ಭಾರತ ಮಾತೆ, ಯೋಧರ ಸ್ಮಾರಕಕ್ಕೆ ಗೌರವಾರ್ಪಣೆ
ಸೈನಿಕರ ಸೇವೆ, ತ್ಯಾಗದಿಂದ ನಾವು ಜೀವನ ಮಾಡುತ್ತೀದ್ದೇವೆ-ಕುಂಟಾರು ರವೀಶ ತಂತ್ರಿ
![](https://puttur.suddinews.com/wp-content/uploads/2025/02/2-2.jpg)
ಪುತ್ತೂರು: ಹನುಮಗಿರಿಯ ಶ್ರೀಭಾರತೀ ಅಮರಜ್ಯೋತಿ ಮಂದಿರ ಅಮರಗಿರಿ ಇದರ ದ್ವಿತೀಯ ವಾರ್ಷಿಕೋತ್ಸವ ಹಾಗೂ ಭಾರತ ಮಾತೆಗೆ, ಯೋಧರ ಸ್ಮಾರಕಕ್ಕೆ ಗೌರವಾರ್ಪಣೆ ಕಾರ್ಯಕ್ರಮ ನಡೆಯಿತು.
ನಿವೃತ್ತ ಯೋಧರಾದ ರಮಾಕಾಂತ್, ಸಂಜೀವ ಗೌಡ, ಜನಾರ್ಧನ, ಎಂ.ಕೆ.ನಾರಾಯಣ ಭಟ್, ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿರವರು ಭಾರತ ಮಾತೆ ಹಾಗೂ ಯೋಧರ ಸ್ಮಾರಕಕ್ಕೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ನಿವೃತ್ತ ಯೋಧರಾದ ರಮಾಕಾಂತನ್, ಸುಳ್ಯ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ದೇರಣ್ಣ ಗೌಡ, ಪುತ್ತೂರು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ರವರು ಶಾಲಾ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಸಭಾಕಾರ್ಯಕ್ರಮ:
![](https://puttur.suddinews.com/wp-content/uploads/2025/02/3-1.jpg)
ಸಭಾಕಾರ್ಯಕ್ರಮದಲ್ಲಿ ಕುಂಟಾರು ರವೀಶ ತಂತ್ರಿಯವರು ಮಾತನಾಡಿ ಮನುಷ್ಯ ಇವತ್ತಿನ ಜೀವನ ಶೈಲಿಯ ಮಧ್ಯೆ ತುಂಬಾ ಒತ್ತಡಕ್ಕೊಳಗಾಗುವ ಪರಿಸ್ಥಿತಿ ಇದೆ. ಈ ಒತ್ತಡಗಳ ಮಧ್ಯೆ ನಮ್ಮ ವಿಚಾರಧಾರೆಗಳಿಗೆ ಸಮಯ ಮೀಸಲಿಡಬೇಕು. ಲೌಕಿಕವಾದ ಆಸೆಗಳನ್ನು ಬದಿಗಿಟ್ಟು ತಾಯಿ ಭಾರತಾಂಬೆಯ ಸೇವೆ ಮಾಡುತ್ತಿರುವ ಯೋಧರೊಂದಿಗೆ ಭಾಗಿಯಾಗುವ ಅವಕಾಶ ಸಿಕ್ಕಿದೆ. ನಮಗೆ ಪವಿತ್ರವಾದ ಜನ್ಮ ನೀಡಿದ ದೇಶ ಭಾರತ. ದೇಶಸೇವೆಗೆ ಪಣತೊಟ್ಟ ಸೈನಿಕರು ತಮ್ಮ ಕಷ್ಟವನ್ನು ಮರೆತು ದೇಶದ ಗಡಿಯನ್ನು ಕಾಯುತ್ತಿದ್ದಾರೆ. ಅವರ ಸೇವೆಯಿಂದ ನಾವು ಯಾವುದೇ ಸಮಸ್ಯೆಯಿಲ್ಲದೆ ಜೀವನ ಮಾಡುತ್ತಿದ್ದೇವೆ. ಯೋಧರು ಕಟ್ಟುನಿಟ್ಟಿನ ಜೀವನ ಅಳವಡಿಸಿಕೊಂಡು ಇನ್ನೊಬ್ಬರಿಗೆ ಬೋಧಿಸುತ್ತಿದ್ದಾರೆ. ಇಂತಹ ಯೋಧರ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿರುವುದು ವಿಶೇಷವಾಗಿದೆ ಎಂದರು.
ಮುಖ್ಯ ಅತಿಥಿ, ಪುತ್ತೂರು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಎಂ.ಕೆ.ನಾರಾಯಣ ಭಟ್ ಮಾತನಾಡಿ ನಮ್ಮ ದೇಶಕ್ಕೆ ಯುವಕರ ತಂಡ ಬೇಕು. ಇದಕ್ಕೆ ಸರಿಯಾದ ನಾಯಕತ್ವ ಕೂಡ ಬೇಕು. ಸೈನಿಕರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಸೈನಿಕರು ಹೊಟ್ಟೆಪಾಡಿಗಾಗಿ ಕೆಲಸ ಮಾಡುವುದಿಲ್ಲ. ದೇಶಕ್ಕಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಇಂದು ಸೈನಿಕರನ್ನು ಗುರುತಿಸುವ ಕೆಲಸ ಮಾಡಿದ್ದಾರೆ ಇದು ಅಭಿನಂದನೀಯ ಎಂದರು. ಅಧ್ಯಕ್ಷತೆ ವಹಿಸಿದ್ದ ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ಮಾತನಾಡಿ ಸಮಾಜದ ಹೆಚ್ಚಿನ ಮಂದಿಗೆ ದೇಶಸೇವೆ ಮಾಡುವ ಸೈನಿಕರ ಬಗ್ಗೆ ಗೊತ್ತಿರುವುದಿಲ್ಲ. ದೇಶ ಸೇವೆ ಮಾಡಲು ಸಿಗುವ ಅವಕಾಶಗಳ ಬಗ್ಗೆಯೂ ಇವತ್ತು ವಿದ್ಯಾರ್ಥಿಗಳು ತಿಳಿದುಕೊಂಡಿದ್ದಾರೆ. ಸಮಾಜಕ್ಕೆ ಪ್ರೇರಣೆ ಕೊಡುವ ಕೆಲಸ ಆಗಬೇಕು ದೇಶ ಕಟ್ಟುವ ತಂಡ ನಿರ್ಮಾಣ ಆಗಬೇಕು ಎಂಬ ಉದ್ಧೇಶವನ್ನು ಅಮರಗಿರಿಯಲ್ಲಿ ಮಾಡುತ್ತಿದ್ದೇವೆ ಎಂದರು.
ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ. ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿ ಯೋಧರು ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಇವತ್ತು ನಿವೃತ್ತ ಯೋಧರನ್ನು ಸೇರಿಸಿ ಯೋಧ ಮಿಲನ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದು ಹೇಳಿದರು. ಪುತ್ತೂರು ತಾಲೂಕಿನ ನಿವೃತ್ತ ಯೋಧರಾದ ರಮಾಕಾಂತನ್, ಎಸ್. ಸಂಜೀವ ಗೌಡ, ಡಿ.ಬಿ. ಜನಾರ್ಧನರವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ನಿವೃತ್ತ ಯೊಧ ಸುಬ್ಬಪ್ಪ ಪಾಟಾಳಿ ಕಾರ್ಯಕ್ರಮ ನಿರೂಪಿಸಿದರು. ನಿವೃತ್ತ ಯೋಧ ಪ್ರವೀಣ್ ವಂದಿಸಿದರು.