ಉಪ್ಪಿನಂಗಡಿ ಕಾಲೇಜಿನಲ್ಲಿ ಸರಣಿ ಉಪನ್ಯಾಸ ಕಾರ್ಯಕ್ರಮಕ್ಕೆ ಚಾಲನೆ

0

ಪ್ರತಿ ಸನ್ನಿವೇಶಗಳನ್ನು ಧನಾತ್ಮಕವಾಗಿ ತೆಗೆದುಕೊಳ್ಳಬೇಕು: ಡಾ. ನಂದೀಶ್

ಪುತ್ತೂರು: ವ್ಯಕ್ತಿ ಬದುಕಿನಲ್ಲಿ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ಯಾವ ರೀತಿ ಸರಿಪಡಿಸಿಕೊಳ್ಳುತ್ತೇವೆ ಎಂಬುದು ಬಹು ಮುಖ್ಯವಾಗಿದೆ. ಸಮಸ್ಯೆಗಳು ಜೀವನದ ಭಾಗವಾಗಿವೆ. ಪ್ರತಿ ಸನ್ನಿವೇಶಗಳಲ್ಲೂ ಧನಾತ್ಮಕವಾಗಿ ಯೋಚನೆ ಮಾಡಿ ಜೀವನ ಸಾಗಿಸಬೇಕು ಎಂದು ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ನಂದೀಶ್ ವೈ.ಡಿ. ಹೇಳಿದರು.


ಉಪ್ಪಿನಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜ್‌ನ ಆಂತರಿಕ ಗುಣಮಟ್ಟ ಭರವಸಾ ಕೋಶ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕಗಳು ಆಯೋಜಿಸಿದ್ದ ಸರಣಿ ಉಪನ್ಯಾಸ ಕಾರ್ಯಕ್ರಮದ ಮೊದಲ ಉಪನ್ಯಾಸದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಎಮೋಷನಲ್ ಇಂಟೆಲಿಜೆನ್ಸ್ ಮತ್ತು ವಿದ್ಯಾರ್ಥಿಗಳು ಎಂಬ ವಿಷಯದ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು ಸೋತುಹೋದ ಸಂದರ್ಭದಲ್ಲಿ ಮಾನಸಿಕವಾಗಿ ಕುಗ್ಗದೆ ಎದುರಾಗುವ ಸನ್ನಿವೇಶಗಳನ್ನು ಧೈರ್ಯವಾಗಿ ಗೆಲ್ಲುವ ಸಾಮರ್ಥ್ಯವನ್ನು ಹೊಂದಿರಬೇಕೆಂದು ಅವರು ಕರೆ ನೀಡಿದರು.

ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ರವಿರಾಜ ಎಸ್. ಅವರು ಎನ್‌ಎಸ್‌ಎಸ್ ಘಟಕಗಳು ಆಯೋಜಿಸುವ ಸರಣಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಪಾಲ್ಗೊಂಡು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶುಭ ಹಾರೈಸಿದರು. ಕಾರ್ಯಕ್ರಮದ ಸಂಘಟಕ ಡಾ. ಹರಿಪ್ರಸಾದ್ ಎಸ್. ಅವರು ಈ ಸರಣಿ ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಲೋಕದ ಪ್ರಚಲಿತ ವಿಷಯಗಳ ಮತ್ತು ಕೌಶಲ್ಯಗಳ ಬಗೆಗಿನ ಪರಿಚಯ ಮಾಡುವ ಉದ್ದೇಶ ಒಳಗೊಂಡಿದೆ ಎಂದರು.

ಸ್ವಯಂಸೇವಕರೇ ಆಯೋಜಿಸುವ ಈ ಕಾರ್ಯಕ್ರಮ ಸಂಘಟನಾ ಕೌಶಲ್ಯ ಮತ್ತು ನಾಯಕತ್ವ ಗುಣ ಬೆಳೆಸುವ ಉದ್ದೇಶಗಳನ್ನು ಕೂಡ ಒಳಗೊಂಡಿದೆ ಎಂದು ಅವರು ಹೇಳಿದರು. ಎನ್.ಎಸ್.ಎಸ್ ಯೋಜನಾಧಿಕಾರಿ ಕೇಶವ ಕುಮಾರ್ ಬಿ, ಕನ್ನಡ ವಿಭಾಗದ ಉಪನ್ಯಾಸಕರುಗಳಾದ ಮಂಜುನಾಥ್ ಬಿಆರ್, ಮಹೇಶ್ ಕುಮಾರ್, ಡಾ. ಸಂತೋಷ್ ಎಚ್.ಎಸ್, ಅರ್ಥಶಾಸ್ತ್ರ ವಿಭಾಗದ ಡಾ. ತೇಜಸ್ವಿ ಕುಮಾರ್, ಇತಿಹಾಸ ವಿಭಾಗದ ಕೃಷ್ಣ ಡಿ, ಸಮಾಜಶಾಸ್ತ್ರ ವಿಭಾಗದ ಮಹೇಶ್ ಉಪಸ್ಥಿತರಿದ್ದರು. ಸ್ವಯಂಸೇವಕಿ ಪುಷ್ಪಾವತಿ ಸ್ವಾಗತಿಸಿ ರಮ್ಯಾ ಸಂಪನ್ಮೂಲ ವ್ಯಕ್ತಿಯ ಪರಿಚಯ ಮಾಡಿದರು. ಸಿಂಚನ ಎಲ್ ವಂದಿಸಿದರು. ರಿಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here