ಕಡಬ: ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಿ.ಕೆ ಅಭಿಲಾಷ್ ಅವರನ್ನು ನೇಮಕಗೊಳಿಸಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆದೇಶಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿರುವ ಪಿ.ಕೆ ಅಭಿಲಾಷ್ ಅವರು ಪಕ್ಷದಲ್ಲಿ ವಿವಿಧ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರು. ನೂಜಿಬಾಳ್ತಿಲ ಕಾಂಗ್ರೆಸ್ ಬೂತ್ ಸಮಿತಿ ಅಧ್ಯಕ್ಷರಾಗಿ, ನೂಜಿಬಾಳ್ತಿಲ ಗ್ರಾಮ ಸಮಿತಿ ಅಧ್ಯಕ್ಷರಾಗಿ, ಉಸ್ತುವಾರಿಯಾಗಿ, ಕಡಬ ಬ್ಲಾಕ್ ಯುವ ಕಾಂಗ್ರೆಸ್ ಚುನಾಯಿತ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ವಿವಿಧ ಚುಣಾವಣೆ ಸಂದರ್ಭಗಳಲ್ಲಿ ಬಿಳಿನೆಲೆ ಗ್ರಾಮದ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿರುವ ಪಿ.ಕೆ ಅಭಿಲಾಷ್ ಅವರು ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದಾರೆ. ದಿ.ಕೃಷ್ಣನ್ ಕುಟ್ಟಿ ಹಾಗೂ ಅನಿತಾ ಎಂ.ಎಸ್ ದಂಪತಿಗಳ ಪುತ್ರನಾಗಿರುವ ಪಿ.ಕೆ ಅಭಿಲಾಷ್ ಅವರು ವೃತ್ತಿಯಲ್ಲಿ ಸರಕಾರದ ಮಾನ್ಯತೆ ಪಡೆದ ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರನಾಗಿದ್ದು ಕೃಷ್ಣ ಎಲೆಕ್ಟ್ರಿಕಲ್ಸ್, ಸೌಂಡ್ಸ್ ಲೈಟ್ಸ್, ಶಾಮಿಯಾನ ಸಂಸ್ಥೆಯ ಮಾಲಕರಾಗಿದ್ದಾರೆ. ಪತ್ನಿ ಕಾವ್ಯ ಹಾಗೂ ಪುತ್ರ ಅಧ್ರಿತ್‌ರೊಂದಿಗೆ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆಯಲ್ಲಿ ವಾಸವಾಗಿದ್ದಾರೆ.
ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ನಾನು ಆಯ್ಕೆಗೊಂಡಿರುವುದು ಅತೀವ ಸಂತಸ ತಂದಿದೆ. ಹಿರಿಯರ, ಪಕ್ಷದ ನಾಯಕರ, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಸಲಹೆ ಸೂಚನೆಗಳನ್ನು ಪಡೆದುಕೊಂಡು ಎಲ್ಲರ ಮಾರ್ಗದರ್ಶನದಲ್ಲಿ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸಲು ಪ್ರಯತ್ನಿಸುತ್ತೇನೆ.
-ಪಿ.ಕೆ ಅಭಿಲಾಷ್, ಅಧ್ಯಕ್ಷರು ಕಡಬ ಬ್ಲಾಕ್ ಕಾಂಗ್ರೆಸ್