ಪುತ್ತೂರು:ಪುತ್ತೂರು ಸಂಸ್ಕಾರ ಭಾರತಿ ವತಿಯಿಂದ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಒಳಾಂಗಣದಲ್ಲಿ ತ್ಯಾಗರಾಜ ಮತ್ತು ಪುರಂದರದಾಸರ ಆರಾಧನಾ ಮಹೋತ್ಸವ ಕಾರ್ಯಕ್ರಮವು ಫೆ.11ರಂದು ನಡೆಯಿತು.
ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ದೇವಳದ ಪ್ರಾಂಗಣದಲ್ಲಿ ನಡೆಯುತ್ತಿರುವ ಇಂತಹ ಕಲಾ ಸೇವೆಯ ಕಾರ್ಯಕ್ರಮಗಳಿಗೆ ದೇವಸ್ಥಾನದ ಸಮಿತಿಯ ಸದಸ್ಯರು ಸದಾ ಪ್ರೋತ್ಸಾಹ ನೀಡಲು ಬದ್ಧರಾಗಿರುವರು ಎಂದರು.

ಕಾರ್ಯಕ್ರಮದಲ್ಲಿ ಪುತ್ತೂರಿನ ವಿವಿಧ ಸಂಗೀತ ಶಾಲಾ ಗುರುಗಳು ಹಾಗೂ ಕಲಾವಿದರಾದ ಪ್ರೀತಿಕಲಾ, ಪಾರ್ವತಿ ಗಣೇಶ ಹೊಸಮೂಲೆ, ಕು. ಶ್ರೀರಾಗ, ಗೀತಾ ಸಾರಡ್ಕ, ಶ್ಯಾಮಲಾ ನಾಗರಾಜ್, ಮೊದಲಾದವರ ನೇತೃತ್ವದಲ್ಲಿ, ಸದಸ್ಯ ಕಲಾವಿದರಾದ ಡಾ. ಜಯಶ್ರೀ ಪೆರುವಾಜೆ, ಚೈತ್ರಿಕಾ, ಭಾರತಿ ಶಶಿ, ಜಯಶ್ರೀ ಭಟ್ ಪೆರ್ಲ, ನಿಖಿತಾ, ಜಯಂತಿ ಹೆಬ್ಬಾರ್, ಕ್ಷಮಾ ಬೋನಂತಾಯ, ವತ್ಸಲಾ ರಾಜ್ಞಿ, ಸಂಧ್ಯಾ ಕಜೆ, ಜಾಸ್ಮಿನ್, ಪ್ರಣಮ್ಯ ಪಾಲೆಚ್ಚಾರು, ವಸುಧಾ, ಕು. ವಿಷ್ಣುಪ್ರಿಯಾ, ಮುಂತಾದವರೆಲ್ಲ ಪಿಳ್ಳಾರಿ ಗೀತೆಗಳನ್ನು ಹಾಡಿದರು. ನಾದ ತನುಮನಿಶಂ ಕೃತಿ ಹಾಗೂ ಐದು ಪಂಚರತ್ನ ಕೃತಿಗಳನ್ನು ಪ್ರಸ್ತುತಪಡಿಸುವುದರ ಮೂಲಕ ಕಲಾರಾಧನೆಯು ನಡೆಯಿತು.

ಸಂಗೀತ ಕಲಾವಿದರಾದ ಚೆನ್ನೈಯ ವಿದ್ವಾನ್ ಮುಲ್ಲೈವಾಸಲ್ ಚಂದ್ರಮೌಳಿ ಇವರು ಪಿಟೀಲು ಮತ್ತು ಶೃಂಗೇರಿಯ ವಿದ್ವಾನ್ ಪನ್ನಗ ಶರ್ಮನ್ ಇವರು ಮೃದಂಗ ವಾದ್ಯ ಹಿಮ್ಮೇಳಗಳಲ್ಲಿ ಸಹಕರಿಸಿದರು.ಸಂಯೋಜಕ ವಿದ್ವಾನ್ ದೀಪಕ್ ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ವಿದ್ವಾನ್ ಗೋಪಾಲಕೃಷ್ಣ ವೀರಮಂಗಲ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರಾಂತ ಉಪಾಧ್ಯಕ್ಷರಾದ ರೂಪಲೇಖಾ, ಸದಸ್ಯರಾದ ವಿದುಷಿ ನಯನಾ ವಿ.ರೈ, ಸುಮಂಗಲ ಗಿರೀಶ್, ಪ್ರಭಾವತಿ, ವಿದ್ವಾನ್ ಗಿರೀಶ್ ಕುಮಾರ್ ಮುಂತಾದವರು ಉಪಸ್ಥಿತರಿದ್ದರು.