ಪುತ್ತೂರು: ಮುಂಡೂರು ಗ್ರಾಮದ ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಮೂರನೇ ವರ್ಷದ ಜಾತ್ರೋತ್ಸವ ಮತ್ತು ಶ್ರೀ ದೈವಗಳ ನೇಮೋತ್ಸವವು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಮಾ.01 ಮತ್ತು 02 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ.
ಮಾ.1 ರಂದು ಸಂಜೆ ಹಸಿರು ಹೊರೆಕಾಣಿಕೆ ಸಮರ್ಪಣೆ ನಡೆಯಲಿದ್ದು ತಿಂಗಳಾಡಿ, ದೇವಗಿರಿ ಭಜನಾ ಮಂದಿರ, ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರ ಹಾಗೂ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದ ಬಳಿಯಿಂದ ಹಸಿರು ಹೊರೆಕಾಣಿಕೆ ಸಮರ್ಪಣೆಯಾಗಲಿದೆ. ಹಸಿರು ಹೊರೆಕಾಣಿಕೆ ಸಮರ್ಪಣೆಯ ಬಳಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ. ಸಂಜೆ 6.30 ಕ್ಕೆ ರಂಗಪೂಜೆ, ಪ್ರಸಾದ ವಿತರಣೆ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ.
ಆಲಡ್ಕ ಶ್ರೀ ಸದಾಶಿವ ದೇವಸ್ಥಾನದ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಹೇಮನಾಥ ಶೆಟ್ಟಿ ಕಾವು ಸಭಾಧ್ಯಕ್ಷತೆ ವಹಿಸಲಿದ್ದು, ಶಾಸಕ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಸಂಸದ ಬ್ರಿಜೇಶ್ ಚೌಟ, ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುದಾಬಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ರಾತ್ರಿ ಸಾರ್ವಜನಿಕ ಅನ್ನಸಂತರ್ಪಣೆ ನಡೆದು ಬಳಿಕ ಮುಂಡೂರು ಶಾಲಾ ವಿದ್ಯಾರ್ಥಿಗಳಿಂದ ಕರ್ನಾಟಕ ವೈಭವ ನಡೆಯಲಿದೆ. ರಾತ್ರಿ 10ರಿಂದ ಜಿಲ್ಲೆಯ ಪ್ರಸಿದ್ಧ ಭಾಗವತರಾದ ಗಿರೀಶ್ ರೈ ಕಕ್ಕೆಪದವು, ಕಾವ್ಯಶ್ರೀ ಆಜೇರು, ಮುಂಡಾಳಗುತ್ತು ಪ್ರಶಾಂತ್ ರೈ ಹಾಗೇ ಲವಕುಮಾರ್ ಐಲ ಮತ್ತು ಪವನ್‌ರಾಜ್ ಕಲ್ಲೂರಾಯ ಚೆಂಡೆಮದ್ದಳೆಯಲಿ ‘ಯಕ್ಷಗಾನ ವೈಭವ’ ನಡೆಯಲಿದೆ.
ಮಾ.2 ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ಮಧ್ಯಾಹ್ನ ಕಲಶಾಭಿಷೇಕ,ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ಕ್ಕೆ ದೈವಗಳ ಭಂಡಾರ ಇಳಿಸುವ ಕಾರ್ಯಕ್ರಮ ನಡೆಯಲಿದೆ. ರಾತ್ರಿ 7 ರಿಂದ ಮಹಾಪೂಜೆ, ದೇವರ ಬಲಿ ಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತ ಕಟ್ಟೆ ಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಪ್ರಸಾದ ವಿತರಣೆ, ವೈಧಿಕ ಮಂತ್ರಾಕ್ಷತೆ ನಡೆದು ಭಕ್ತಾದಿಗಳಿಗೆ ಅನ್ನಸಂತರ್ಪಣೆ ಬಳಿಕ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ.
ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಆಡಳಿತಾಧಿಕಾರಿ ಜಯಪ್ರಸಾದ್ ರೈ, ಗೌರವಾಧ್ಯಕ್ಷ ಅಶೋಕ್ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿ ಧನಂಜಯ ಕುಲಾಲ್ ಹಾಗೂ ಸರ್ವ ಸದಸ್ಯರು, ಅರ್ಚಕರು, ಅರ್ಚಕವೃಂದ ಹಾಗೂ ಭಜನಾ ಮಂಡಳಿ ಅಧ್ಯಕ್ಷರು, ಸದಸ್ಯರು ಹಾಗೂ ಊರ ಹತ್ತು ಸಮಸ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.