ಪುತ್ತೂರು: ಗ್ರಾಮದಲ್ಲಿರುವ ವಿಶೇಷ ಚೇತನರ 10 ಮನೆಗಳಿಗೆ ಕೆಯ್ಯೂರು ಗ್ರಾಮ ಪಂಚಾಯತ್‌ನಿಂದ ಮನೆ ಭೇಟಿ ಮಾಡುವ ಮೂಲಕ ಆರೋಗ್ಯ ತಪಾಸಣೆ ಮಾಡಲಾಯಿತು.
ವಿಶೇಷ ಚೇತನರ ಬಗ್ಗೆ ನಡೆದ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಬಂದ ಬೇಡಿಕೆಯಂತೆ ಗ್ರಾ.ಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ದಿ ಅಧಿಕಾರಿ ನಮಿತಾ ಎ.ಕೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತೆಯರು ಫೆ.13 ರಂದು ಮನೆ ಭೇಟಿ ಮಾಡಿದರು. ವಿಶೇಷವಾಗಿ ನಡೆಯಲು ಅಸಾಧ್ಯವಾಗಿರುವ ಸುಮಾರು 10 ಮನೆಯ ವಿಶೇಷ ಚೇತನರನ್ನು ಭೇಟಿ ಮಾಡಿ ಅವರ ಮನೆಯ ಸ್ಥಿತಿಗತಿ, ಸರಕಾರದ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದು ಅಲ್ಲದೆ ಅವರ ಅರೋಗ್ಯ ತಪಾಸಣೆಯನ್ನು ನಡೆಸಲಾಯಿತು.
ತಂಡದಲ್ಲಿ ಗ್ರಾಪಂ ಅಧ್ಯಕ್ಷ ಶರತ್ ಕುಮಾರ್ ಮಾಡಾವು, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಮಿತಾ ಎ.ಕೆ, ಸಿಎಚ್‌ಓ ಸೌಮ್ಯ, ಗ್ರಾಮೀಣ ಪುನರ್‌ವಸತಿ ಕಾರ್ಯಕರ್ತ ರಫೀಕ್ ತಿಂಗಳಾಡಿ, ಆಶಾ ಕಾರ್ಯಕರ್ತೆಯರಾದ ಭವಾನಿ ಚಿದಾನಂದ್, ಸುಪ್ರಿಯಾ ಪೊಯ್ಯೊಳೆ, ರತ್ನಾವತಿ, ಪಂಚಾಯತ್ ಸಿಬ್ಬಂದಿ ಧರ್ಮಣ್ಣ ಉಪಸ್ಥಿತರಿದ್ದರು.

ಬೇಡಿಕೆಗೆ ಶೀಘ್ರ ಸ್ಪಂದಿಸಿದ ಗ್ರಾ.ಪಂ.
ಗ್ರಾಮದಲ್ಲಿರುವ ವಿಶೇಷ ಚೇತನರ ಬಗ್ಗೆ ಪಂಚಾಯತ್ ಗಮನ ಹರಿಸಬೇಕು ಅವರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬೇಕು ಎಂಬ ಬಗ್ಗೆ ವಿಶೇಷ ಚೇತನರ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಬೇಡಿಕೆ ಬಂದಿತ್ತು ಇದಕ್ಕೆ ಗ್ರಾ.ಪಂ. ತಕ್ಷಣವೇ ಸ್ಪಂದಿಸುವ ಮೂಲಕ ವಿಶೇಷ ಚೇತನರ ಮನೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳುವುದರ ಜೊತೆಯಲ್ಲಿ ಅವರ ಆರೋಗ್ಯ ತಪಾಸಣೆ ಕೂಡ ಮಾಡಿರುವುದು ಶ್ಲಾಘನೀಯವಾಗಿದೆ.
‘ ವಿಶೇಷ ಚೇತನರ 10 ಮನೆಗಳಿಗೆ ಭೇಟಿ ನೀಡಿದ್ದೇವೆ. ನೋಡಿದಾಗಲೇ ಕಣ್ಣೀರು ಬರುತ್ತದೆ. ವಿಶೇಷ ಚೇತನರಿಗೆ ಸರಕಾರದ ಸಿಗುವ ಸೌಲಭ್ಯಗಳ ಬಗ್ಗೆ ಹಾಗೇ ಅವರ ಆರೋಗ್ಯ ತಪಾಸಣೆ ಕೂಡ ನಡೆಸಿದ್ದೇವೆ. ಇನ್ನು ಪ್ರತಿ ತಿಂಗಳು ಭೇಟಿ ಮಾಡುವ ಮೂಲಕ ಅವರ ಬಗ್ಗೆ ಗ್ರಾಪಂ ವಿಶೇಷ ಕಾಳಜಿ ವಹಿಸಲಿದೆ.’
ಶರತ್ ಕುಮಾರ್ ಮಾಡಾವು, ಅಧ್ಯಕ್ಷರು ಕೆಯ್ಯೂರು ಗ್ರಾಪಂ