ಗ್ರಾ.ಪಂ ವಿರುದ್ದ ಆಕ್ರೋಶ, ತುರ್ತಾಗಿ ಬೋರ್ ವೆಲ್ ಕೊರೆಸಲು ಆಗ್ರಹ
ಪುತ್ತೂರು: ಕಳೆದ ಮೂರು ತಿಂಗಳಿನಿಂದ ನೀರಿನ ಸಮಸ್ಯೆ ಇದ್ದರೂ ಗ್ರಾಮ ಪಂಚಾಯತ್ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ ಸರ್ವೆ ಗ್ರಾಮದ ನೇರೋಳ್ತಡ್ಕ ನಿವಾಸಿಗಳು ಪ್ರತಿಭಟನೆ ನಡೆಸಿದ ಘಟನೆ ಫೆ.17ರಂದು ನಡೆದಿದೆ.
ನೇರೋಳ್ತಡ್ಕ ಪರಿಸರದ ಸುಮಾರು 50 ಮನೆಗಳಿಗೆ ನೀರಿನ ಸಮಸ್ಯೆ ಎದುರಾಗಿದ್ದು, ಇರುವ ಒಂದು ಬೋರ್ ವೆಲ್ ನ ನೀರು ಕುಡಿಯಲು ಸೂಕ್ತವಲ್ಲ ಎಂದು ಲ್ಯಾಬ್ ವರದಿ ಬಂದಿದ್ದರೆ ಇನ್ನೊಂದು ಬೋರ್ ವೆಲ್ ನಲ್ಲಿ ನೀರು ಖಾಲಿಯಾಗಿದೆ. ಈ ಹಿನ್ನಲೆಯಲ್ಲಿ ನೀರಿನ ಸಮಸ್ಯೆ ಉಂಟಾಗಿದ್ದು, ತುರ್ತಾಗಿ ಹೊಸ ಬೋರ್ ವೆಲ್ ಕೊರೆಯುವುದೇ ಇಲ್ಲಿನ ಸಮಸ್ಯೆಗೆ ಪರಿಹಾರ ಎಂದು ಪ್ರತಿಭಟನಕಾರರು ತಿಳಿಸಿದ್ದಾರೆ.
ನಮ್ಮ ಸಮಸ್ಯೆ ಗೊತ್ತಿದ್ದರೂ ಗ್ರಾ.ಪಂ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ತುರ್ತಾಗಿ ಸಮಸ್ಯೆ ಬಗೆಹರಿಸದಿದ್ದಲ್ಲಿ ಗ್ರಾ.ಪಂ ಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸ್ಥಳೀಯ ಗ್ರಾ.ಪಂ. ಸದಸ್ಯರು, ಮಹಿಳೆಯರು ಸೇರಿದಂತೆ ಸುಮಾರು 25 ಮಂದಿ ಇದ್ದರು.