ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆ

0

ಪುತ್ತೂರು: ವಿದ್ಯಾರ್ಥಿಗಳು ವೈಜ್ಞಾನಿಕ ಮನಸ್ಥಿತಿಯನ್ನು ಬೆಳೆಸಿಕೊಳ್ಳಲು ಮತ್ತು ವಿಜ್ಞಾನದ ಅದ್ಭುತಗಳನ್ನು ಅನ್ವೇಷಿಸಲು ಅವರನ್ನು ಪ್ರೇರೇಪಿಸುವ ನಿಟ್ಟಿನಲ್ಲಿ ಹಾಗೂ ಸರ್ ಸಿ.ವಿ ರಾಮನ್ ರವರ ರಾಮನ್ ಪರಿಣಾಮದ ಆವಿಷ್ಕಾರವನ್ನು ಸ್ಮರಿಸಲು, ಫೆಬ್ರವರಿ 28ರಂದು ನೆಹರುನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಆಚರಿಸಲಾಯಿತು.

ಸಮಾರಂಭದ ಮುಖ್ಯ ಅತಿಥಿಯಾಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷೆ ವಸಂತಿ ಕೆ ಅವರು ವಿದ್ಯಾರ್ಥಿಗಳು ಸಂಶೋಧನಾ ಕ್ಷೇತ್ರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂಬುದಾಗಿ ಪ್ರೇರಣಾದಾಯಕ ನುಡಿಗಳನ್ನಾಡಿದರು..

ಕಾರ್ಯಕ್ರಮದ ಅಧ್ಯಕ್ಷೆ ಹಾಗೂ ಶಾಲಾ ಪ್ರಾಂಶುಪಾಲೆ ಸಿಂಧು ವಿ.ಜಿ ಅವರು ಈ ದಿನದ ಮಹತ್ವದ ಕುರಿತು ತಿಳಿಸುತ್ತಾ, ವಿದ್ಯಾರ್ಥಿಗಳು ದೇಶದ ಉದಯೋನ್ಮುಖ ವಿಜ್ಞಾನಿಗಳಾಗುವಂತೆ ಪ್ರೋತ್ಸಾಹಕ ಮಾತುಗಳನ್ನಾಡಿದರು.

ರಾಷ್ಟ್ರೀಯ ವಿಜ್ಞಾನ ದಿನದ ನಿಮಿತ್ತ ನಡೆದ ವಿಜ್ಞಾನ ರಸಪ್ರಶ್ನೆ, ವಿಜ್ಞಾನ ಪ್ರಯೋಗ ಮತ್ತು ವಿಜ್ಞಾನ ರಂಗೋಲಿಯಂತಹ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನಗಳನ್ನು ನೀಡಲಾಯಿತು.

ವಿಜ್ಞಾನ ಒಲಿಂಪಿಯಾಡ್ ಫೌಂಡೇಶನ್ ಆಯೋಜಿಸಿದ ರಾಷ್ಟ್ರೀಯ ವಿಜ್ಞಾನ ಒಲಿಂಪಿಯಾಡ್‌ನಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರಗಳೊಂದಿಗೆ ಚಿನ್ನದ ಪದಕವನ್ನು ನೀಡಲಾಯಿತು. 7ನೇ ತರಗತಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here