ಉಪ್ಪಿನಂಗಡಿ: ಗರಿಷ್ಠ ರಿಯಾಯಿತಿ ದರದಲ್ಲಿ ದೇಶದ ಜನತೆಗೆ ಔಷಧಿಗಳು ಲಭಿಸುವಂತಾಗಬೇಕೆಂದು ಕೇಂದ್ರ ಸರಕಾರ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ತೆರೆದಿದ್ದು, ಜನ ಸಾಮಾನ್ಯರ ಬದುಕಿಗೆ ವರದಾನವಾಗಿದೆ. ಆದರೆ ಕಾಣದ ಕೈಗಳು ಬಹುಬೇಡಿಕೆಯ ಔಷಧಿಗಳ ಕೊರತೆಯನ್ನು ಸೃಷ್ಟಿಸಿ ಜನರು ದುಬಾರಿ ಬೆಲೆಯ ಔಷಧಿಯನ್ನೇ ಅನಿವಾರ್ಯವಾಗಿ ಖರೀದಿಸುವಂತೆ ಮಾಡುತ್ತಿರುವ ಬಗ್ಗೆ ಉಪ್ಪಿನಂಗಡಿಯ ನಾಗರಿಕರೋರ್ವರು ಜನೌಷಧಿ ಇಲಾಖೆಗೆ ದೂರು ನೀಡಿದ ಪರಿಣಾಮ ಅವರು ಬಯಸಿದ ಔಷಧಿಯು ಜನೌಷಧಿ ಕೇಂದ್ರಕ್ಕೆ ಸರಬರಾಜಾದ ಘಟನೆ ಉಪ್ಪಿನಂಗಡಿಯಿಂದ ವರದಿಯಾಗಿದೆ.
ಮುಕ್ತ ಮಾರುಕಟ್ಟೆಯಲ್ಲಿ 360 ರೂಪಾಯಿಗೆ ಲಭಿಸುವ ಔಷಧಿಯೊಂದು ಪ್ರಧಾನಮಂತ್ರಿ ಜನೌಷಧಿ ಕೇಂದ್ರದಲ್ಲಿ 130 ರೂಪಾಯಿಗೆ ಲಭಿಸುತ್ತಿತ್ತು. ಆದರೆ ಕಳೆದ ಡಿಸೆಂಬರ್ ತಿಂಗಳಿಂದ ಸದ್ರಿ ಔಷಧಿಯು ಸಮರ್ಪಕವಾಗಿ ಸರಬರಾಜಾಗದೇ ಇದ್ದ ಕಾರಣ ಜನರು ದುಬಾರಿ ಬೆಲೆ ತೆತ್ತು ಮುಕ್ತ ಮಾರುಕಟ್ಟೆಯಿಂದಲೇ ಇದನ್ನು ಪಡೆಯಬೇಕಾಗಿತ್ತು. ಈ ಬೆಳವಣಿಗೆಯ ಹಿಂದೆ ಯಾವುದೋ ಕಾಣದ ಕೈಗಳ ಕೈವಾಡವನ್ನು ಶಂಕಿಸಿದ ಉಪ್ಪಿನಂಗಡಿಯ ಗ್ರಾಹಕರೊಬ್ಬರು, ಔಷಧಿ ಬಯಸಿ ಉಪ್ಪಿನಂಗಡಿಯಲ್ಲಿರುವ ಎರಡು ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೂ ಹೋದರೂ ಆಪೇಕ್ಷಿತ ಔಷಧಿಯು ಸರಬರಾಜಾಗುತ್ತಿಲ್ಲ ಎಂಬ ಉತ್ತರ ಲಭಿಸಿದೆ. ಇದು ಸಂಶಯಾಸ್ಪದ ನಡೆಯಾಗಿದೆ ಮತ್ತು ಸರಕಾರದ ಯೋಜನೆಯ ಅಸಮರ್ಪಕ ಅನುಷ್ಠಾನವಾಗಿದೆ ಎಂದು ಲಿಖಿತ ದೂರನ್ನು 31/12/2024ರಂದು ಸಲ್ಲಿಸಿದ್ದರು.
ಈ ಬಗ್ಗೆ ಫೆ.7 ರಂದು ಇಲಾಖಾಧಿಕಾರಿಗಳು ದೂರುದಾರರಿಗೆ ಇಮೇಲ್ ಸಂದೇಶ ರವಾನಿಸಿ ನಿಮ್ಮ ದೂರಿನ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದರು. ಫೆ.10 ರಂದು ಮತ್ತೆ ಸಂದೇಶ ಕಳುಹಿಸಿ ನೀವು ಬಯಸಿರುವ ಔಷಧಿಯನ್ನು ಉಪ್ಪಿನಂಗಡಿಯ ಜನೌಷಧಿ ಕೇಂದ್ರಕ್ಕೆ ಸರಬರಾಜು ಮಾಡಲಾಗುವುದೆಂದು ತಿಳಿಸಿದ್ದರು. ಅಂತೆಯೇ ಫೆ.14 ರಂದು ಜನೌಷಧಿ ಕೇಂದ್ರದಿಂದಲೇ ದೂರುದಾರರಿಗೆ ಅವರು ಬಯಸಿರುವ ಔಷಧಿಯು ಬಂದಿರುವ ಬಗ್ಗೆ ಪೋನ್ ಕರೆಯಲ್ಲಿ ತಿಳಿಸಲಾಯಿತು. ಈ ಮೂಲಕ ಕೇಂದ್ರ ಸರಕಾರದ ಆಶಯದಂತೆ ಕಡಿಮೆ ವೆಚ್ಚದಲ್ಲಿ ದೊರಯಬೇಕಾದ ಔಷಧಿಯನ್ನು ಸಂಬಂಧಿತ ಅಧಿಕಾರಿಗೆ ದೂರು ಸಲ್ಲಿಸುವ ಮೂಲಕ ದೊರಕಿಸಿಕೊಳ್ಳುವಲ್ಲಿ ಉಪ್ಪಿನಂಗಡಿಯ ಗ್ರಾಹಕ ಯಶಸ್ವಿಯಾಗಿದ್ದಾರೆ. ಸರಕಾರ ನಿಗದಿ ಪಡಿಸಿದ ಎಲ್ಲಾ ಔಷಧಿಗಳೂ ಸದಾ ಕಾಲ ಲಭಿಸುವಂತೆ ಇರಬೇಕೆಂಬ ನಿಯಮವಿದ್ದರೂ ಯಾವುದೋ ಹಿತಾಸಕ್ತಿಯಿಂದಾಗಿ ಕೆಲವೊಂದು ಔಷಧಿಗಳ ಕೊರತೆಯನ್ನು ಸೃಷ್ಟಿಸಲಾಗುತ್ತಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದ್ದು, ಯಾವುದೇ ಔಷಧಿಯೂ ಜನೌಷಧ ಕೇಂದ್ರದಲ್ಲಿ ಕೊರತೆಯಲ್ಲಿದ್ದರೆ ಜನರು ಸಂಬಂಧಿತ ಇಲಾಖೆಗೆ ದೂರು ಸಲ್ಲಿಸಬಹುದಾಗಿದೆ.