ನೆಲ್ಯಾಡಿ: ವಿಶ್ವವಿದ್ಯಾನಿಲಯ ಘಟಕ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಶಿಬಾಜೆಯಲ್ಲಿ ಆಯೋಜಿಸಲಾಗಿದ್ದು, ಈ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ನೆರವೇರಿತು.
ಶಿಬಾಜೆ ಗ್ರಾಮ ಪಂಚಾಯತಿ ಅಧ್ಯಕ್ಷ ರತ್ನ ಅವರು ಶಿಬಿರವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಶಿಬಿರದ ಯಶಸ್ವಿಗೆ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಂತ ಜಾರ್ಜ್ ವಿದ್ಯಾಸಂಸ್ಥೆಯ ಸಂಚಾಲಕ ರೆ.ಫಾ.ನೋಮಿಸ್ ಕುರಿಯಾಕೋಸ್ ಅವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಾಮಾಜಿಕ ಸೇವೆಯ ಮೂಲಕ ವಿಶ್ವಾತ್ಮಕವಾದ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವ ಅವಕಾಶ ಸಿಗುವುದು ಈ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ಮೂಲಕ ಸಾಧ್ಯ. ಹಿರಿಯರಲ್ಲಿ ಗೌರವ, ಸೇವೆಯಲ್ಲಿ ನಿಷ್ಠೆ, ಶ್ರಮದಲ್ಲಿ ಬದ್ಧತೆಯನ್ನು ಅಳವಡಿಸಿಕೊಳ್ಳುವ ವ್ಯಕ್ತಿತ್ವ ನಿರ್ಮಾಣದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳುವಂತಹ ಉತ್ಸಾಹವು ಶಿಬಿರದುದ್ದಕ್ಕೂ ಕಾಪಿಟ್ಟುಕೊಂಡು ಘನತೆಯುಕ್ತ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಎಸ್.ಡಿ.ಎಂ ಕಾಲೇಜು ಉಜಿರೆ ಇಲ್ಲಿನ ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಹಾಗೂ ಎನ್.ಎಸ್.ಎಸ್ ರಾಜ್ಯಪ್ರಶಸ್ತಿ ವಿಜೇತರಾದ ಡಾ.ಲಕ್ಷ್ಮಿ ನಾರಾಯಣ ಕೆ.ಎಸ್ ಅವರು ಶಿಬಿರದ ಮಹತ್ವ ಕುರಿತು ಮಾತನಾಡಿ ಯುವ ಜನತೆಯು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿಕೊಳ್ಳಲು ಎನ್.ಎಸ್.ಎಸ್ ಯಾವ ರೀತಿಯಲ್ಲಿ ತರಬೇತಿ ನೀಡುತ್ತದೆ ಎಂಬುದನ್ನು ತಿಳಿಸಿದರು. ಒಬ್ಬ ಸಾಮಾನ್ಯ ವಿದ್ಯಾರ್ಥಿಯು ಎನ್.ಎಸ್.ಎಸ್ ಸ್ವಯಂಸೇವಕನಾಗಿ ಸಮಾಜದ ಮುಖ್ಯ ವಾಹಿನಿಗೆ ಬಂದು ಸರ್ವಾಂಗೀಣ ವಿಕಾಸ ಹೊಂದುವ ಮೂಲಕ ಪರರ ಕಷ್ಟದಲ್ಲಿ ಪಾಲ್ಗೊಳ್ಳುವ ಮನೋಭಾವವನ್ನು ರೂಪಿಸಿಕೊಳ್ಳಲು ಈ ಶಿಬಿರ ಮಹತ್ವದ ಪಾತ್ರ ವಹಿಸುತ್ತದೆ. ವಿನಮ್ರತೆ ಮತ್ತು ಸತತ ಪ್ರಯತ್ನಗಳ ಮೂಲಕ ಎನ್.ಎಸ್.ಎಸ್ ಸ್ವಯಂ ಸೇವಕ ವಿದ್ಯಾರ್ಥಿಯು ಒಬ್ಬ ನಾಯಕನಾಗಿ ಬದಲಾಗುವ ಪ್ರಕ್ರಿಯೆಯು ಇಲ್ಲಿ ನಡೆಯುತ್ತದೆ. ಹಾಗಾಗಿ ಈ ಶಿಬಿರದುದ್ದಕ್ಕೂ ಕ್ರಿಯಾಶೀಲರಾಗಿ ಪಾಲ್ಗೊಂಡು ನೆನಪಿನ ಜೋಳಿಗೆ ಮತ್ತು ಅನುಭವದ ಜೋಳಿಗೆ ಎರಡನ್ನೂ ತುಂಬಿಕೊಂಡು ವ್ಯಕ್ತಿತ್ವ ರೂಪಿಸಿಕೊಳ್ಳಿ ಎಂದು ಎನ್.ಎಸ್.ಎಸ್ ಸ್ವಯಂ ಸೇವಕರಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು.
ಅತಿಥಿಗಳಾಗಿ ಪಾಲ್ಗೊಂಡ IICT ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಪ್ರಶಾಂತ್ ಸಿ.ಎಚ್ ಅವರು ಮಾತನಾಡಿ ದೇಶವನ್ನು ಕಟ್ಟುವ ಕಾಯಕಕ್ಕೆ ದಿನದ ಯಾವ ಕ್ಷಣದಲ್ಲಿಯೂ ಸಮಾಜ ಸೇವೆಗೆ ಸಿದ್ಧವಾಗುವ ಮನಸ್ಥಿತಿಯೊಂದಿಗೆ ಎನ್.ಎಸ್.ಎಸ್ ನ ಧ್ಯೇಯವನ್ನು ಪ್ರತಿಯೊಬ್ಬ ಸ್ವಯಂ ಸೇವಕರು ಪ್ರಾಮಾಣಿಕವಾಗಿ ಈಡೇರಿಸಬೇಕು. ಈ ಹಿನ್ನೆಲೆಯಲ್ಲಿ ಶಿಬಿರದ ಪ್ರತಿ ಕ್ಷಣವನ್ನು ಸದುಪಯೋಗಪಡಿಸಿಕೊಳ್ಳುವುದು ತುಂಬಾ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಶಿಬಾಜೆ ಗ್ರಾಮ ಪಂಚಾಯತಿಯ ನಿಕಟ ಪೂರ್ವ ಅಧ್ಯಕ್ಷರು ಹಾಗೂ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಸ್ವಾಗತ ಸಮಿತಿಯ ಗೌರವಾಧ್ಯಕ್ಷ ರಿತೇಶ್ ಗೌಡ ಬೆಂಗಳ ಮಾತನಾಡಿ ಗ್ರಾಮದ ಸಹಕಾರವನ್ನು ನೀಡುವುದರ ಜೊತೆಗೆ ಎನ್.ಎಸ್.ಎಸ್ ಸ್ವಯಂಸೇವಕರ ಸೇವಾ ಯೋಜನೆಗೆ ಪ್ರೋತ್ಸಾಹ ನೀಡುವುದಾಗಿ ತಿಳಿಸಿದರು. ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಯೋಗೀಶ್ ಗೌಡ ಶಿಬಿರಕ್ಕೆ ಶುಭ ಹಾರೈಕೆಗಳನ್ನ ತಿಳಿಸಿದರು. ಶಾಲೆಯ ಮುಖ್ಯೋಪಾಧ್ಯಾಯ ಭೀಮ ನಾಯಕ್ ಯು. ಅವರು ಶುಭ ಸಂಸನೆ ನೀಡುತ್ತಾ ತಮ್ಮ ಕಾಲೇಜಿನ ದಿನಗಳಲ್ಲಿ ವಿದ್ಯಾರ್ಥಿ ಸ್ವಯಂಸೇವಕನಾಗಿ ಪಾಲ್ಗೊಂಡ ಕ್ಷಣಗಳನ್ನು ಸ್ಮರಿಸಿಕೊಳ್ಳುತ್ತಾ ರೂಪಿಸಿಕೊಂಡ ಬದುಕಿನ ಮಹತ್ವವನ್ನು ಹಂಚಿಕೊಂಡರು. ಎಲ್ಲಾ ವಿದ್ಯಾರ್ಥಿ ಸ್ವಯಂಸೇವಕರು ಪರಸ್ಪರ ಮಾದರಿಯಾಗುವಂತಹ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಲಹೆಯನ್ನು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನೆಲ್ಯಾಡಿ ವಿಶ್ವವಿದ್ಯಾನಿಲಯ ಕಾಲೇಜಿನ ಸಂಯೋಜಕ ಡಾ.ಸುರೇಶ್ ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ ವಾರ್ಷಿಕ ವಿಶೇಷ ಶಿಬಿರದ ಧ್ಯೇಯ ಮತ್ತು ಫಲಿತದ ಪರಿಣಾಮಗಳ ಮಹತ್ವವನ್ನು ವಿವರಿಸಿದರು. ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯ ಮನೋಭಾವದಿಂದ ಮಾತ್ರ ಒಬ್ಬ ವಿದ್ಯಾರ್ಥಿ ಸ್ವಯಂಸೇವಕನು ನಾಯಕನಾಗಿ ಬದಲಾಗಲು ಸಾಧ್ಯ. ಈ ಬೆಳವಣಿಗೆಗೆ ‘ಅರಿವೇ ಗುರು’ ಎಂಬ ಮಂತ್ರ ತುಂಬಾ ಮುಖ್ಯ. ಹಾಗಾಗಿ ನಿಮ್ಮನ್ನು ನೀವು ಅರಿಯುವ ಮೂಲಕ ಸಮಾಜವನ್ನು ಅರಿತು ದೇಶ ಕಟ್ಟುವಲ್ಲಿ ಪಾಲ್ಗೊಳ್ಳಿ ಎಂದು ಸೂಚಿಸಿದರು.
ರಾಷ್ಟ್ರೀಯ ಸೇವಾ ಯೋಜನೆಯ ಯೋಜನಾಧಿಕಾರಿ ಶ್ರುತಿ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹ ಯೋಜನಾಧಿಕಾರಿ ಸಚಿನ್ ಎನ್.ಟಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿಯರಾದ ಚಂದ್ರಕಲಾ .ಬಿ ಹಾಗೂ ಪಾವನಾ ರೈ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕ, ಉಪನ್ಯಾಸಕಿಯರು, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಸ್ವಯಂಸೇವಕರು, ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.