ಪುತ್ತೂರು: ಪರ್ಲಡ್ಕದ ವಿವೇಕಾನಂದ ಮಾದರಿ ಶಿಶುಮಂದಿರದಲ್ಲಿ ಇತ್ತೀಚೆಗೆ ಮಾತೃವಂದನಾ, ಸಾಮೂಹಿಕ ಹುಟ್ಟುಹಬ್ಬ ಆಚರಣೆ ಹಾಗೂ ಸಹಭೋಜನ ಕಾರ್ಯಕ್ರಮ ನಡೆಯಿತು. ತಾಯಿಯೇ ಮೊದಲ ದೇವರು ಎಂಬ ಉಕ್ತಿಯಂತೆ ದೇವ ಸಮಾನಳಾದ ಮಾತೆಯನ್ನು ಪೂಜಿಸುವ ಪರಿಕಲ್ಪನೆಯೇ ವಿಶೇಷವಾದುದು. ಎಳೆಯ ವಯಸ್ಸಿನಿಂದಲೇ ಮಾತೃಭಕ್ತಿ ಬೆಳೆಸುವ ನಿಟ್ಟಿನಲ್ಲಿ ಮಾತೃವಂದನಾ (ಪಾದಪೂಜೆ) ಕಾರ್ಯಕ್ರಮ ನಡೆಸಲಾಯಿತು. ಮಕ್ಕಳ ಸಾಮೂಹಿಕ ಹುಟ್ಟುಹಬ್ಬದ ಆಚರಣೆಯು ಸಂಸ್ಕಾರಯುತವಾಗಿ ತಾಯಂದಿರು ತಮ್ಮ ಮಕ್ಕಳಿಗೆ ಆರತಿ ಬೆಳಗಿ ಆಶೀರ್ವಾದ ಮಾಡುವ ಮೂಲಕ ಆಚರಿಸಲಾಯಿತು. ಅದೇ ರೀತಿ ಜಾತಿ ಬೇಧವಿಲ್ಲದೆ ಮನೆಯಲ್ಲೇ ತಯಾರಿಸಿದ ಆಹಾರವನ್ನು ಎಲ್ಲರೂ ಒಟ್ಟಿಗೆ ಸವಿಯುವ ಮೂಲಕ ಸಹಭೋಜನ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ರಾಷ್ಟ್ರೀಯ ಸಂಘದ ಸ್ವಯಂ ಸೇವಕ ಆದರ್ಶ ಶೆಟ್ಟಿ ಅವರು, ತಾಯಿಯ ಮಮತೆ, ವಾತ್ಸಲ್ಯ, ಪ್ರೀತಿಗಳ ಬಗ್ಗೆ ತಿಳಿಸಿ ನಾವೆಲ್ಲರು ಒಂದೇ ತಾಯಿಯ ಮಕ್ಕಳು ಎಂಬ ಪರಿಕಲ್ಪನೆಯಲ್ಲಿ ಒಂದಾದ ಸಹಭೋಜನ ಕಾರ್ಯಕ್ರಮದ ಉದ್ದೇಶಗಳನ್ನು ತಿಳಿಸಿದರು. ಅಲ್ಲದೆ, ಶಿಶುಮಂದಿರದ ಪ್ರಮುಖ ಉದ್ದೇಶಗಳು ಹಾಗೂ ಇದರಿಂದ ಸಮಾಜಕ್ಕೆ ಲಭಿಸಿದ ಕೊಡುಗೆಗಳ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷರಾಗಿ ಆಗಮಿಸಿದ ಎ.ಪಿ. ಸದಾಶಿವ ಮರಿಕೆ, ಶಿಶುಮಂದಿರದೊಂದಿಗಿನ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಾ ತಾಯಿ ಮಗುವಿನ ವಾತ್ಸಲ್ಯ ತುಂಬಿದ ಸಂಬಂಧದ ಮಹತ್ವವನ್ನು ಅರ್ಥಪೂರ್ಣವಾಗಿ ತಿಳಿಸಿಕೊಟ್ಟರು. ಮಗುವಿನ ಜೊತೆ ಮಗುವಾಗಿ, ಕಥೆ ಪುರಾಣಗಳ ಕುರಿತು ಪ್ರಸ್ತಾಪಿಸುತ್ತಾ ಮಕ್ಕಳ ಮನಸ್ಸನ್ನು ಕಥೆಯ ಮೂಲಕ ಗಮನ ಸೆಳೆದರು.
