ಪುತ್ತೂರು: ಸಾಮಾಜಿಕ ಉನ್ನತಿಯ ಉದ್ದೇಶದಿಂದ ಆರಂಭಗೊಂಡು ಪುತ್ತೂರು ದರ್ಬೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಭಾಲಾವಲೀಕರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘದ ಶತಮಾನೋತ್ಸವ ಸಮಾರೋಪ ಕಾರ್ಯಕ್ರಮವು ಫೆ.23ರಂದು ಆರ್ಯಾಪು ಗ್ರಾಮದ ಸೆಂಟ್ಯಾರ್ ಸರಸ್ವತಿಪುರಂ ಎಂಬಲ್ಲಿ ನಡೆಯಲಿದೆ. ಇದೇ ಸಂದರ್ಭ ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿ ಪುತ್ತೂರು ಇದರ ಕಟ್ಟಡ ಲೋಕಾರ್ಪಣೆಯು ನಡೆಯಲಿದೆ ಎಂದು ಭಾಲಾವಲೀಕಾರ್ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಸೇವಾ ಸಂಘ ಪುತ್ತೂರು ಇದರ ಅಧ್ಯಕ್ಷ ಬಾಲಕೃಷ್ಣ ನಾಯಕ್ ಅಜೇರು ಅವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ್ದಾರೆ.
ಫೆ.23ರ ಬ್ರಾಹ್ಮೀಮುಹೂರ್ತದಲ್ಲಿ ಸಾಮೂಹಿಕ ಯೋಗ, ಧ್ಯಾನ, ಸೂರ್ಯ ನಮಸ್ಕಾರ, ಬಳಿಕ ಗಂಟೆ 6ಕ್ಕೆ ಗಣಪತಿ ಹವನ, ಚಂಡಕಾ ಯಾಗ, ಶಿವಪೂಜೆ, ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. 10 ಗಂಟೆಗೆ ಶತಮಾನೋತ್ಸವ ಸಮಾರಂಭ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ ಬಳಿಕ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ ಎಂದ ಅವರು, ಬೆಳಿಗ್ಗೆ ಕೈವಲ್ಯ ಶ್ರೀ ಸಂಸ್ಥಾನ ಗೌಡ ಪಾದಾಚಾರ್ಯ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸರಸ್ವತೀ ಸ್ವಾಮಿ ಮಹಾರಾಜ್ ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶತಮಾನೋತ್ಸವ ಸಮಾರೋಪ ಸಮಾರಂಭವನ್ನು ಬೆಂಗಳೂರು ತ್ರಿಗುಣಾತ್ಮಕ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ ಇದರ ಅಧ್ಯಕ್ಷ ಬಿ.ಶಂಕರ್ ನಾಯಕ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಮಾಜಿ ವಿಧಾನಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅವರು ಶ್ರೀ ಸರಸ್ವತಿ ಸದನ ಲೋಕಾರ್ಪಣೆ ಮಾಡಲಿದ್ದಾರೆ. ಬೆಳ್ತಂಗಡಿ ರೈತಬಂಧು ಆಹಾರೋದ್ಯಮಿ ಶಿವಶಂಕರ ನಾಯಕ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದಾರೆ. ಶತಮಾನೋತ್ಸವ ಸಮಿತಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಅವರು ಶತಮಾನದ ಶತನಮನ ನುಡಿಯನ್ನಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಂ ಗೋಕುಲ್ ದಾಸ್ ನಾಯಕ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ. ಕರ್ನಾಟಕ ಸರಕಾರದ ಪಿಎಂ ಪೋಷಣ್ ಅಭಿಯಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಪಂಬಿ.ಸದಾಶಿವ ಪ್ರಭು ಬೆಳ್ಳಾರೆ, ಶಿವಮೊಗ್ಗ ತೀರ್ಥಹಳ್ಳಿ ಉಪವಿಭಾಗ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಧುಸೂಧನ್ ಎ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶ್ರೀ ಸರಸ್ವತಿ ಎಜ್ಯುಕೇಶನ್ ಸೊಸೈಟಿಯ ಅಧ್ಯಕ್ಷ ರಾಜಗೋಪಲ ಬಾಳೆಗುಳಿ, ಸಾರಸ್ವತ ಸಂಘ ಸಂಸ್ಥೆಗಳ ಕೇಂದ್ರೀಯ ಸಮಿತಿ ಪುತ್ತೂರು ಇದರ ಅಧ್ಯಕ್ಷ ಉಮೇಶ್ ಪ್ರಭು, ವಸಂತ ಕುಮಾರ್ ಕೆ ದೋಹಾ ಕತರ್, ರಾಜಾಪುರ ಸಾರಸ್ವತ ಸಮಾಜದ ಗೌರವ ಕಾರ್ಯದರ್ಶಿ ಅಶೋಕ್ ಪ್ರಭು ಕುಂಟುನಿ, ಅಂತರಾಷ್ಟ್ರೀಯ ಕ್ರೀಡಾಪಟು ಸರಸ್ವತಿ ಕಾಮತ್, ಎಣ್ಮಕಜೆ ಗ್ರಾ.ಪಂ ಅಧ್ಯಕ್ಷ ಸೋಮಶೇಖರ್ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ಲೋಕಸೇವಾ ಆಯೋಗದ ಮಾಜಿ ಸದಸ್ಯ ಎಸ್.ಆರ್ ರಂಗಮೂರ್ತಿ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದಲ್ಲಿ ಹಲವಾರು ಮಂದಿ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ಪದಾಧಿಕಾರಿಗಳ ಸಮಾವೇಶ:
ಮಧ್ಯಾಹ್ನ ಗಂಟೆ 2ಕ್ಕೆ ಸರಸ್ವತಿ ಸದನದಲ್ಲಿ ವಿಶ್ವವ್ಯಾಪಿ ದೇವಳ, ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಾವೇಶ ನಡೆಯಲಿದೆ. ದ.ಕ.ಜಿಲ್ಲಾ ಕೈಗಾರಿಕಾ ಕೇಂದ್ರ ಇದರ ಜಂಟಿ ನಿರ್ದೇಶಕ ಎಂ ಗೋಕುಲ್ ದಾಸ್ ನಾಯಕ್ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರು ರಾಜಾಪುರ ಸಾರಸ್ವತ ಸಮಾಜದ ಗೌರವ ಕಾರ್ಯದರ್ಶಿ ಅಶೋಕ್ ಪ್ರಭು ಕುಂಟುನಿ ಅವರು ಸಂಯೋಜಕರಾಗಲಿದ್ದಾರೆ ಎಂದು ಬಾಲಕೃಷ್ಣ ಅಜೇರು ಅವರು ತಿಳಿಸಿದರು.
ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ:
ಸಭಾ ಕಾರ್ಯಕ್ರಮದ ಬಳಿಕ ಶ್ರೀ ಶಿವಾನಂದ ಸರಸ್ವತಿ ವೇದಿಕೆಯಲ್ಲಿ ಸಾಂಸ್ಕೃತಿಕ ವೈವಿಧ್ಯ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಸುಬ್ಬು ಸೆಂಟ್ಯಾರ್ ಸಾರಥ್ಯದಲ್ಲಿ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಬಾಲಕೃಷ್ಣ ಅಜೇರು ಅವರು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಭಾ.ಗೌ.ಸಾ.ಬ್ರಾ.ಸ.ಸೇ.ಸಂಘ ಪುತ್ತೂರು ಇದರ ಪ್ರಧಾನ ಕಾರ್ಯದರ್ಶಿ ಮೂಲಚಂದ್ರ ಕಾಂತನ, ಕಾರ್ಯಕ್ರಮದ ಪ್ರಧಾನ ಸಂಚಾಲಕ ಹರೀಶ್ ಬೋರ್ಕರ್ ಕತ್ತಲ್‌ಕಾನ ಅವರು ಉಪಸ್ಥಿತರಿದ್ದರು.
ಶತಮಾನೋತ್ಸವಕ್ಕೆ ಶತ ಕಾರ್ಯಕ್ರಮ
ಸಾಮಾಜಿಕ ಉನ್ನತಿಯ ಉದ್ದೇಶದಿಂದ ಕೊಡಂಗೆ ನಾರಾಯಣ ನಾಯಕ್, ವಿ.ಟಿ. ಬೋರ್ಕರ್ ಕತ್ತಲೆಕಾನ ಮುಂತಾದ ಹಿರಿಯರಿಂದ ಮೋಂತಿಮಾರು ದೇವಸ್ಥಾನದ ಬಳಿ 1923 ರಲ್ಲಿ ಭಾಲಾವಲೀಕಾರ್ ಸಾರಸ್ವತ ಬ್ರಾಹ್ಮಣ ಸಂಘವು ಪ್ರಾರಂಭವಾಯಿತು. ಮುಂದೆ ಪುತ್ತೂರು ದರ್ಬೆಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದೆ. 1929 ನೆ ಇಸವಿಯಲ್ಲಿ ಸುಳ್ಯ ಕೃಷ್ಣ ನಾಯಕರ ಅಧ್ಯಕ್ಷತೆಯಲ್ಲಿ ಪ್ರಥಮ ಭಾಲಾವಲೀಕಾರ್ ಸಮ್ಮೇಳನವು ಮೋಂತಿಮಾರಿನಲ್ಲಿ ನಡೆದಿತ್ತು. 1985 ರಲ್ಲಿ ಕರ್ನಾಟಕ ಮತ್ತು ಕೇರಳ ಭಾಲಾವಲೀಕಾರ್ ಪ್ರತಿನಿಧಿ ಸಮ್ಮೇಳನ ಕಿಲಂಗೋಡಿ ಶಂಕರ ರಾಯರ ಅಧ್ಯಕ್ಷತೆಯಲ್ಲಿ ನಡೆದಿತ್ತು. ಕುಕ್ಕಾಡಿ ಮುಕುಂದ ನಾಯಕ್, ಕುಂಟಿಕಾನ ಮಾಸ್ತರ್ ರಾಮಚಂದ್ರ ನಾಯಕ್‌ರ ಹಲವಾರು ಮಂದಿ ಹಿರಿಯ ಸೇವೆ ಇಲ್ಲಿ ಸ್ಮರಣೀಯವಾಗಿದೆ. ಶತಮಾನೋತ್ಸವಕ್ಕೆ ಶತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೈದ್ಯಕೀಯ ಸೇವೆ, ವಿದ್ಯಾರ್ಥಿವೇತನ ವಿತರಣೆ, ಮನೆ ನಿರ್ಮಾಣ ಕಾರ್ಯ ಸಹಿತ ಹಲವು ಕಾರ್ಯಕ್ರಮ ಯಶಸ್ವಿಯಾಗಿದೆ. ಜೊತೆಗೆ 8 ವಿವಿಧ ಸಮಾಜಮುಖಿಯಾಗಿ ಹಿರಿಯನ್ನು ಗೌರವಿಸುವ ಕಾರ್ಯಕ್ರಮ ಮಾಡಿದ್ದೇವೆ. ಸೆಂಟ್ಯಾರ್‌ನಲ್ಲಿ 48 ಸೆಂಟ್ಸ್ ಜಾಗದಲ್ಲಿ ಸರಸ್ವತಿ ಎಜ್ಯುಕೇಶ್‌ನ್ ಸೊಸೈಟಿ ಕಟ್ಟಡವು ಸುಮಾರು ರೂ. 1 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಿದೆ.
ಬಾಲಕೃಷ್ಣ ನಾಯಕ್ ಅಜೇರು ಅಧ್ಯಕ್ಷರು