ಬರಹ: ಗಣೇಶ್ ಕಾಸರಗೋಡು
ಪುತ್ತೂರು: ಭಾರತೀಯ ಚಿತ್ರರಂಗದ ದೊಡ್ಡ ಹೆಸರಾಗಿರುವ ಅತುಲ್ ಕುಲಕರ್ಣಿ ಜತೆಗೊಂದು ಸಂವಾದ ನಡೆಸಬೇಕೆನ್ನುವ ಬಯಕೆ ಇಂದು ನಿನ್ನೆಯದಲ್ಲ. ಆದರೆ ಕಾಲ ಕೂಡಿ ಬಂದಿರಲಿಲ್ಲ. ಮೊನ್ನೆ ‘ಎಕ್ಕ’ ಎಂಬ ಹೆಸರಿನ ಕನ್ನಡ ಚಿತ್ರದಲ್ಲಿ ಅತುಲ್ ಅಭಿನಯಿಸುತ್ತಿದ್ದಾರೆ ಎನ್ನುವ ಸುದ್ದಿಯ ಬೆನ್ನಟ್ಟಿದಾಗ ಅಚ್ಚರಿಯ ವಿಷಯವೊಂದು ನನ್ನ ಗಮನಕ್ಕೆ ಬಂತು.
ಅದೆಂದರೆ : ಈ ಸಿನಿಮಾದಲ್ಲಿ ಅತುಲ್ ಕುಲಕರ್ಣಿಯವರ ಜತೆ ನಮ್ಮ ಉಪ್ಪಿನಂಗಡಿಯ ನಟ ಎಂ.ಕೆ.ಮಠ ನಟಿಸುತ್ತಿದ್ದಾರೆ ಎನ್ನುವ ಸುದ್ದಿಯದು. ಆದರೆ ಅತುಲ್ ಅವರನ್ನು ಸಂಪರ್ಕಿಸಿ ಸಂದರ್ಶನ ನಡೆಸುವುದು ಈ ಸಮಯದಲ್ಲಿ ಕಷ್ಟ ಎಂದೆನಿಸಿದಾಗ ನಾನು ಸಂಪರ್ಕಿಸಿದ್ದು ಮಠ ಅವರನ್ನು. ಹೀಗಾಗಿ ಅತುಲ್ ಜತೆ ನಟಿಸಿದ ಅನುಭವವನ್ನು ನನ್ನ ಬಳಿ ಹೇಳಿಕೋ ಎಂದು ಮಠ ಅವರಿಗೆ ಮೆಸೇಜ್ ಮಾಡಿದೆ. ಅವರು ಕೇವಲ ಅರ್ಧ ಗಂಟೆಯಲ್ಲೇ ಬರೆದು ಕಳಿಸಿದರು. ಅದರ ಆಯ್ದ ಭಾಗವನ್ನು ಇಲ್ಲಿ ನಮ್ಮ ಓದುಗರಿಗಾಗಿ ಹಂಚಿಕೊಂಡಿದ್ದೇನೆ. ಓವರ್ ಟು ಎಂ.ಕೆ.ಮಠ :
“ತಿಂಗಳ ಹಿಂದೆ ನಿರ್ಮಾಪಕ ಜಯಣ್ಣ ಮಗ ಪ್ರೇಮ್ ಕರೆ ಮಾಡಿ “ಸ್ವಾಮೀಜಿ ಪಾತ್ರ ಇದೆ ಮಾಡ್ತೀರ ಅಣ್ಣ?” ಅಂತ ಕೇಳಿದ ತಕ್ಷಣ ನಕ್ಕಿದ್ದೆ…”ನಾನು ನಿಮ್ಮ ಕಂಪನಿ ನಟ ಅಲ್ವ ಅಣ್ಣ…? ನಟನಾದವನಿಗೆ ಇಂತಹದ್ದೇ ಪಾತ್ರ ಮಾತ್ರ ಮಾಡ್ತೀನಿ ಅನ್ನೋ ಭ್ರಮೆ ಇರಬಾರದು. ಹೆಣದ ಪಾತ್ರ ಇದ್ರೂ ಮಾಡ್ತೀನಿ” ಅಂದಿದ್ದೆ. “ಮೂರು ದಿನ ಬೇಕಾಗತ್ತೆ. ಡೇಟ್ ಆಮೇಲೆ ತಿಳಿಸ್ತೀನಿ. ನಿಮ್ಗೆ ಓಕೆ ಅಲ್ವ? ಅತುಲ್ ಕುಲಕರ್ಣಿ ಅವರ ಕಾಂಬಿನೇಷನ್” ಅಂದಾಗ ಸಣ್ಣಗೆ ಕಂಪನ. ಅತುಲ್ ಕುಲಕರ್ಣಿ ಅವರ ಜೊತೇನ? “ಸರಿ” ಅಂತಷ್ಟೆ ಅಂದೆ.
ಅತುಲ್ ಅವರು ಅಭಿನಯಿಸಿರುವ ಅದೆಷ್ಟು ಚಿತ್ರಗಳನ್ನೂ ನೋಡಿ ಸಂಭ್ರಮಿಸಿದ್ದೀನಿ! ಒಂದು ಸಲ ಒಂದೇ ಒಂದು ಸಲ ಈ ನಟರ ಜೊತೆ ಅಭಿನಯಿಸುವ ಅವಕಾಶ ಸಿಗಬಾರದೇ ಎಂದು ಅದೆಷ್ಟು ಸಲ ಹಲುಬಿದ್ದೀನಿ? ಈಗ ಅವಕಾಶ ತಾನೇ ತಾನಾಗಿ ಬಂದಿರೋವಾಗ ನನ್ನ ಸಂಭ್ರಮ ಮುಗಿಲೆತ್ತರದಲ್ಲಿ ಧೀಂ ತಕಿಟ ಧೀಂ ತಕಿಟ…
ಚಿತ್ರೀಕರಣದ ಡೇಟ್ ಬಂತು, ಮೊದಲ ದಿನಾಂಕದಂದು ಅತುಲ್ ಸರ್ ಇಲ್ಲ. ಯುವರಾಜ್ಕುಮಾರ್ ಅವರ ಕಾಂಬಿನೇಷನ್ ನಲ್ಲಿ ಮೈಸೂರಲ್ಲಿ ಚಿತ್ರೀಕರಣ. ಎರಡನೇ ದಿನಾಂಕದಂದು ಮತ್ತೆ ಮೈಸೂರಲ್ಲಿ ಚಿತ್ರೀಕರಣ. ಅತುಲ್ ಸರ್ ಮನೆಯ ಚಿತ್ರಣ. ಆಶ್ರಮದ ಸ್ವಾಮೀಜಿಯಾಗಿದ್ದ ನಾನು ಆಶ್ರಮಕ್ಕಾಗುತ್ತಿರುವ ತೊಂದರೆಯನ್ನು ಅರುಹಲು ಡಾನ್ ಹತ್ರ ಬಂದಿರ್ತೀನಿ ಅನ್ನೋದು ದೃಶ್ಯದ ತಿರುಳು. ಮಧ್ಯಾಹ್ನದವರೆಗೆ ನನ್ನ ಚಿತ್ರೀಕರಣ ಇಲ್ಲದ್ದರಿಂದ ಒಂದು ಬದಿಯಲ್ಲಿ ಚೇರ್ ಹಾಕ್ಕೊಂಡು ಕೂತಿದ್ದೆ. ಸ್ವಲ್ಪ ದೂರದಲ್ಲಿ ಯುವ ಸರ್ ಓಡಾಡುವಾಗ ಅಪ್ಪು ಸರ್ ಕಣ್ಣ ಮುಂದೆ ಬರ್ತಿದ್ರು. ಅವರ ಮತ್ತು ನನ್ನ ನಡುವಿನ ಆಪ್ತ ಮಾತುಕತೆಗಳನ್ನು ನೆನಪಿಸಿಕೊಳ್ಳುತ್ತಿದ್ದ ಹಾಗೇ ಗದರಿ ರೆಪ್ಪೆಯೊಳಗೆ ಬಚ್ಚಿಟ್ಕೊಂಡಿದ್ದ ಕಣ್ಣೀರು ನನ್ನ ಮಾತು ಕೇಳದೆ ಹೊರಗೆ ಧುಮುಕಿತ್ತು.
ಯಾವಾಗಲೂ ಧರಿಸುವ ಮಾಸ್ಕನ್ನು ಹಣೆಯವರೆಗೂ ಎಳಕೊಂಡು ನಿದ್ರೆ ಮಾಡುವವನಂತೆ ಕೂತಲ್ಲೇ ಕತ್ತು ವಾಲಿಸಿ ಕೂತೆ. ಲಂಚ್ ಬ್ರೇಕಾಯ್ತು, ಊಟ ಮುಗಿಯಿತು, ಸಹನಿರ್ದೇಶಕರು ಬಂದು “ಸರ್ ರೆಡಿಯಾಗಿ, ನೆಕ್ಸ್ಟ್ ಶಾಟ್ ನಿಮ್ದೆ” ಎಂದು ಹೇಳಿ ಹೋದಾಗ ಸ್ವಾಮೀಜಿ ಕಾಸ್ಟ್ಯೂಂ ಹಾಕ್ಕೊಂಡು ರೆಡಿಯಾದೆ. ಹಣೆ ಮೇಲೆ ಗಂಧ ಇಟ್ಟ ತಕ್ಷಣ ಶೂಟಿಂಗ್ ಜಾಗಕ್ಕೆ ಓಡೋದೆ. ವಿಲನ್ ಛೇಂಬರ್ ಚೇರಲ್ಲಿ ಅತುಲ್ ಸರ್ ಕೂತಿದ್ದಾರೆ, ಅವರ ಎದುರಿನ ಚೇರಲ್ಲಿ ನಾನು ಕೂರಬೇಕು, ನನ್ನ ಹಿಂಭಾಗದಲ್ಲಿ ಯುವರಾಜ್ಕುಮಾರ್ ಸರ್ ನಿಂತಿರ್ತಾರೆ. ಜಪ ಮಾಲೆಯನ್ನು ತಿರುಗಿಸುತ್ತಾ ಅತುಲ್ ಸರ್ ಗೆ ನನ್ನ ಮಾತುಗಳನ್ನು ಹೇಳಿ ಎದ್ದು ಬರುವಾಗ ಯುವ ಅವರನ್ನು ನೋಡಿ ಮುಗುಳ್ನಕ್ಕು ಹೊರಬರಬೇಕು. ಇದಿಷ್ಟು ದೃಶ್ಯ. ಭಾರತೀಯ ಚಿತ್ರರಂಗದ ಅದ್ಭುತ ನಟ ಅತುಲ್ ಅವರ ಎದುರಲ್ಲಿ ಸಂಭಾಷಣೆ ಹೇಳೋದೆ? ಸಂಭಾಷಣೆ ತಪ್ಪಿದ್ರೆ…? ಎಂಬ ಆತಂಕ ಕಿಬ್ಬೊಟ್ಟೆಯಿಂದ ಒದ್ಕೊಂಡು ಬರ್ತಿತ್ತು. ಸತ್ಯಹೆಗ್ಡೆ ಅವ್ರು ಕ್ಯಾಮರಾ ಮ್ಯಾನ್. ಎರಡೂ ಕಡೆ ಕೆಮರಾ ಫಿಕ್ಸ್ ಮಾಡಿ ಲೈಟಿಂಗ್ ಮಾಡಿಸ್ತಿದ್ರು.
ನನ್ನ ಅಂಗಾಲು ಬೆವರ್ತಿರೋದು ಅನುಭವಕ್ಕೆ ಬರ್ತಿತ್ತು. ಆಗ ನೆನಪಿಗೆ ಬಂದವರೇ ನನ್ನ ಮಹಾಗುರು ಭರಣ ಸರ್. ಇಂಡಸ್ಟ್ರಿಗೆ ಬಂದ ಪ್ರಾರಂಭದ ದಿನಗಳಲ್ಲಿ ಅಭಿನಯಿಸುವಾಗ ಒಂದೊಂದು ಶಾಟ್ ಗೂ ಎಂಟ್ಹತ್ತು ಟೇಕ್ ತಗೊಳ್ತಿದ್ದೆ. ಗುರುಗಳು ಏನೂ ಹೇಳ್ತಿರ್ಲಿಲ್ಲ. ಅದೊಂದು ದಿನ ನನಗೆ ಕೇಳುವ ಹಾಗೆ ಫೋನಲ್ಲಿ ಅಭಿನಯಿಸುವಾಗ ಅನುಸರಿಸಬೇಕಾದ ಕೆಲವು ಸೂಚನೆಗಳನ್ನು ಹೇಳ್ತಿದ್ರು. ಫೋನಲ್ಲಿ ಆ ಕಡೆ ನಿಜವಾಗಿಯೂ ಯಾರಾದ್ರೂ ಇದ್ರೋ ಇಲ್ವೋ ಗೊತ್ತಿಲ್ಲ…ಅವ್ರು ಫೋನಲ್ಲಿ ಹೇಳ್ತಿದ್ದ ಮಾತುಗಳನ್ನೇ ನನ್ನ ಅಭಿನಯದಲ್ಲಿ ಅಳವಡಿಸಿಕೊಂಡೆ, ಹಲವು ಸಲ ಪ್ರಯೋಗ ಮಾಡಿದ್ದೆ ಕೂಡ. ಅತುಲ್ ಸರ್ ಎದುರು ಅಭಿನಯಿಸುವಾಗ ಗುರುಗಳು ಹೇಳಿದ್ದ ರೀತಿಯನ್ನು ಅನುಸರಿಸಿದೆ. ಮಾತುಗಳು ಸರಾಗವಾಗಿ ಬಂತು. ಬೇರೆ ಬೇರೆ ಆಂಗಲ್ ನಲ್ಲಿ ನಾಲ್ಕೈದು ಸಲ ಶಾಟ್ ತಗೊಳ್ಳುವಾಗಲೂ ಸ್ವಲ್ಪವೂ ತಡವರಿಸದೆ ಮಾತು ಒಪ್ಪಿಸಿದೆ. ಮುಂದಿನ ಶಾಟ್ ಗೆ ಲೈಟ್ ಚೇಂಜ್ ಮಾಡಬೇಕಿದ್ದರಿಂದ ಪಕ್ಕದ ಕೊಠಡಿಯ ಮೂಲೆಯಲ್ಲಿ ಚೇರ್ ಹಾಕಿ ಕೂತು ಮೊಬೈಲ್ ಕುಟ್ಟತೊಡಗಿದ್ದೆ. ಅಷ್ಟರಲ್ಲಿ ಅಲ್ಲಿಗೆ ಧಾವಿಸಿ ಬಂದ ಕಾಸ್ಟ್ಯೂಂ ಅಸಿಸ್ಟೆಂಟ್ “ಸಾರ್… ನಿಮ್ ಬಗ್ಗೆ ಅತುಲ್ ಸರ್, ಯುವ ಸರ್ ಅವ್ರತ್ರ ಮಾತಾಡ್ತಿದ್ರು” ಅಂದ್ರು… “ನನ್ಬಗ್ಗೇನ!!” ಅಂತಿದ್ದ ಹಾಗೇ ನನ್ನ ಎದುರಲ್ಲಿ ಅತುಲ್ ಸರ್ ನಿಂತಿದ್ರು! ತಕ್ಷಣ ಕೂತಲ್ಲಿಂದ ಎದ್ದೆ.
ಕೈಚಾಚಿದ್ರು, ಕಂಪಿಸುತ್ತಿದ್ದ ಕೈಯನ್ನು ಅವರ ಅಂಗೈಯಲ್ಲಿಟ್ಟೆ. ಬಲವಾಗಿ ಹಿಡಿದವರೆ…”ನಾನು ಅತುಲ್, ತುಂಬಾ ಚೆನ್ನಾಗಿ ಅಭಿನಯಿಸಿದ್ರಿ. ನೀವು ಎಲ್ಲಿಯವ್ರು?” ಅಂದ್ರು ಹಿಂದಿಯಲ್ಲಿ. ನನ್ನೊಳಗೆ ಹುಮ್ಮಸ್ಸಿನ ನಾಗಾಲೋಟ… ನನ್ನ ಬಗ್ಗೆ, ಭರಣ ಸರ್ ಬಗ್ಗೆ ಹೇಳಿದ ಬಳಿಕ ಗುಡ್ ಗುಡ್ ಅಂದು ಬೆನ್ತಟ್ಟಿ ಅವರಿಗೆ ಮೀಸಲಿಟ್ಟಿದ್ದ ಚೇರಲ್ಲಿ ಕೂತ್ಕೊಂಡ್ರು. ನಾನವರನ್ನೆ ನೋಡ್ತಾ ಮೂಲೆಯಲ್ಲಿ ಕೂತ್ಕೊಂಡೆ… ತುಂಬಾ ವರ್ಷಗಳಿಂದ ಯಾವ ನಟನ ಜೊತೆ ಅಭಿನಯಿಸಬೇಕೂಂತ ಬಯಸ್ತಿದ್ನೋ, ಯಾವ ನಟನನ್ನು ಹತ್ರದಿಂದ ಮಾತಾಡಿಸ್ಬೇಕೂಂತ ಅನ್ಕೊಳ್ತಿದ್ನೋ ಅದು ಜಯಣ್ಣ ಅವರ ಮಗ ಪ್ರೇಮ್ ಅವರಿಂದಾಗಿ ಸಾಧ್ಯವಾಗಿತ್ತು…
ಚಿತ್ರೀಕರಣ ಮುಗಿದು ಹೊರಡುವ ಮೊದಲು “ಸರ್ ನಿಮ್ಜೊತೆ ಒಂದು ಫೋಟೋ ಬೇಕು” ಅಂದೆ. ಮುಗುಳ್ನಗುತ್ತಾ ಹತ್ರ ಬಂದು ನಿಂತ್ರು. ಅಲ್ಲೇ ಇದ್ದ ನನ್ನ ಆಪ್ತ ಜೀವ “ಪೀಣ್ಯ ಪ್ರಸಾದ್” ಅವ್ರು ಈ ಫೋಟೋ ಕ್ಲಿಕ್ಕಿಸಿದ್ರು…
ಅಂದಹಾಗೆ ಚಿತ್ರದ ಹೆಸರು “ಎಕ್ಕ”. ನಿರ್ದೇಶಕರು: ರೋಹಿತ್ ಪದಕಿ.