ದರ್ಬೆತ್ತಡ್ಕ ಶಾಲೆಯಲ್ಲಿ ಬೆಟ್ಟಂಪಾಡಿ ಕಾಲೇಜಿನ ವಾರ್ಷಿಕ ವಿಶೇಷ ಶಿಬಿರ ಉದ್ಘಾಟನೆ

0

ವ್ಯಕ್ತಿತ್ವ ವಿಕಸನದೊಂದಿಗೆ ನಾಯಕತ್ವ ಗುಣ ಬೆಳೆಸಿಕೊಳ್ಳಿ – ತ್ರಿವೇಣಿ ಪಲ್ಲತ್ತಾರು

ಪುತ್ತೂರು: ಎನ್ ಎಸ್ ಎಸ್ ನಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ವ್ಯಕ್ತಿತ್ವ ವಿಕಸನ ಹಾಗೂ ಕೌಶಲ್ಯ ಅಭಿವೃದ್ಧಿಗೆ ಸಹಕಾರಿಯಾಗಿದೆ. ಶಿಕ್ಷಣದ ಜೊತೆ ಜೀವನ ಮೌಲ್ಲ್ಯಗಳನ್ನು ಅರಿತುಕೊಳ್ಳಲು ಎನ್‌ಎಸ್‌ಎಸ್ ದಾರಿ ಮಾಡಿಕೊಡುತ್ತದೆ ಹಾಗೂ ನಾಯಕತ್ವ ಗುಣ ಹೆಚ್ಚಿಸಲು ಸಹಾಯಕವಾಗಿದೆ. ವಿದ್ಯಾರ್ಥಿಗಳು ಸಮಾಜದ ಜನರೊಂದಿಗೆ ಬೆರೆಯುವ ಮೂಲಕ ಸಮಾಜದ ವ್ಯವಸ್ಥೆಯ ಬಗ್ಗೆ ತಿಳಿದುಕೊಂಡು ತಮ್ಮ ವ್ಯಕ್ತಿತ್ವ ವಿಕಸನದೊಂದಿಗೆ ಉತ್ತಮ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಇಂತಹ ಎನ್‌ಎಸ್‌ಎಸ್ ಕ್ಯಾಂಪ್‌ಗಳು ಬಹಳಷ್ಟು ಸಹಕಾರಿಯಾಗಿವೆ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಅಭಿಪ್ರಾಯಪಟ್ಟರು.


ಅವರು ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಇದರ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ದರ್ಬೆತಡ್ಕ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆ.7ರಿಂದ 13 ರವರೆಗೆ ನಡೆಯುವ ವಾರ್ಷಿಕ ವಿಶೇಷ ಶಿಬಿರವನ್ನು ಫೆ.7 ರಂದು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮ ಮತ್ತು ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸಬೇಕಾಗಿದೆ ಎಂದ ತ್ರಿವೇಣಿ ಪಲ್ಲತ್ತಾರುರವರು ಉತ್ತಮ ವಿದ್ಯಾರ್ಥಿಗಳಾಗಿ ಮನೆಗೆ ಮತ್ತು ಊರಿಗೆ ಕೀರ್ತಿ ತನ್ನಿ ಎಂದು ಹೇಳಿ ಶುಭ ಹಾರೈಸಿದರು.


ಸಭಾಧ್ಯಕ್ಷತೆ ವಹಿಸಿದ್ದ ಬೆಟ್ಟಂಪಾಡಿ ಕಾಲೇಜಿನ ಪ್ರಾಂಶುಪಾಲ ಡಾ.ವರದರಾಜ ಚಂದ್ರಗಿರಿಯವರು ಮಾತನಾಡಿ, ಯಾಂತ್ರಿಕ ಯುಗವು ಶ್ರಮದಾನದ ಮಹತ್ವವನ್ನು ಕುಂಠಿತಗೊಳಿಸಿದರೂ ಎನ್‌ಎಸ್‌ಎಸ್ ಸ್ವಯಂಸೇವಕರು ಶ್ರಮದಾನ ಮೊದಲಾದ ಸೇವಾ ಕಾರ್ಯಗಳಲ್ಲಿ ಉತ್ಸುಕತೆ ತೋರುತ್ತಿದ್ದಾರೆ ಎಂದು ಹೇಳುವುದರ ಜೊತೆಗೆ ವಿದ್ಯಾರ್ಥಿಗಳ ಬಗ್ಗೆ ಭರವಸೆಯ ನುಡಿಗಳನ್ನಾಡಿದರು. ಕಾಲ ಬದಲಾದಂತೆ ನಮ್ಮ ಕ್ಯಾಂಪ್‌ನಲ್ಲೂ ಬಹಳಷ್ಟು ಬದಲಾವಣೆಗಳನ್ನು ತಂದಿದ್ದೇವೆ. ಪ್ರಸ್ತುತ ದಿನಗಳಿಗೆ ಸಂಬಂಧಪಟ್ಟಂತೆ ಕ್ಯಾಂಪ್‌ಗಳನ್ನು ನಡೆಸಲಾಗುತ್ತಿದೆ. ಈಗಾಗಲೇ ಬಹಳಷ್ಟು ಕಡೆಗಳಲ್ಲಿ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಕ್ಯಾಂಪ್ ನಡೆಸಿದ್ದಾರೆ ಮತ್ತು ಸಮಾಜದಿಂದ ಒಳ್ಳೆಯ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ ಎಂದರು. ದರ್ಬೆತ್ತಡ್ಕ ಪರಿಸರದಲ್ಲೂ ನಮ್ಮ ಕಾಲೇಜಿನ ಮಕ್ಕಳು ಉತ್ತಮ ರೀತಿಯಲ್ಲಿ ಕ್ಯಾಂಪ್ ನಡೆಸುತ್ತಾರೆ ಎಂಬ ಭರವಸೆ ನಮಗಿದೆ, ಈ ಊರಿನ ಜನರ ಸಹಕಾರ, ಪ್ರೋತ್ಸಾಹ ನಮ್ಮ ಮಕ್ಕಳ ಮೇಲಿರಲಿ ಎಂದು ಹೇಳಿ ಶುಭ ಹಾರೈಸಿದರು. ಅತಿಥಿಗಳಾಗಿದ್ದ ಶಿಕ್ಷಣ ಸಂಪನ್ಮೂಲ ಕೇಂದ್ರದ ಸಿಆರ್‌ಪಿ ಶಶಿಕಲಾರವರು ಮಾತನಾಡಿ, ಒಳ್ಳೆಯನ್ನು ಕಲಿತುಕೊಳ್ಳುವ ಮೂಲಕ ಸಮಾಜಕ್ಕೆ ಒಳ್ಳೆಯ ಪ್ರಜೆಗಳಾಗಿ ಮೂಡಿಬನ್ನಿ ಎಂದು ಹೇಳಿ ಶುಭ ಹಾರೈಸಿದರು.


ನಿವೃತ್ತ ಸೈನಿಕರಾದ ದರ್ಬೆತಡ್ಕ ಶೇಷಪ್ಪ ಕುಕ್ಕು ತಡಿರವರು ಕಠಿಣ ಪ್ರಯತ್ನ ಇದ್ದರೆ ಏನನ್ನು ಸಾಧಿಸಬಹುದು ಎಂದು ವಿದ್ಯಾರ್ಥಿಗಳೊಂದಿಗೆ ತಮ್ಮ ವೃತ್ತಿ ಜೀವನದ ಅನುಭವಗಳನ್ನು ಹಂಚಿಕೊಂಡರು. ಪತ್ರಕರ್ತರಾದ ಸಿಶೇ ಕಜೆಮಾರ್ ರವರು ಉತ್ತಮ ಉದಾಹರಣೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹವನ್ನು ನೀಡಿದರು. ಸೋತರು ಗೆಲುವಿನತ್ತ ಸತತ ಪ್ರಯತ್ನಿಸಬೇಕೆಂದು ಪ್ರೇರಣೆಯನ್ನು ನೀಡಿದರು. ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಪುರಂದರ ಶೆಟ್ಟಿ ಮುಡಾಲರವರು ಎಷ್ಟೇ ಕಷ್ಟವಾದರೂ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡುವುದು ಪ್ರತಿಯೊಬ್ಬ ಹೆತ್ತವರ ಕರ್ತವ್ಯವಾಗಿದೆ ಎಂದರು.


ವೇದಿಕೆಯಲ್ಲಿ ದರ್ಬೆತ್ತಡ್ಕ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಶುಭಕರ ನಾಯಕ್ ಡಿ, ಪ್ರಗತಿಪರ ಕೃಷಿಕ ಜಯರಾಮ ಪೂಜಾರಿ ಕುಕ್ಕುತ್ತಡಿ, ಪತ್ರಕರ್ತ ದಿನೇಶ್ ಪೇರಾಲು ಉಪಸ್ಥಿತರಿದ್ದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶಿಬಿರಾಧಿಕಾರಿ ಡಾ ಯೋಗೀಶ್ ಎಲ್ ಏನ್ ಇವರು ಎನ್‌ಎಸ್‌ಎಸ್ ನಿಂದ ಆಗುವ ಪ್ರಯೋಜನಗಳು ಹಾಗೂ ಈವರೆಗಿನ ಬೆಟ್ಟಂಪಾಡಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಉತ್ತಮ ಕಾರ್ಯ ಗಳ ಬಗ್ಗೆ ತಿಳಿಸಿದರು .ಶಿಬಿರಾಧಿಕಾರಿಯಾದ ಡಾ ಯೋಗೀಶ್ ಎಲ್ ಏನ್ ಸ್ವಾಗತಿಸಿದರು. ಶಿಬಿರಾರ್ಥಿಯಾದ ಸುಪ್ರಿಯಾ ವಿ ಕೆ ಇವರು ವಂದಿಸಿದರು. ಘಟಕ ನಾಯಕಿ ಮಮತಾ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಶ್ರಮದಾನದ ಉದ್ಘಾಟನೆಯನ್ನು ದರ್ಬೆತ್ತಡ್ಕ ಒತ್ತೆಕೋಲ ಸಮಿತಿಯ ಅಧ್ಯಕ್ಷ ರವೀಂದ್ರ ಉದ್ಘಾಟಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಶುಭಕರ ನಾಯಕ್ ಡಿ, ಸದಸ್ಯ ಬಾಬು ಪ್ರಸಾದ್, ಕೃಷಿಕ ವಸಂತ ಮಣಿಯಾಣಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here