ಪುತ್ತೂರು: ಹದಿನೇಳು ವರ್ಷಗಳ ಹಿಂದೆ ಸುಳ್ಯದ ಐವರ್ನಾಡ್ನಲ್ಲಿ ನಡೆದಿದ್ದ ಮೀರಾ ಬಾಲಕೃಷ್ಣ ಅವರ ಕೊಲೆ ಪ್ರಕರಣದ ವಿಚಾರಣೆ ಪೂರ್ಣಗೊಳಿಸಿರುವ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಐವರು ಆರೋಪಿಗಳನ್ನು ದೋಷಮುಕ್ತಗೊಳಿಸಿದೆ.
ಪ್ರಕರಣದ ಆರೋಪಿಗಳಾಗಿದ್ದ ಸಚಿನ್ ಯಾನೆ ಸಚ್ಚಿದಾನಂದ, ದೇವಿಪ್ರಸಾದ್, ಶಿವರಾಜ್, ಮಹಾವೀರ್ ಮತ್ತು ರವಿಕಿರಣ್ ದೋಷಮುಕ್ತರಾದವರು. ಪ್ರಕರಣದ ಒಂದನೇ ಆರೋಪಿ ರೋಷನ್ ತಲೆಮರೆಸಿಕೊಂಡಿದ್ದು ಆತನ ಮೇಲಿನ ಪ್ರಕರಣವನ್ನು ಪ್ರತ್ಯೇಕಿಸಿ, ಉಳಿದ ಐವರ ಮೇಲಿನ ಪ್ರಕರಣದ ವಿಚಾರಣೆ ನಡೆಸಲಾಗಿತ್ತು. 02/03/2008 ರಂದು ಬೆಳಗ್ಗಿನ ಜಾವ ಐವರ್ನಾಡು ಗ್ರಾಮದ ಪಾಲೆಪ್ಪಾಡಿ ಮೀರಾ ಬಾಲಕೃಷ್ಣ ಅವರ ಮನೆಗೆ ಯಾರೋ ಅಪರಿಚಿತರು ಅಕ್ರಮ ಪ್ರವೇಶ ಮಾಡಿ ಅವರ ಕೈ ಕಾಲುಗಳನ್ನು ಕಟ್ಟಿ ಹಾಕಿ ಬಾಯಿಗೆ ಬಟ್ಟೆ ತುರುಕಿ ಕೊಲೆ ಮಾಡಿದ್ದರು.
ಮೀರಾ ಬಾಲಕೃಷ್ಣರವರು 10 ಲಕ್ಷ ರೂಪಾಯಿ ಮೌಲ್ಯದ ರಬ್ಬರ್ ಮಾರಾಟ ಮಾಡಿ ಹಣವನ್ನು ಮನೆಗೆ ತಂದಿದ್ದು, ಈ ಹಣ ಮತ್ತು ಮನೆಯಲ್ಲಿದ್ದ ಚಿನ್ನಾಭರಣಗಳನ್ನು ದೋಚುವ ಉದ್ದೇಶದಿಂದ ಕೃತ್ಯ ಎಸಗಲಾಗಿತ್ತು ಎಂದು ಹೇಳಲಾಗಿತ್ತು. ಬೆಳಿಗ್ಗೆ 7.30ರಿಂದ 8 ಗಂಟೆಯ ಮಧ್ಯ ಸಮಯದಲ್ಲಿ ಮೀರಾ ಬಾಲಕೃಷ್ಣರವರ ಮನೆಯಲ್ಲಿ ಅವರು ಮಾತ್ರ ವಾಸವಾಗಿದ್ದು, ಅವರು ಮಹಡಿ ಇಳಿದು ಅಡುಗೆ ಕೋಣೆಗೆ ಹೋಗುವುದನ್ನೇ ಕಾಯುತ್ತ ಕುಳಿತ ಆರೋಪಿಗಳು ಅವರ ಮೇಲೆರಗಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ನಂತರ ಮನೆ ಕೆಲಸದಾಕೆ ವಿಮಲಾ ಎಂಬವರು ಮೀರಾರವರ ಮನೆಗೆ ಬರುತ್ತಿದ್ದಂತೆ, ಮನೆಯ ಹಿಂಬದಿ ಮೆಟ್ಟಿಲ ಬಳಿ ಆರೋಪಿಗಳು ವಿಮಲಾ ಅವರ ಕುತ್ತಿಗೆ ಹಿಡಿದು ನಾಯಿ ಕಟ್ಟಿ ಹಾಕುವ ಕೋಣೆ ಬಳಿ ಎಳೆದುಕೊಂಡು ಹೋಗಿ, ಅವರ ಕುತ್ತಿಗೆಯನ್ನು ಒತ್ತಿ ಹಿಡಿದು ಉಸಿರಾಡದಂತೆ ಮಾಡಿದ್ದರು. ಆಗ ಅವರಿಗೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಬಳಿಕ ಎಚ್ಚರಗೊಂಡ ಅವರು ಅಡುಗೆ ಮನೆಗೆ ಹೋದಾಗ, ಅಲ್ಲಿ ಮೀರಾಬಾಲಕೃಷ್ಣರವರು ಅಂಗಾತ ಮಲಗಿದ್ದು, ಅವರ ಕೈಗಳನ್ನು ಹಗ್ಗದಿಂದ ಕಟ್ಟಿ ಹಾಕಲಾಗಿತ್ತು. ಇದನ್ನು ನೋಡಿದ ವಿಮಲಾರವರು ಕೂಡಲೇ ಅಲ್ಲಿಂದ ಹೊರಗೆ ಬಂದು ಬೊಬ್ಬೆ ಹೊಡೆದಾಗ, ಶಿವರಾಜ್ ಮತ್ತು ಅಚ್ಚುತ ಎಂಬವರು ಬಂದು ಮೀರಾ ಬಾಲಕೃಷ್ಣರವರು ಮೃತಪಟ್ಟಿರುವುದಾಗಿ ತಿಳಿಸಿದ್ದರು.ನಂತರ ವಿಮಲಾರವರು ತನಗಾದ ಗಾಯಕ್ಕೆ, ಅವರ ಗಂಡನ ಜೊತೆ ಸುಳ್ಯ ಸರ್ಕಾರಿ ಆಸ್ಪತ್ರೆಗೆ ಹೋಗಿ,ನಂತರ ಸುಳ್ಯ ಪೊಲೀಸ್ ಠಾಣೆಗೆ ಹೋಗಿ ಘಟನೆ ಕುರಿತು ದೂರು ನೀಡಿದ್ದರು.ಈ ದೂರಿನಂತೆ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 448,397,396,201(ಬಿ)ರನ್ವಯ ಪ್ರಕರಣ ದಾಖಲಿಸಿದ್ದರು.
ಸಿಐಡಿಗೆ ಹಸ್ತಾಂತರ:
ಪ್ರಕರಣದ ತನಿಖೆಯಲ್ಲಿ ಯಾವುದೇ ಪ್ರಗತಿ ಕಾಣದೆ ಇದ್ದುದರಿಂದ ಸರಕಾರ ತನಿಖೆಯನ್ನು ಸಿ.ಐ.ಡಿಗೆ ಒಪ್ಪಿಸಿತ್ತು. ಸಿಐಡಿ ಕಛೇರಿಯ ಅಂದಿನ ಡಿ.ಎಸ್.ಪಿ ಎನ್.ಎಂ. ರಾಮಲಿಂಗಪ್ಪ ಇವರ ನೇತೃತ್ವದಲ್ಲಿ ತನಿಖೆ ನಡೆದಿತ್ತು. ಅವರ ತನಿಖೆ ಆಧಾರದ ಮೇರೆಗೆ ಒಟ್ಟು 6 ಆರೋಪಿಗಳ ಹೆಸರನ್ನು ಹೆಸರಿಸಿ ಅವರ ಪೈಕಿ ಐದು ಆರೋಪಿಗಳನ್ನು, ಪ್ರಕರಣ ನಡೆದ ಸುಮಾರು 4 ವರ್ಷಗಳ ಬಳಿಕ ಪತ್ತೆ ಮಾಡಿ ಬಂಧಿಸಿ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಕಲಂ 120ಬಿ,448,396 ಮತ್ತು 397 ಐ.ಪಿ.ಸಿಯಂತೆ ಸಿಐಡಿ ಪೊಲೀಸರು ದೋಷಾರೋಪಣಾ ಪಟ್ಟಿಯನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಮೀರಾರವರ ಮನೆಯಲ್ಲಿ ಏನಾಗಿದೆ ಮತ್ತು ಅವರು ಹೇಗೆ ಮೃತಪಟ್ಟಿರುತ್ತಾರೆ ಎಂದು ಗೊತ್ತಿರುವುದಿಲ್ಲ. ಮನೆಕೆಲಸಕ್ಕೆ ಹೋಗುವಾಗ ವಿಮಲಾರಿಗೆ ಯಾವುದೇ ಗಾಯ ಆಗಿರುವುದಿಲ್ಲ, ಅವರ ಗಾಯದ ಪ್ರಮಾಣ ಪತ್ರದಲ್ಲಿ ನಮೂದಿಸಿದ ಗಾಯದ ಹಿನ್ನೆಲೆ ಮತ್ತು ಆಗಿದೆ ಎನ್ನಲಾದ ಗಾಯದ ಪರಸ್ಪರ ಸಾಮ್ಯತೆ ಇರುವುದಿಲ್ಲ. ಈ ಪ್ರಕರಣದಲ್ಲಿ, ಮೃತ ಮೀರಾ ಬಾಲಕೃಷ್ಣ ಅವರ ಮಕ್ಕಳು ಮತ್ತು ಅವರ ಸಂಬಂಧಿಕರನ್ನು ಸಾಕ್ಷಿಯಾಗಿ ಕಾಣಿಸಿರುವುದಿಲ್ಲ. ಕೆಲವು ಸಾಕ್ಷಿಗಳು ಪ್ರತಿಕೂಲ ಸಾಕ್ಷಿ ನುಡಿದಿರುತ್ತಾರೆ. ಬೆರಳಚ್ಚು ತಜ್ಞರನ್ನು ತನಿಖೆ ನಡೆಸಿರುವುದಿಲ್ಲ, ಹೀಗೆ ತನಿಖೆಯಲ್ಲಿನ ಹಲವಾರು ವಿರೋಧಾಭಾಸಗಳು, ಸಾಕ್ಷಿದಾರರ ವ್ಯತಿರಿಕ್ತ ಹೇಳಿಕೆಗಳು, ಕೊರತೆ ಸಾಕ್ಷ್ಯಧಾರಗಳನ್ನು ಗಮನಿಸಿದಾಗ, ಆರೋಪಿಗಳು ಈ ಕೃತ್ಯ ನಡೆಸಿದ್ದಾರೆ ಎಂಬುದಕ್ಕೆ ಪೂರಕವಾದ ಸಾಕ್ಷ್ಯಧಾರಗಳು ಲಭ್ಯವಿರುವುದಿಲ್ಲ ಎಂದು ಆರೋಪಿಗಳ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.
ವಾದ-ಪ್ರತಿವಾದವನ್ನು ಆಲಿಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಸರಿತಾ ಡಿ.ಅವರು ಆರೋಪವನ್ನು ಸಾಬೀತುಪಡಿಸುವಲ್ಲಿ ಅಭಿಯೋಜನೆಯು ವಿಫಲಗೊಂಡಿದೆ ಎಂಬ ಕಾರಣವನ್ನು ನೀಡಿ ಆರೋಪಿಗಳನ್ನು ದೋಷಮುಕ್ತಗೊಳಿಸಿ ತೀರ್ಪು ನೀಡಿದ್ದಾರೆ. ಆರೋಪಿಗಳ ಪೈಕಿ ಸಚಿನ್ ಮತ್ತು ರವಿಕಿರಣ್ ಪರವಾಗಿ ವಕೀಲರಾದ ಮಹೇಶ್ ಕಜೆ ಮತ್ತು ಸೌಮ್ಯ ಹಾಗೂ ಶಿವರಾಜ್,ದೇವಿಪ್ರಸಾದ್ ಮತ್ತು ಮಹಾವೀರ ಇವರ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ,ಶ್ಯಾಮ್ ಪ್ರಸಾದ್ ಎನ್.ಕೆ. ವಾದಿಸಿದ್ದರು.