*ಪರಿಣತ ವೈದ್ಯರಿಂದ ಉಪ್ಪಿನಂಗಡಿಯಲ್ಲಿ 24*7 ಆರೋಗ್ಯ ಸೇವೆ
*ಮೇಜರ್ 2 ಒ.ಟಿ., ಪಿಸಿಯೋಥೆರಫಿ ಸೌಲಭ್ಯ
ಉಪ್ಪಿನಂಗಡಿ: ಇಲ್ಲಿನ ಸೂರ್ಯಂಬೈಲು ಸಂಕೀರ್ಣದಲ್ಲಿ ನಿರ್ಮಾಣಗೊಂಡಿರುವ ಅತ್ಯಾಧುನಿಕ ವ್ಯವಸ್ಥೆಗಳನ್ನು ಒಳಗೊಂಡ ಸುಸಜ್ಜಿತ ಸೂರ್ಯ ಆಸ್ಪತ್ರೆಯ ಉದ್ಟಾಟನಾ ಕಾರ್ಯಕ್ರಮವು ಫೆ.17 ರಂದು ನಡೆಯಲಿದ್ದು, ಬೆಳಗ್ಗೆ 10 ಗಂಟೆಗೆ ಪ್ರಖ್ಯಾತ ವೈದ್ಯರಾದ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿರವರು ಆಸ್ಪತ್ರೆಯನ್ನು ಉದ್ಘಾಟಿಸಲಿದ್ದಾರೆ ಎಂದು ಆಸ್ಪತ್ರೆಯ ಪ್ರಧಾನ ವೈದ್ಯರಾದ ಡಾ. ರಾಜೇಶ್ ಎಸ್. ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಹಲವು ತಾಲೂಕುಗಳನ್ನು ಬೆಸೆಯುವ, ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ಪ್ರದೇಶವಾಗಿರುವ ಉಪ್ಪಿನಂಗಡಿ ಮತ್ತದರ ಸುತ್ತಮುತ್ತಲ ಪ್ರದೇಶಗಳ ಜನರಿಗೆ ಉತ್ತಮ ಆರೋಗ್ಯ ವ್ಯವಸ್ಥೆಯನ್ನು ಕಲ್ಪಿಸುವ ಸುಸಜ್ಜಿತ ಆಸ್ಪತ್ರೆಯ ಅವಶ್ಯಕತೆಯನ್ನು ಉಪ್ಪಿನಂಗಡಿಯಲ್ಲಿ ಮನಗಂಡು ಈ ಆಸ್ಪತ್ರೆಯನ್ನು ನಿರ್ಮಿಸಲಾಗಿದೆ. ಈ ಆಸ್ಪತ್ರೆಯಲ್ಲಿ ಅರ್ಥೋಪೆಡಿಕ್ಸ್ ಗೆ ಸಂಬಂಧಿಸಿ ಹಾಗೂ ಇತರ ಆರೋಗ್ಯ ಸಮಸ್ಯೆಗೆ ಸಂಬಂಧಿಸಿ ಸಮರ್ಪಕ ವೈದ್ಯಕೀಯ ಸೇವೆಯನ್ನು ಒದಗಿಸಲಾಗುವುದು. ಆಸ್ಪತ್ರೆಯ ಲೋಕಾರ್ಪಣಾ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಯನ್ನು ಸೂರ್ಯಂಬೈಲು ಫಾರ್ಮ್ಸ್ ಉಪ್ಪಿನಂಗಡಿ ಇದರ ಮಾಲಕರಾದ ಶಾಂತಾರಾಮ ಎಸ್. ಮತ್ತು ಶ್ರೀಮತಿ ಶಶಿಮಂಗಲ ದಂಪತಿ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ವಿಧಾನಸಭಾಧ್ಯಕ್ಷರಾದ ಯು.ಟಿ. ಖಾದರ್, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಬ್ರಿಜೇಶ್ ಚೌಟ , ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ಹಾಗೂ ಗೌರವ ಅತಿಥಿಗಳಾಗಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ, ಮಾಜಿ ಶಾಸಕರಾದ ಸಂಜೀವ ಮಠಂದೂರು, ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಲಲಿತಾ, ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಭಾಗವಹಿಸಲಿದ್ದಾರೆಂದು ತಿಳಿಸಿದರು.
ರಾಷ್ಟ್ರೀಯ ಹೆದ್ದಾರಿ 75 ರ ಹೋಟೇಲ್ ಆದಿತ್ಯದ ಬಳಿ ತಲೆ ಎತ್ತಿರುವ ಈ ಆಸ್ಪತ್ರೆಯಲ್ಲಿ ಪ್ರಸಕ್ತ 25 ಬೆಡ್ಗಳ ಸೌಲಭ್ಯವನ್ನು ಕಲ್ಪಿಸಲಾಗಿದ್ದು, ಮುಂದಕ್ಕೆ ಅವಶ್ಯಕತೆಗನುಸಾರ ಬೆಡ್ ಸೌಲಭ್ಯಗಳನ್ನು ಒದಗಿಸಲಾಗುವುದು. ದಿನದ 24 ಗಂಟೆಯೂ ಆರೋಗ್ಯ ಸೇವಾ ಸೌಲಭ್ಯವನ್ನು ಒದಗಿಸುವ ಈ ಆಸ್ಪತ್ರೆಯಲ್ಲಿ ಎರಡು ಮೇಜರ್ ಶಸ್ತ್ರಚಿಕಿತ್ಸಾ ಘಟಕ ಹಾಗೂ ಒಂದು ಕಿರು ಶಸ್ತ್ರಚಿಕಿತ್ಸಾ ಘಟಕವನ್ನು ಅಳವಡಿಸಲಾಗಿದೆ. ಹಾಗೂ ಭಾರತ ಸರಕಾರದ ವೈದ್ಯಕೀಯ ನಿರ್ದೇಶನಾಲಯವು ಸುವ್ಯವಸ್ಥಿತ ಆಸ್ಪತ್ರೆಯು ಯಾವೆಲ್ಲಾ ಬಗೆಯ ಸವಲತ್ತುಗಳನ್ನು ಹೊಂದಿರಬೇಕೆಂದು ನಿರ್ದೇಶಿಸಿದೆಯೋ ಆ ಎಲ್ಲಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. ಆರ್ಥೊಪೆಡಿಕ್ಸ್ ಅಲ್ಲದೆ ಇತರ ವಿಭಾಗದ ಪರಿಣತ ವೈದ್ಯರ ಸೇವೆಯೂ ಈ ಆಸ್ಪತ್ರೆಯಲ್ಲಿ ಲಭ್ಯವಿದ್ದು, ರೋಗಿಗಳಿಗೆ ವಿಮಾ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಇಲಾಖಾತ್ಮಕ ವ್ಯವಹಾರಗಳು ನಡೆಯುತ್ತಿದೆ ಹಾಗೂ ಎಲ್ಲಾ ದಿನಗಳಲ್ಲಿಯೂ ಫಿಸಿಯೋಥೆರಫಿ ಸೌಲಭ್ಯವನ್ನು ಈ ಆಸ್ಪತ್ರೆಯಲ್ಲಿ ಒದಗಿಸಲಾಗುತ್ತಿದ್ದು, ಇಲ್ಲಿ ನುರಿತ ಸಿಬ್ಬಂದಿಯ ಸೇವೆ ಲಭ್ಯವಾಗಲಿದೆ ಎಂದರು.
ಹಿರಿಯರ ಕನಸು ನನಸಾಗುತ್ತಿದೆ:
ಸೂರ್ಯಂಬೈಲು ಫಾರ್ಮ್ಸ್ ಮಾಲಕರಾದ ಶಾಂತಾರಾಮ ಎಸ್. ಮಾತನಾಡಿ, ನನ್ನ ತಂದೆಯವರು ಈ ಭಾಗದ ಜನತೆಗೆ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಕನಸು ಕಂಡಿದ್ದರು. ಅವರ ಕನಸನ್ನು ನನ್ನ ಮಗ ಡಾ. ರಾಜೇಶ್ ಮತ್ತವರ ಪತ್ನಿ ಡಾ. ಚಂದ್ರಲೇಖಾ ಎನ್. ಸಕಾರಗೊಳಿಸುತ್ತಿರುವುದು ಸಂತಸವನ್ನು ಮೂಡಿಸಿದೆ. ಸೂರ್ಯಂಬೈಲು ಕುಟುಂಬದ ಎಲ್ಲರೂ ಈ ಮಹತ್ ಕಾರ್ಯದಲ್ಲಿ ಕೈಜೋಡಿಸಿದ್ದಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ. ಚಂದ್ರಲೇಖಾ ಉಪಸ್ಥಿತರಿದ್ದರು.