ಅಳಿಕೆ ಗ್ರಾಮದ ದೂಜಮೂಲೆ – ನೆಕ್ಕಿತಪುಣಿ ರಸ್ತೆ ಅಭಿವೃದ್ದಿಗೆ ಶಿಲಾನ್ಯಾಸ

0

ಅಳಿಕೆ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ಪಣ: ಶಾಸಕ ಅಶೋಕ್ ರೈ


ಪುತ್ತೂರು: ಅಳಿಕೆ ಗ್ರಾಮದ ಸರ್ವಾಂಗೀಣ ಅಭಿವೃದ್ದಿಗೆ ತಾನು ಅತ್ಯಂತ ಮುತುವರ್ಜಿ ಹೊಂದಿದ್ದು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಿದ್ದೇನೆ ಎಂದು ಶಾಸಕ ಅಶೋಕ್ ರೈ ತಿಳಿಸಿದರು.


ಅವರು ಅಳಿಕೆ ಗ್ರಾಮದ ದೂಜಮೂಲೆ-ನೆಕ್ಕರೆ- ಮುಳಿಯ- ನೆಕ್ಕಿತಪುಣಿ ರಸ್ತೆ ಅಭಿವೃದ್ದಿಗೆ 2 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಈ ಹಿಂದೆ ಶಕುಂತಳಾ ಶೆಟ್ಟಿ ಶಾಸಕರಾಗಿದ್ದ ವೇಳೆ ಈ ಗ್ರಾಮಕ್ಕೆ ಅನುದಾನ ನೀಡಿದ್ದರು. ಆ ಬಳಿಕ ಬಂದ ಜನಪ್ರತಿನಿಧಿಗಳು ಈ ಭಾಗವನ್ನು ಕಡೆಗಣಿಸಿದ್ದಾರೆ ಎಂಬ ಆರೋಪಗಳಿವೆ. ಈ ಗ್ರಾಮಕ್ಕೆ ಈಗ ಎರಡು ಕೋಟಿ ಅನುದಾನ ಬಿಡುಗಡೆಯಾಗಿದೆ. ಅನುದಾನ ಬಂದಾಗಲೆಲ್ಲಾ ಇಲ್ಲಿಗೂ ಹಂಚುವ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.‌ ಗ್ಯಾರಂಟಿ ಯೋಜನೆಯಿಂದಾಗಿ ಅನುದಾನ ಬರುತ್ತಿಲ್ಲ ಎಂದು ಪ್ರತಿಪಕ್ಷ ಆರೋಪ ಮಾಡುತ್ತಿದೆ ಇದು ಸುಳ್ಳು ಈಗಾಗಲೇ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ 1700 ಕೋಟಿಗೂ ಮಿಕ್ಕಿ ಅನುದಾನ ಬಂದಿದೆ ಎಂದು ಹೇಳಿದರು.

ಒಟ್ರಾಶಿ ಮಾತನಾಡಬೇಡಿ:
ಈ ರಸ್ತೆಗೆ ನಾನು ಮುತುವರ್ಜಿ ವಹಿಸಿ ಅನುದಾನ ತಂದಿದ್ದೇನೆ ಆದರೆ ಈ ಅನುದಾನ ಕೇಂದ್ರ ಸರಕಾರದ್ದು ಎಂದು ಕೆಲವರು ವ್ಯಾಟ್ಸಪ್ಪಲ್ಲಿ ಹಾಕಿದ್ದಾರೆ ಎಂಬ ವಿಚಾರ ಸ್ಥಳೀಯರು ತಿಳಿಸಿದ್ದಾರೆ. ಯಾರೋ ಮಾಡಿದ ಕೆಲಸವನ್ನು ಯಾರಿಗೋ ಹೋಲಿಕೆ ಮಾಡಬೇಡಿ. ಇಲ್ಲಿನ‌ ಶಾಸಕರಾದವರು, ಸಂಸದರಾಗಿದ್ದವರು ಇಲ್ಲಿಗೆ ಅನುದಾನ ನೀಡಬಹುದಿತ್ತು , ವ್ಯಾಟ್ಸಪ್ಪಿನಲ್ಲಿ ಸುಳ್ಳು ಸಂದೇಶ ಹಾಕುವವರು ಆ ಕೆಲಸವನ್ನು ಅವರ ಪಕ್ಷದವರಿಂದ ಮಾಡಿಸಬೇಕಿತ್ತು ಅದನ್ನು ಬಿಟ್ಟು ಒಟ್ರಾಶಿ ರಾಜಕೀಯ‌ ಮಾಡಬಾರದು ಜನ ಅದನ್ನು ಸಹಿಸುವುದಿಲ್ಲ ಎಂದು‌ ಶಾಸಕರು ಹೇಳಿದರು.

ಹತಾಶರಾದ ಬಿಜೆಪಿಯಿಂದ ಅಪಪ್ರಚಾರ: ಪದ್ಮನಾಭ ಪೂಜಾರಿ
ಅಳಿಕೆ ಗ್ರಾಮಕ್ಕೆ ಶಕುಂತಳಾ ಶೆಟ್ಟಿ ಶಾಸಕರಾದಾಗ ಅನುದಾನ‌ ಬಂದಿತ್ತು ಆ ಬಳಿಕ ಇದೀಗ ಅಶೋಕ್ ರೈ ಶಾಸಕರಾದ ಬಳಿಕ ಅನುದಾನ ಬಂದಿದೆ. ಬಿಜೆಪಿ ಶಾಸಕರಾಗಲಿ, ಸಂಸದರಾಗಲಿ ಅನುದಾನ ನೀಡಿಲ್ಲ. ಇದೀಗ ಕಾಂಗ್ರೆಸ್ ಸರಕಾರ ಕೊಟ್ಟ ಅನುದಾನವನ್ನು ಕೇಂದ್ರ ಸರಕಾರದಿಂದ ಬಂದಿದೆ ಎಂದು ಕೆಲವು ಹತಾಶರಾದ ಬಿಜೆಪಿಗರು ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ ಇದು ದೇವರು‌ ಮೆಚ್ಚದ ಕೆಲಸವಾಗಿದೆ ಎಂದು‌ ವಿಟ್ಲ‌ ಬ್ಲಾಕ್ ಅಧ್ಯಕ್ಷರಾದ ಪದ್ಮನಾಭ ಪೂಜಾರಿ ಹೇಳಿದರು. ನಮ್ಮ‌ ಗ್ರಾಮ ನಮ್ಮ ರಸ್ತೆಯಡಿ ಶಕುಂತಳಾ ಶೆಟ್ಟಿ ಶಾಸಕರಾಗಿದ್ದಾಗ ಆಗಿದ್ದು, ದೇವಸ್ಥಾನದ ಎದುರಿನ ಫ್ಲೈ ಓವರ್ ಅವರೇ ಮಾಡಿದ್ದು ಆ ಬಳಿಕ ಅತಿ ದೊಡ್ಡ ಮೊತ್ತದ ಅನುದಾನ ಅಶೋಕ್ ರೈ ನೀಡಿದ್ದಾರೆ ಎಂದು ಹೇಳಿದರು.

ಅನುದಾನ ತರಲು ಕೆಪಾಸಿಟಿ ಬೇಕು: ಎಂ ಎಸ್ ಮಹಮ್ಮದ್
ಶಾಸಕ,‌ಸಂಸದರಾದರೆ ಸಾಲದು ಅನುದಾನ ತರಲು ಕೆಪಾಸಿಟಿ ಬೇಕು, ಆ ಕೆಪಾಸಿಟಿ ಅಶೋಕ್ ರೈಗೆ ಇದೆ ಎಂದು ಕೆಪಿಸಿಸಿ ಪ್ರ.ಕಾರ್ಯದರ್ಶಿ ಎಂ ಎಸ್ ಮಹಮ್ಮದ್ ಹೇಳಿದರು.
ಅಳಿಕೆ ಗ್ರಾಮವನ್ನು ಅಭಿವೃದ್ದಿ‌ ಮಾಡಿದ್ದು ಕಾಂಗ್ರೆಸ್ ಶಾಸಕರುಗಳಾಗಿದ್ದಾರೆ, ಕ್ಷೇತ್ರಕ್ಕೆ ಅತೀ ಹೆಚ್ಚು ಅನುದಾನ ತಂದಿರುವ ಕರ್ನಾಟಕದ ಏಕೈಕ ಅಶೋಕ್ ರೈ. ಶಾಸಕರ ಅಭಿವೃದ್ದಿ ಕೆಲಸದಿಂದ ಪುತ್ತೂರು ವಿಧಾನ ಸಭಾ ಕ್ಷೇತ್ರದ ಚಿತ್ರಣವೇ ಬದಲಾಗಿದೆ ಎಂದು ಹೇಳಿದರು. ಪುತ್ತೂರು‌ ನಗರಸಭಾ ವ್ಯಾಪ್ತಿಯಲ್ಲಿ ಕಟ್ ಕನ್ವರ್ಶನ್ ಮತ್ತು ಬಿ ಖಾತಾ ಅನುಮತಿ ತಂದಿರುವುದು ಇಡೀ ರಾಜ್ಯದ ಜನತೆಗೆ ಅನುಕೂಲವಾಗಿರುವುದು ಶಾಸಕರ ದೂರ ದೃಷ್ಟಿಗೆ ಉದಾಹರಣೆಯಾಗಿದೆ ಎಂದು ಹೇಳಿದರು.


ಕಾರ್ಯಕ್ರಮದಲ್ಲಿ ಅಳಿಕೆ ವಲಯ ಅದ್ಯಕ್ಷ ಸೀತಾರಾಮ ಶೆಟ್ಟಿ ,ಗ್ರಾಪಂ ಸದಸ್ಯರಾದ ಜಗದೀಶ್ ಶೆಟ್ಟಿ, ಸದಾಶಿವ ಶೆಟ್ಟಿ, ರವೀಶ, ಸುಕುಮಾರ, ಸೆಲ್ವಿನಾ ಡಿಸೋಜಾ, ಶಾಂಬವಿ, ಗಿರಿಜಾ, ಸಹಕಾರಿ ಸಂಘದ ನಿರ್ದೇಶಕ ಚಂದ್ರನಾಥ ಆಳ್ವ, ನಿವೃತ್ತ ಅಧ್ಯಾಪಕರಾದ ಯಶೋದರ ಬಂಗೇರ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here