ಪುತ್ತೂರು: ಪುಣ್ಚಪ್ಪಾಡಿ ಗ್ರಾಮದ ಸಾರಕರೆಬೀಡು ಶ್ರೀ ಧರ್ಮಅರಸು ಉಳ್ಳಾಕಲು ದೈವಸ್ಥಾನದಲ್ಲಿ ಶ್ರೀ ಧರ್ಮ ಅರಸು ಉಳ್ಳಾಕಲು ದೈವಗಳ ಮತ್ತು ಪರಿವಾರ ದೈವಗಳ ಧರ್ಮ ನಡಾವಳಿ ಜಾತ್ರೋತ್ಸವ ಫೆ.15 ಮತ್ತು 16 ರಂದು ನಡೆಯಲಿದೆ.

ಫೆ.15 ರಂದು ಶ್ರೀ ವೇದಮೂರ್ತಿ ಕೇಶವ ಕಲ್ಲೂರಾಯ ಬಂಬಿಲರವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿದ್ದು, ಬೆಳಿಗ್ಗೆ 9 ರಿಂದ ಶ್ರೀ ಗಣಪತಿ ಹೋಮ, ನಾಗತಂಬಿಲ, ಗೊನೆ ಮುಹೂರ್ತ, ದೈವಗಳ ತಂಬಿಲ, ಬೊಟ್ಟಿ ಭೂತ ತಂಬಿಲ ನಡೆಯಲಿದೆ. ಸಂಜೆ 4 ಕ್ಕೆ ಹಸಿರುವಾಣಿ ಮೆರವಣಿಗೆ ನೇರೊಳ್ತಡ್ಕದಿಂದ ಕಲ್ಲ ಮಾಡದವರೆಗೆ ಜರಗಲಿದ್ದು, ಮಾಜಿ ಸಂಸದ ನಳಿನ್ಕುಮಾರ್ ಕಟೀಲ್ ಹಸಿರುವಾಣಿ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ. ಹಸಿರುವಾಣಿ ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಶ್ರೀ ಮಣಿಕಂಠ ಸಿಂಗಾರಿ ಮೇಳ ಶ್ರೀ ರಾಮನಗರ ರೆಂಜ ಇವರಿಂದ ಚೆಂಡೆವಾದನ ನಡೆಯಲಿದೆ. ಸಂಜೆ 5.30 ರಿಂದ ಶ್ರೀ ದುರ್ಗಾನಮಸ್ಕಾರ ಪೂಜೆ ಮತ್ತು ಭಜನಾ ಕಾರ್ಯಕ್ರಮ ಜರಗಲಿದ್ದು, ಭಜನಾ ಕಾರ್ಯಕ್ರಮದಲ್ಲಿ ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಸವಣೂರು ಮತ್ತು ಶ್ರೀ ಮಹಾಲಿಂಗೇಶ್ವರ ಮಹಿಳಾ ಭಜನಾ ಸಂಘ ಬೆಟ್ಟಂಪಾಡಿ ಇವರುಗಳಿಂದ ಭಜನೆ ನಡೆಯಲಿದೆ. ಸಂಜೆ 7 ರಿಂದ ಶ್ರೀ ಧರ್ಮಅರಸು ಉಳ್ಳಾಕಲು ಮತ್ತು ಪರಿವಾರ ದೈವಗಳ ಕಿರುವಾಳು ಭಂಡಾರ ಮೂಲಸ್ಥಾನದಿಂದ ಕಲ್ಲಮಾಡಕ್ಕೆ ಬರಲಿದ್ದು, ಸಂಜೆ 7.15 ಕ್ಕೆ ಸಾರಕರೆ ಬೆಡಿ ಹಾಗೂ ರಾತ್ರಿ 8.30 ರಿಂದ ಅನ್ನಸಂತರ್ಪಣೆ ಜರಗಲಿದೆ.
ಫೆ. 16 ರಂದು ಬೆಳಿಗ್ಗೆ 7.30 ರಿಂದ ಉಪಹಾರ, ಬೆಳಿಗ್ಗೆ 8.30ಕ್ಕೆ ಎಲ್ಯಾರ್ ಉಳ್ಲಾಕಲು ದೈವದ ಓಲಸರಿ ನೇಮೋತ್ಸವ, ಬೆಳಿಗ್ಗೆ 11 ರಿಂದ ಮಲ್ಲಾರ್ ಉಳ್ಲಾಕುಲು ದೈವದ ಓಲಸರಿ ನೇಮೋತ್ಸವ, ಮಧ್ಯಾಹ್ನ 12.30 ರಿಂದ ಅನ್ನಸಂತರ್ಪಣೆ, ಅಪರಾಹ್ನ 1.30 ರಿಂದ ಮಹಿಷಂದಾಯ ದೈವದ ನೇಮೋತ್ಸವ ಮತ್ತು ಕೊಡಮಣಿತ್ತಾಯ ದೈವದ ನೇಮ ಹಾಗೂ ರಾತ್ರಿ 7.30 ರಿಂದ ಭಂಡಾರ ತೆಗೆದು ಗುಳಿಗ ದೈವದ ನೇಮ ನಡೆಯಲಿದೆ ಎಂದು ದೈವಸ್ಥಾನದ ಆಡಳಿತ ಮೊಕ್ತೇಸರ ಮಹಾಬಲ ಶೆಟ್ಟಿ ಕೊಮ್ಮಂಡ ಹಾಗೂ ಪುಣ್ಚಪ್ಪಾಡಿ ಸಾರಕರೆಬೀಡು ಶ್ರೀ ಧರ್ಮಅರಸು ಉಳ್ಳಾಕುಲು ಸೇವಾ ಸಮಿತಿಯವರು ತಿಳಿಸಿದ್ದಾರೆ.
ಶತಮಾನಗಳ ಇತಿಹಾಸ ಹೊಂದಿರುವ ಸಾರಕರೆಬೀಡು ಜಾತ್ರೋತ್ಸವ
ಪುಣ್ಚಪ್ಪಾಡಿ ಗ್ರಾಮದ ಸಾರಕರೆಬೀಡು ಶತಮಾನಗಳ ಇತಿಹಾಸವನ್ನು ಹೊಂದಿದೆ.ಬಲ್ಲಾಳರ ಆಳ್ವಿಕೆಯಲ್ಲಿ ಬಹು ವಿಜೃಂಭಣೆಯಿಂದ ಜಾತ್ರೋತ್ಸವ ನಡೆದಿದೆ ಎಂ ಬಗ್ಗೆ ಉಲ್ಲೇಖ ಇದೆ. ಸುಮಾರು 35 ವರ್ಷಗಳ ಹಿಂದೆ ದಿ. ಸಾರಕರೆಬೀಡು ನಾರಾಯಣ ರೈಯವರ ಸಾರಥ್ಯದಲ್ಲಿ ಒಮ್ಮೆ ಜಾತ್ರೆ ವಿಜೃಂಭಣೆಯಿಂದ ನಡೆದಿತ್ತು. ಆ ನಂತರ ಈ ಪವಿತ್ರ ಸ್ಥಳದ ಮಹತ್ವವನ್ನು ಅರಿತು ಜ್ಯೋತಿಷ್ಯ ಮಾಡಾವು ವೆಂಕಟ್ರಮಣ ಭಟ್ ಇವರ ಮಾರ್ಗದರ್ಶನದಲ್ಲಿ ಪ್ರಶ್ನೆ ನಡೆದು ಮಹಾಬಲ ಶೆಟ್ಟಿ ಕೊಮ್ಮಂಡ ಇವರ ಆಡಳಿತದಲ್ಲಿ ಊರ-ಪರವೂರ ಭಕ್ತರ ಸಹಕಾರದಿಂದ ದೈವಸ್ಥಾನದ ಜೀರ್ಣೋದ್ಧಾರ ನಡೆದು 2011ರಲ್ಲಿ ವೇದಾಮೂರ್ತಿ ಅನಂತ ಕಲ್ಲೂರಾಯ ಬಂಬಿಲ ಇವರ ನೇತ್ರತ್ವದಲ್ಲಿ ಪ್ರತಿಷ್ಠಾ ಕಲಶ ನಡೆದು, ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತಾ ಬಂದಿದೆ. ಇಲ್ಲಿ ಅನೇಕ ಪವಾಡಗಳು ನಡೆದಿವೆ ಸಂತಾನ ಪ್ರಾಪ್ತಿ ಮತ್ತು ಆರೋಗ್ಯದ ಬಗ್ಗೆ , ಅಭಿವೃದ್ಧಿಯ ಬಗ್ಗೆ ಪ್ರಾರ್ಥನೆಗೈದಲ್ಲಿ ಶ್ರೀಘ್ರ ಪರಿವಾರ ದೊರೆತ ಉದಾಹರಣೆ ಇದೆ.