ನೆಲ್ಯಾಡಿ: ಮರಾಟಿ ಸಮಾಜ ಸೇವಾ ಸಂಘ ನೆಲ್ಯಾಡಿ -ಕೌಕ್ರಾಡಿ ಇದರ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಫೆ.16ರಂದು ನೆಲ್ಯಾಡಿ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾಭವನದಲ್ಲಿ ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಮಾರ್ಗದರ್ಶನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಅಧ್ಯಕ್ಷ, ವಿಶ್ರಾಂತ ಪ್ರಾಂಶುಪಾಲ ಎನ್.ದುಗ್ಗಪ್ಪ ನಾಯ್ಕ ಬಡಾವು ಅಧ್ಯಕ್ಷತೆ ವಹಿಸಿದ್ದರು. ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧನೆ ಮಾಡಿ ಮಾತನಾಡಿದ ಅವರು, ಮರಾಟಿಗರು ಸಂಘಟಿತರಾದಾಗ ಮಾತ್ರ ಎದುರಾಗುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕೆ ಸಾಧ್ಯ. ಮಕ್ಕಳನ್ನು ಹೆಚ್ಚು ಓದುವಂತೆ ಉತ್ತೇಜನ ನೀಡಿ ಉತ್ತಮ ವಿದ್ಯಾವಂತರನ್ನಾಗಿ ರೂಪಿಸಲು ಕರೆ ನೀಡಿದರು.
ಪುತ್ತೂರು ಮರಾಟಿ ಸಮಾಜ ಸೇವಾ ಸಂಘದ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಲ್ಯಾಂಪ್ಸ್ ಸೊಸೈಟಿ ನಿರ್ದೇಶಕರಾದ ಕರುಣಾಕರ ಪಾಂಗ್ಲಾಯಿ ಮಾತನಾಡಿ, ಸಂಘಗಳು ಪರಸ್ಪರ ಉತ್ತಮ ಸಂಪರ್ಕ, ಸಹಕಾರವನ್ನಿಟ್ಟುಕೊಂಡಲ್ಲಿ ಉತ್ತಮ ಪ್ರಗತಿಯನ್ನು ಕಂಡುಕೊಳ್ಳಬಹುದಾಗಿದೆ. ಗ್ರಾಮೀಣ ಜನರಿಗೆ ಗ್ರಾಮೀಣ ಸಂಘಗಳು ಹೆಚ್ಚು ಅನುಕೂಲಕರ ಎಂದರು. ಪುತ್ತೂರು ಮರಾಟಿ ಸಂಘದ ಮಾಜಿ ಕೋಶಾಧಿಕಾರಿ ಬಾಲಕೃಷ್ಣ ನಾಯ್ಕ ಪಡೀಲು, ಕಾರ್ಯದರ್ಶಿ ಶೀನಪ್ಪ ನಾಯ್ಕ ಎಸ್., ಕೋಶಾಧಿಕಾರಿ ಮೋಹನ ನಾಯ್ಕ ಎಂ., ಊರ ಹಿರಿಯರಾದ ವಾಸಪ್ಪ ನಾಯ್ಕ ಸಂಪಿಗೆತಡಿ, ಉಪ್ಪಿನಂಗಡಿ ಶ್ರೀ ಮಹಮ್ಮಾಯಿ ಮರಾಟಿ ಸಮಾಜ ಸೇವಾ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಸೀತಾರಾಮ ನಾಯ್ಕ, ವಿಶ್ವನಾಥ ನಾಯ್ಕ ಉಡ್ಲದಕೋಡಿ ಹಾಗೂ ಗೀತಾ ಆದರ್ಶನಗರ ಶುಭ ಹಾರೈಸಿದರು.

ಶಶಿಕಲಾ ಚಾಮೆತ್ತಮೂಲೆ ಹಾಗೂ ತಂಡದವರು ಪ್ರಾರ್ಥಿಸಿದರು. ಶೀನಪ್ಪ ನಾಯ್ಕ ಎಸ್ ಬರೆಗುಡ್ಡೆ ಸ್ವಾಗತಿಸಿದರು. ದಿನೇಶ್ ನಾಯ್ಕ ಪಡುಬೆಟ್ಟು ವಂದಿಸಿದರು. ವಿದ್ಯಾಲತಾ ಚಾಮೆತ್ತಮೂಲೆ ನಿರೂಪಿಸಿದರು.
ಗೌರವಾರ್ಪಣೆ:
ಹಿರಿಯರಾದ ವಾಸಪ್ಪ ನಾಯ್ಕ ಸಂಪಿಗೆತ್ತಡಿ, ಸುಂದರಿ ಚಾಮೆತ್ತಮೂಲೆ, ಸುಶೀಲ ಕುಮೇರು, ಸರಸ್ವತಿ ಹಳೆಹಿತ್ಲು, ಕಮಲ ಪುಚ್ಚೇರಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ’ಪುಟ್ಟ ಹೆಜ್ಜೆ ’ ಕವನ ಸಂಕಲನಕಾರರಾದ ಪ್ರಣಮ್ಯ ಚಾಮೆತ್ತಮೂಲೆಯವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪುತ್ತೂರು ಮಾತೃ ಸಂಘದ ಜ್ಞಾನ ನಿಧಿ ಗ್ರಂಥ ಭಂಡಾರಕ್ಕೆ ಪುಟ್ಟ ಹೆಜ್ಜೆ ಕವನ ಸಂಕಲನ ಸೇರಿದಂತೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.