ಶಾಸಕ ಅಶೋಕ್ ರೈ ಮನವಿಗೆ ಸ್ಪಂದಿಸಿದ ಸರಕಾರ
ಪುತ್ತೂರು: ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಕಟ್‌ಕನ್ವರ್ಶನ್ ಮತ್ತು ಅನಧಿಕೃತವಾಗಿ ನಿರ್ಮಾಣ ಮಾಡಿರುವ ಮನೆ ಮತ್ತು ಕಟ್ಟಡಗಳಿಗೆ ಬಿ ಖಾತಾ ನೀಡಲು ರಾಜ್ಯ ಸರಕಾರ ಆದೇಶ ನೀಡಿದ್ದು, ಪುತ್ತೂರು ಶಾಸಕರು ಈ ಹಿಂದೆ ನೀಡಿದ್ದ ಮನವಿಗೆ ಸರಕಾರ ಸ್ಪಂದನೆ ನೀಡಿದೆ.
2024 ಸೆಪ್ಟಂಬರ್ ತಿಂಗಳ ಮೊದಲು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಕಟ್ಟಡ,ಮನೆ ಮತ್ತು ಕಟ್ ಕನ್ವರ್ಶನ್ ಆಗಿರುವ ಅರ್ಜಿದಾರರಿಗೆ ಬಿ ಖಾತೆ ನೀಡಲು ನಿರ್ಧರಿಸಿದೆ. ಈಗಾಗಲೇ ಈ ಅನಧಿಕೃತ ಮನೆಗಳ ಪೈಕಿ ಕೆಲವೊಂದನ್ನು ಕೆಡವಲು ನಗರಸಭೆ ತೀರ್ಮಾಣ ಕೈಗೊಂಡು ನೊಟೀಸ್ ಕೂಡಾ ಜಾರಿ ಮಾಡಿತ್ತು. ಹೊಸ ಆದೇಶದ ಪ್ರಕಾರ ಡೆಮಾಲಿಶ್ ನೊಟೀಸ್ ನೀಡಿದ ಮನೆಗಳಿಗೂ ಅನ್ವಯವಾಗಲಿರುವ ಕಾರಣ ಇದೊಂದು ಐತಿಹಾಸಿಕ ಆದೇಶವಾಗಿ ಪರಿಣಮಿಸಿದೆ.
ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ಸುಮಾರು 1200 ಅನಧಿಕೃತ ಕಟ್ಟಡ ಅಥವಾ ಮನೆಗಳಿದ್ದು ಇವುಗಳಿಗೆ ಖಾತಾ ಆಗಿರಲಿಲ್ಲ. ಖಾತಾ ಆಗದ ಕಾರಣ ಇವು ಆಸ್ತಿ ತೆರಿಗೆ ವ್ಯಾಪ್ತಿಗೂ ಅನ್ವಯವಾಗುತ್ತಿರಲಿಲ್ಲ. ಖಾತಾ ಮಾಡಲು ಅವಕಾಶ ಮಾಡಿಕೊಡುವಂತೆ ಅರ್ಜಿದಾರರು ಮೂರು ತಿಂಗಳ ಹಿಂದೆ ಶಾಸಕ ಅಶೋಕ್ ರೈ ಅವರಲ್ಲಿ ಮನವಿ ಮಾಡಿದ್ದರು. ಈ ವಿಚಾರವನ್ನು ಶಾಸಕರು ಸರಕಾರದ ಗಮನಕ್ಕೆ ತಂದಿದ್ದರು. ಇಡೀ ರಾಜ್ಯಕ್ಕೆ ಅನ್ವಯವಾಗುವಂತೆ ಹೊಸ ಆದೇಶ ಜಾರಿಯಾಗಿದ್ದು, ಲಕ್ಷಾಂತರ ಅರ್ಜಿದಾರರಿಗೆ ಇದು ಪ್ರಯೋಜನವಾಗಲಿದೆ. ಬಿ ಖಾತಾ ಪಡೆಯಲು ಮೇ. 2025 ರ ಮೊದಲು ನಗರಸಭಾ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು ಆನಂತರ ಬಂದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ಕಟ್ ಕನ್ವರ್ಶನ್ ಮತ್ತು ಅನಧಿಕೃತ ಕಟ್ಟಡಮತ್ತು ಮನೆಗಳಿಗೆ ಖಾತಾ ಮಾಡುವಲ್ಲಿ ಕಾನೂನಿನ ತೊಡಕಿತ್ತು. ಅನೇಕ ವರ್ಷಗಳಿಂದ ಜನ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಂಡಿದ್ದರು. ಖಾತಾ ಆಗದ ಕಾರಣ ಮನೆ, ಮತ್ತು ಕಟ್ಟಡ ತೆರವಿಗೂ ಆದೇಶ ನೀಡಲಾಗಿತ್ತು. ರಾಜ್ಯ ಸರಕಾರದ ಹೊಸ ಆದೇಶದಿಂದ ಪುತ್ತೂರು ನಗರಸಭಾ ವ್ಯಾಪ್ತಿಯ 1200 ಕುಟುಂಬಗಳಿಗೆ ವರದಾನವಾಗಿದೆ. ಆದೇಶ ಹೊರಡಿಸಿರುವ ರಾಜ್ಯ ಸರಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತಿದ್ದೇನೆ.
ಅಶೋಕ್ ರೈ, ಶಾಸಕರು ಪುತ್ತೂರು