ಕ್ರೀಡೆಯಲ್ಲಿ ಕ್ರೀಡಾಸ್ಫೂರ್ತಿ ಹೊರತು ಕಾನೂನನ್ನು ಕೈಗೆತ್ತಿಕೊಳ್ಳುವುದಲ್ಲ-ಪಂಜಿಗುಡ್ಡೆ ಈಶ್ವರ ಭಟ್
ಪುತ್ತೂರು: ತ್ರಿಶೂಲ್ ಫ್ರೆಂಡ್ಸ್ ಪುತ್ತೂರು ಇದರ ಸಹಯೋಗದಲ್ಲಿ ಪುತ್ತೂರು ತಾಲೂಕಿನ ಎಂಟು ಬಲಿಷ್ಟ ತಂಡಗಳು ಜೊತೆಗೆ ವಿವಿಧ ಜಿಲ್ಲೆಗಳ ಮುಕ್ತ ಎಂಟು ತಂಡಗಳ ನಿಗದಿತ ಓವರ್‌ಗಳ, ನಾಕೌಟ್ ಮಾದರಿಯ ಅಹರ್ನಿಶಿ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಫೆ.22 ರಂದು ಕಿಲ್ಲೆ ಮೈದಾನದಲ್ಲಿ ಉದ್ಘಾಟನೆಗೊಂಡಿತು.
ಕ್ರೀಡೆಯಲ್ಲಿ ಕ್ರೀಡಾಸ್ಫೂರ್ತಿ ಹೊರತು ಕಾನೂನನ್ನು ಕೈಗೆತ್ತಿಕೊಳ್ಳುವುದಲ್ಲ-ಪಂಜಿಗುಡ್ಡೆ ಈಶ್ವರ ಭಟ್:
ಪಂದ್ಯಾಟವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರು ಮಾತನಾಡಿ, ಎಲ್ಲಾ ಜಾತಿ-ಧರ್ಮದವರನ್ನು ಒಗ್ಗೂಡಿಸಿಕೊಂಡು ಹೋಗುವುದು ಕ್ರೀಡೆಯಾಗಿದೆ. ಯುವಸಮುದಾಯವು ಕ್ರೀಡೆಯನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ. ಕ್ರೀಡೆಯಲ್ಲಿ ಕ್ರೀಡಾಸ್ಫೂರ್ತಿ ಇರಬೇಕೇ ಹೊರತು ಕೈಕೈ ಮಿಲಾಯಿಸಿ ಕಾನೂನನ್ನು ಕೈಗೆತ್ತಿಕೊಳ್ಳುವುದಲ್ಲ. ಕ್ರೀಡೆ ಯಶಸ್ವಿಯಾಗಬೇಕಾದರೆ ಕ್ರೀಡಾಪಟುಗಳು ಸಂಘಟಕರ ತೀರ್ಮಾನಕ್ಕೆ ಬದ್ಧರಾಗಿರಬೇಕು. ಕ್ರೀಡೆಯನ್ನು ಆಯೋಜಿಸುವ ಸಂಘಟಕರು ಕ್ರೀಡೆಯಿಂದ ಬಂದಂತಹ ಲಾಭಾಂಶವನ್ನು ಸಮಾಜದಲ್ಲಿನ ಅರ್ಹ ಫಲಾನುಭವಿಗಳ ಕಣ್ಣೀರೊರೆಸುವ ಕಾರ್ಯವನ್ನು ಮಾಡಬೇಕಿದ್ದು, ಈ ತ್ರಿಶೂಲ್ ಫ್ರೆಂಡ್ಸ್‌ರವರು ಅದನ್ನು ಮಾಡಿ ತೋರಿಸಿದ್ದಾರೆ ಎಂದರು.
ಕ್ರೀಡಾಪಟುಗಳಿಗೆ ಪ್ರತಿಭೆ ತೋರ್ಪಡಿಸಲು ಉತ್ತಮ ವೇದಿಕೆ-ಭಾಸ್ಕರ ಗೌಡ:
ನೋಟರಿ ಹಾಗೂ ನ್ಯಾಯವಾದಿ ಭಾಸ್ಕರ ಗೌಡ ಕೋಡಿಂಬಾಳ ಮಾತನಾಡಿ, ಇತ್ತೀಚೆಗೆ ನಿಧನರಾದ ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿರವರ ಹೆಸರನ್ನು ಈ ವೇದಿಕೆಗೆ ಇಟ್ಟು ಅವರಿಗೆ ಗೌರವ ಸೂಚಿಸಿರುವುದು ನಿಜಕ್ಕೂ ಯುವಕರ ನಡೆಯು ಶ್ಲಾಘನೀಯ. ಇದರಲ್ಲೇ ಗೊತ್ತಾಗುತ್ತದೆ ತ್ರಿಶೂಲ್ ಫ್ರೆಂಡ್ಸ್‌ರವರ ಸೇರ ಕೋಟಿಯಪ್ಪ ಪೂಜಾರಿರವರ ಮೇಲಿನ ಭಕ್ತಿ, ಭಾವ, ಗೌರವ ಎಂತಹುದು ಎಂಬುದು. ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ತ್ರಿಶೂಲ್ ಫ್ರೆಂಡ್ಸ್‌ರವರು ಉತ್ತಮ ವೇದಿಕೆಯನ್ನು ನಿರ್ಮಿಸಿಕೊಟ್ಟಿದ್ದು ಕ್ರೀಡಾಪಟುಗಳು ತಮ್ಮ ಪ್ರತಿಭೆಯನ್ನು ತೋರ್ಪಡಿಸಿಕೊಳ್ಳಬೇಕು ಎಂದರು.

ಜಾತಿ-ಮತ-ಧರ್ಮ ಮೀರಿ ನಿಲ್ಲುವಂತಹುದು ಕ್ರೀಡೆಯಾಗಿದೆ-ಚಿದಾನಂದ ಬೈಲಾಡಿ:
ನೋಟರಿ ಹಾಗೂ ನ್ಯಾಯವಾದಿ ಚಿದಾನಂದ ಬೈಲಾಡಿ ಮಾತನಾಡಿ, ಯುವಕ ಧರೇಶ್ ಹೊಳ್ಳರವರ ನಾಯಕತ್ವದಲ್ಲಿ ತ್ರಿಶೂಲ್ ಫ್ರೆಂಡ್ಸ್ ಹೆಸರಿನಿಂದ ಹಲವಾರು ವರ್ಷಗಳಿಂದ ಕ್ರೀಡೆಯನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಕ್ರೀಡೆ ಎಂಬುದು ಜಾತಿ-ಮತ-ಧರ್ಮ ಮೀರಿ ನಿಲ್ಲಬಹುದಾದಂತಹ ಕ್ರೀಡೆಯಾಗಿದೆ. ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ತಮ್ಮ ಪ್ರತಿಭೆ ಪ್ರದರ್ಶಿಸಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತಾಗಲಿ ಎಂದರು.
ಸ್ನೇಹ-ಶಾಂತಿ-ಸೌಹಾರ್ದತೆ ನೆಲೆಸಿದರೆ ಸಮಾಜವು ಅಭಿವೃದ್ಧಿಯತ್ತ-ರಝಾಕ್ ಬಿ.ಎಚ್:
ಸಮಾಜ ಸೇವೆಯಲ್ಲಿ ತಾಲೂಕು ರಾಜ್ಯೋತ್ಸವ ಪ್ರಶಸ್ತಿ ವಿಜೇತ ಪುರಸ್ಕೃತ ಹಾಗೂ ಅಮರ್ ಅಕ್ಬರ್ ಅಂತೋನಿ ಸೌಹಾರ್ದ ಕ್ರಿಕೆಟ್‌ನ ಸ್ಥಾಪಕ ರಝಾಕ್ ಬಿ.ಎಚ್ ಬಪ್ಪಳಿಗೆ ಮಾತನಾಡಿ, ತ್ರಿಶೂಲ್ ಫ್ರೆಂಡ್ಸ್‌ರವರು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಲು ಕಬಡ್ಡಿ, ಕ್ರಿಕೆಟ್ ಪಂದ್ಯಾಟಗಳನ್ನು ಆಯೋಜಿಸಿ ಯಶಸ್ವಿಯಾಗಿದ್ದಾರೆ. ತಾಲೂಕಿನ ನಾನಾ ಭಾಗಗಳಿಂದ ಯುವಕರು ಈ ತ್ರಿಶೂಲ್ ಫ್ರೆಂಡ್ಸ್ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಸಮಾಜದಲ್ಲಿ ಸ್ನೇಹ-ಶಾಂತಿ-ಸೌಹಾರ್ದತೆ ನೆಲೆಸಿದರೆ ಮಾತ್ರ ಸಮಾಜವು ಅಭಿವೃದ್ಧಿಯತ್ತ ಸಾಗಬಹುದಾಗಿದೆ ಎಂದರು.
ಪಿಪಿಎಲ್ ಆಯೋಜಕ ಭಾನುಪ್ರಕಾಶ್, ಕೋರ್ಟ್‌ರಸ್ತೆ ಪಂಚಮುಖಿ ಫ್ರೆಂಡ್ಸ್‌ನ ಪ್ರವೀಣ್ ಆಚಾರ್ಯ, ಶಿವಕೃಪಾ ಜನರಲ್ ಸ್ಟೋರ್ ಮಾಲಕ ನಾಗೇಶ್ ರಾವ್, ತ್ರಿಶೂಲ್ ಫ್ರೆಂಡ್ಸ್ ಮುಖ್ಯಸ್ಥ ಧರೇಶ್ ಹೊಳ್ಳ, ವೀಕ್ಷಕ ವಿವರಣೆಗಾರರಾದ ಸತೀಶ್ ಕುಮಾರ್ ಮಂಗಳೂರು, ಗೋಪಿ ಮಂಗಳೂರು, ರಝಾಕ್ ಸಾಲ್ಮರ, ಉದ್ಯಮಿ ಶೋಭಿತ್ ರೈ ಬಾಲ್ಯೊಟ್ಟುಗುತ್ತುರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತ್ರಿಶೂಲ್ ಫ್ರೆಂಡ್ಸ್ ಸದಸ್ಯರಾದ ಸಂತೋಷ್ ಕುಮಾರ್, ಶಶಿಕುಮಾರ್, ರೋಶನ್, ಪ್ರವೀಣ್ ಕುಮಾರ್, ಅಭಿಜಿತ್, ಪ್ರವೀಣ್, ನಿಖಿಲ್, ಸುರೇಶ್, ರಾಕೇಶ್ ಓಜಾಲರವರು ಅತತಿಥಿಗಳಿಗೆ ಶಾಲು ಹೊದಿಸಿ ಸ್ವಾಗತಿಸಿದರು. ಬಾಲಕೃಷ್ಣ ರೈ ಪೊರ್ದಾಲ್ ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.
ಅಮರ್ ಜವಾನ್ ಜ್ಯೋತಿಗೆ ಸೆಲ್ಯೂಟ್..
ಸಭಾ ಕಾರ್ಯಕ್ರಮದ ಬಳಿಕ ಪಂದ್ಯಾಕೂಟದ ಆರಂಭಿಕ ಪಂದ್ಯವೆನಿಸಿದ ಎಸ್೨ಎನ್‌ಎನ್ ಉರ್ಲಾಂಡಿ ಹಾಗೂ ಪರ್ಲ್ ಸಿಟಿ ಪುತ್ತೂರು ತಂಡಗಳ ಆಟಗಾರರು, ಅಂಪಾಯರ‍್ಸ್, ಅತಿಥಿ ಗಣ್ಯರು ಅಂತರ್ರಾಷ್ಟ್ರೀಯ ಪಂದ್ಯದಂತೆ ಕ್ರೀಡಾ ಅಂಕಣದಲ್ಲಿ ಶಿಸ್ತುಬದ್ಧವಾಗಿ ರಾಷ್ಟ್ರಗೀತೆಯೊಂದಿಗೆ ಭಾಗವಹಿಸಿ, ಕ್ರೀಡಾಂಗಣದ ಎದುರಿಗಿರುವ ಅಮರ್ ಜವಾನ್ ಜ್ಯೋತಿಗೆ ಸೆಲ್ಯೂಟ್ ಹೊಡೆದು ಗೌರವ ಸಲ್ಲಿಸಲಾಯಿತು.
ಚಾಲನೆ/ಹಸ್ತಲಾಘವ..
ಅಮರ್ ಜವಾನ್ ಜ್ಯೋತಿಗೆ ಸೆಲ್ಯೂಟ್ ಹೊಡೆದ ಬಳಿಕ ಶಿವಕೃಪಾ ಜನರಲ್ ಸ್ಟೋರ್ ಮಾಲಕ ನಾಗೇಶ್ ರಾವ್‌ರವರು ತೆಂಗಿನಕಾಯಿ ಒಡೆಯುವ ಮೂಲಕ ಅಂಕಣವನ್ನು ಉದ್ಘಾಟಿಸಿ ಚಾಲನೆ ನೀಡಿದರು. ಬಳಿಕ ಅತಿಥಿ ಗಣ್ಯರು ಆರಂಭಿಕ ಪಂದ್ಯದ ಆಟಗಾರರನ್ನು ಹಸ್ತಲಾಘವ ಮಾಡುವ ಮೂಲಕ ಶುಭ ಹಾರೈಸಿ ಪಂದ್ಯಾಟವನ್ನು ಆರಂಭಿಸಲಾಯಿತು.

ಕಣದಲ್ಲಿ..
ಮುಕ್ತ ಪೂಲ್‌ನಲ್ಲಿ ಮಹಾಲಿಂಗೇಶ್ವರ ಕಾರ್ಕಳ, ಜೆಡಿ ಬಾಯ್ಸ್ ಬಂಟ್ವಾಳ, ಕೆಜಿಎಫ್ ಕೈಕಂಬ, ಇಚ್ಛಾ ಲಯನ್ಸ್ ಬಪ್ಪಳಿಗೆ, ಎಸ್‌ಎಂಡಿ ಅರ್ಕ, ಝಮಾನ್ ಬಾಯ್ಸ್ ಕಲ್ಲಡ್ಕ,ಬ್ರದರ್ಸ್ ಕೂರ್ನಡ್ಕ, ಲೋಕಲ್ ಪೂಲ್‌ನಲ್ಲಿ ಎನ್‌ಎಫ್‌ಸಿ ಕುಂಬ್ರ, ಬಿಶಾರಾ ಕೋಲ್ಫೆ, ಸ್ವಾತಿ ಪಡೀಲು, ಪಟ್ಲ ಫ್ರೆಂಡ್ಸ್ ಕಲ್ಲೇಗ, ಇಚ್ಛಾ ಲಯನ್ಸ್ ಬಪ್ಪಳಿಗೆ, ಟಿಪಿಸಿ ಮುಕ್ವೆ, ಎಸ್೨ಎನ್‌ಎನ್ ಉರ್ಲಾಂಡಿ, ಪರ್ಲ್ ಸಿಟಿ ಪುತ್ತೂರು ಕಣದಲ್ಲಿದೆ.
ದಿ.ಸೇರ ಕೋಟಿಯಪ್ಪ ಪೂಜಾರಿ ವೇದಿಕೆ..
ಇತ್ತೀಚೆಗೆ ನಿಧನರಾದ ಶಿಕ್ಷಕ ಸೇರ ಕೋಟಿಯಪ್ಪ ಪೂಜಾರಿರವರು ಈ ತ್ರಿಶೂಲ್ ಫ್ರೆಂಡ್ಸ್‌ರವರು ಹಮ್ಮಿಕೊಳ್ಳುವ ಪ್ರತಿಯೊಂದು ಕಾರ್ಯಕ್ರಮಕ್ಕೆ ಪ್ರೋತ್ಸಾಹ ನೀಡುತ್ತಿದ್ದು, ಓರ್ವ ಶಿಕ್ಷಕನ ಮೇಲಿನ ಅದಮ್ಯ ಪ್ರೀತಿಯಿಂದಾಗಿ ತ್ರಿಶೂಲ್ ಫ್ರೆಂಡ್ಸ್‌ರವರು ಕ್ರಿಕೆಟ್ ಪಂದ್ಯಾಟದ ವೇದಿಕೆಗೆ ದಿ.ಸೇರ ಕೋಟಿಯಪ್ಪ ಪೂಜಾರಿ ವೇದಿಕೆ ಎಂದು ನಾಮಾಂಕಿತಗೊಳಿಸಿ ತಮ್ಮೊಳಗಿನ ಶಿಕ್ಷಕನಿಗೆ ಗೌರವ ಸಲ್ಲಿಸಿರುವುದು ಶ್ಲಾಘನೀಯವಾಗಿದೆ.