ್ಯಕ್ರಮದ ಕುರಿತಾಗಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಶಾಲಾ ಶಿಕ್ಷಣ ಕೇಂದ್ರ ಪುತ್ತೂರು ಇದರ ಉಪಾಧ್ಯಕ್ಷರಾದ ರೋಹಿಣಿ ರಾಘವ ಆಚಾರ್ಯ ಇವರು ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಯ ಮೇಲೆ ಆಗುವ ದುಷ್ಪರಿಣಾಮಗಳು, ಸೈಬರ್ ಅಪರಾಧಗಳು ಹಾಗೂ ಇದರಿಂದ ಹೊರಬರಲು ವಿದ್ಯಾರ್ಥಿಗಳು ನಡೆಸಬಹುದಾದ ಇತರ ಚಟುವಟಿಕೆಗಳಾದ ಗ್ರಂಥಾಲಯ ಬಳಕೆ ಹಾಗೂ ಇತರರಿಂದ ಮಾಹಿತಿ ಪಡೆದುಕೊಳ್ಳುವ ರೀತಿಯನ್ನು ಬಹಳ ಅರ್ಥಗರ್ಭಿತವಾಗಿ ನಡೆಸಿಕೊಟ್ಟರು. ಸಂಪನ್ಮೂಲ ವ್ಯಕ್ತಿ ಹಾಗೂ ಶಾಲಾ ಶಿಕ್ಷಣ ಕೇಂದ್ರ ಪುತ್ತೂರು ಇದರ ಕೋಶಾಧಿಕಾರಿಯೂ ಆಗಿರುವ ವತ್ಸಲ ನಾಯಕ್ ಇವರು ವಿವಿಧ ಚಟುವಟಿಕೆಗಳು ಹಾಡುಗಳ ಮೂಲಕ ವಿದ್ಯಾರ್ಥಿಗಳ ಹಕ್ಕುಗಳ ಬಗೆಗೆ ಸವಿಸ್ತಾರವಾದ ಮಾಹಿತಿ, ಪೋಕ್ಸೋ ಮಾಹಿತಿ, ವಿದ್ಯಾರ್ಥಿಗಳು ತಿಳಿದುಕೊಂಡಿರಬೇಕಾದ ಉತ್ತಮ ಹಾಗೂ ಕೆಟ್ಟ ಸ್ಪರ್ಶದ ಬಗೆಗೆ ಮಾಹಿತಿ ನೀಡಿದರು. ಅಲ್ಲದೆ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣದ ಮಹತ್ವ ವಿದ್ಯಾರ್ಥಿಗಳು ಗೈರು ಹಾಜರಾಗದಂತೆ ಹಾಗೂ ನಿತ್ಯ ಜೀವನದಲ್ಲಿ ವಿದ್ಯಾರ್ಥಿಗಳು ಸೇವಿಸುವ ಆಹಾರ ಮತ್ತು ಮಾದಕ ವಸ್ತುಗಳ ನಡುವಿನ ಅಂತರ , ವಿದ್ಯಾರ್ಥಿಗಳನ್ನು ಮಾದಕ ವಸ್ತುಗಳಿಗೆ ಬಲಿಪಶುಗಳನ್ನಾಗಿ ಮಾಡಲಾಗುತ್ತಿರುವ ಪ್ರಸ್ತುತ ಸನ್ನಿವೇಶಗಳು ಮತ್ತು ಅದರ ಬಗ್ಗೆ ವಹಿಸಬೇಕಾದ ಎಚ್ಚರಿಕೆಯ ಕ್ರಮಗಳನ್ನು ಸಹ ತಿಳಿಸಿಕೊಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ದೇವರಾಜ ನೂಜಿ ವಹಿಸಿದ್ದರು. ಬೆಳಂದೂರು ಗ್ರಾಮ ಪಂಚಾಯತ್ ಸದಸ್ಯ ಪ್ರವೀಣ್ ಕೆರೆನಾರು ಪ್ರಭಾರ ಮುಖ್ಯಗುರು ವೀರಾ ಡಿಸೋಜಾ ಉಪಸ್ಥಿತರಿದ್ದರು.


ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಶಿಕ್ಷಕಿ ವೀಣಾ ಸ್ವಾಗತಿಸಿ, ಶಿಕ್ಷಕಿ ವೀರಾ ಡಿ’ಸೋಜ ವಂದಿಸಿದರು. ಪ್ರೌಢಶಾಲಾ ಸಹಶಿಕ್ಷಕಿ ಶ್ರೀಲತಾ ರವರು ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ಯೋಗೀಶ ಬರೆಪ್ಪಾಡಿ, ವನಿತಾ ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here