ಗ್ರಾಮೀಣ ಕ್ರೀಡೆಯಾದ ಕಂಬಳಕ್ಕೆ ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ -ಈಶ್ವರ ಭಟ್ ಪಂಜಿಗುಡ್ಡೆ
ಪುತ್ತೂರು: ತುಳುನಾಡ ಜಾನಪದ ಕ್ರೀಡೆಗಳಲ್ಲೊಂದಾದ ಇತಿಹಾಸ ಪ್ರಸಿದ್ಧ 32ನೇ ವರ್ಷದ ಪುತ್ತೂರು ಕೋಟಿ ಚೆನ್ನಯ ಜೋಡುಕರೆ ಕಂಬಳದ ಉದ್ಘಾಟನೆಯು ಮಾ.1 ರಂದು ಬೆಳಿಗ್ಗೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಮಾರುಗದ್ದೆಯಲ್ಲಿ ನಡೆಯಿತು. ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ, ಕಂಬಳ ಸಮಿತಿ ಖಜಾಂಜಿ ಈಶ್ವರ ಭಟ್ ಪಂಜಿಗುಡ್ಡೆರವರು 32ನೇ ವರ್ಷದ ಸಂಭ್ರಮದ ಕಂಬಳವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಹಿರಿಯರ ಕಾಲದಿಂದಲೂ ಪುತ್ತೂರಿನ ಕಂಬಳಕ್ಕೆ ಇತಿಹಾಸವಿದ್ದು ರೈತರ ಗ್ರಾಮೀಣ ಕ್ರೀಡೆಯಾದ ಕಂಬಳವನ್ನು ಉಳಿಸಿ ಬೆಳೆಸಿ ಪ್ರೋತ್ಸಾಹಿಸುವ ಮೂಲಕ ನಾವು ಸೂರ್ಯ ಚಂದ್ರ ಇರುವ ತನಕ ನಿರಂತರವಾಗಿ ಮುಂದುವರಿಸಿಕೊಂಡು ಪ್ರೋತ್ಸಾಹಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿ ಶುಭಹಾರೈಸಿದರು.

ಮಕ್ಕಳ ಪಠ್ಯಪುಸ್ತಕದಲ್ಲಿ ಕಂಬಳ ಕ್ರೀಡೆಯ ಪಾಠ ಬರಲಿ ವಿಜಯ ಹಾರ್ವಿನ್:
ಸುದಾನ ವಸತಿಯುತ ಶಾಲೆಯ ಸಂಚಾಲಕ ರೆ. ವಿಜಯ ಹಾರ್ವಿನ್ ರವರು ಮಾತನಾಡಿ ಕಳೆದ ೩೨ ವರ್ಷಗಳಿಂದ ಸುದೀರ್ಘವಾಗಿ ಕಂಬಳ ಕ್ರೀಡೆಯನ್ನು ಉಳಿಸಿ ಬೆಳೆಸುವುದರ ಹಿಂದಿನ ಶ್ರಮ ಬಹಳಷ್ಟು ಇದೆ. ಉದ್ದೇಶ ಒಳ್ಳೆದಿದ್ದಾಗ ಅದರ ಕಾರ್ಯ ಮಾಡಲು ದೇವರೇ ಜನರಿಗೆ ಹಾರೈಸುತ್ತಾರೆ ಎಂದರು. ತುಳುನಾಡಿನ ಕಲೆಯನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ ಇವತ್ತು ಕಂಬಳ ರಾಷ್ಟ್ರ ಮಟ್ಟಕ್ಕೆ ಹೋಗಿದೆ ಅದೇ ರೀತಿ ಕಂಬಳ ಕ್ರೀಡೆ ಎಲ್ಲರ ಮನದಲ್ಲೂ ಉಳಿಯುವಂತಾಗಲು ಮಕ್ಕಳ ಪಠ್ಯದಲ್ಲೂ ಕೂಡ ಮೂಡಿಬರಬೇಕು ಆ ಮೂಲಕ ಕಂಬಳ ಕ್ರೀಡೆಯ ಮಹತ್ವ, ಅದನ್ನು ಉಳಿಸಿ ಬೆಳೆಸುವ ಬಗ್ಗೆ ಮಕ್ಕಳಲ್ಲೂ ತಿಳುವಳಿಕೆ ಮೂಡಲು ಸಹಕಾರಿಯಾಗಲಿದೆ ಎಂದು ಅವರು ಹೇಳಿದರು.
ಕಂಬಳದ ಹಿನ್ನೆಲೆ ತಿಳಿದವನು ಯಾವತ್ತೂ ಕಂಬಳ ಕ್ರೀಡೆಯನ್ನು ಮರೆಯಲಾರ-ಪುರಂದರ ಹೆಗಡೆ:
ಪುತ್ತೂರು ತಹಶೀಲ್ದಾರ್ ಪುರಂದರ ಹೆಗಡೆ ರವರು ಮಾತನಾಡಿ ಪುತ್ತೂರಿನಲ್ಲಿ ಜಯಂತ ರೈ ಬಳಿಕ ಮುತ್ತಪ್ಪ ರೈ ರವರು ನಡೆಸಿಕೊಂಡು ಬಂದಂತಹ ಪುತ್ತೂರಿನ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಕಂಬಳವು ಇದೀಗ ಚಂದ್ರಹಾಸ ಶೆಟ್ಟಿ ಅವರ ನೇತೃತ್ವದಲ್ಲಿ ನಡೀತಾ ಬರುತ್ತಿದ್ದು ಇದೊಂದು ಐತಿಹಾಸಿಕ ಕ್ರೀಡೆಯಾಗಿದೆ ಎಂದು ಹೇಳಿದರು. ಕಂಬಳ ಕ್ರೀಡೆಯು ಬಹಳ ಪ್ರಸಿದ್ಧವಾದ ಕ್ರೀಡೆಯಾಗಿದೆ ಕಂಬಳ ಎಂದರೆ ಕೋಣಗಳನ್ನು ಸಮೃದ್ಧಿಯಲ್ಲಿ ಬೆಳೆಸಿಕೊಂಡು ಅದನ್ನು ಕ್ರೀಡೆಗೆ ಬಳಸಿಕೊಳ್ಳುವುದಾಗಿದೆ ಕಂಬಳದ ಹಿನ್ನೆಲೆ ತಿಳಿದವನು ಯಾವತ್ತೂ ಇಂತಹ ಕ್ರೀಡೆಯನ್ನು ಬಿಡಲಾರ ಇಂತಹ ಮಹತ್ವವಾದ ಈ ಕ್ರೀಡೆ ಸದಾ ಕಾಲ ಉಳಿಯಲಿ ಎಂದು ಶುಭಹಾರೈಸಿದರು.
ಯಾವುದೇ ವಿಘ್ನ ಇಲ್ಲದೇ ಯಶಸ್ವಿಯಾಗಿ ಕಂಬಳ ನಡೆಯುವಂತಾಗಲಿ:
ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು ಮಾತನಾಡಿ ಪುತ್ತೂರಿನ ಮಹಾಲಿಂಗೇಶ್ವರನ ಪುಣ್ಯ ನೆಲೆಯಲ್ಲಿ ನಡೆಯುವ ಕೋಟಿ ಚೆನ್ನಯ ಕಂಬಳವು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬಂದಂತಹ ಕಂಬಳ ಸಮಿತಿಯ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರ ಕೆಲಸ ಮಹತ್ವಪೂರ್ಣವಾಗಿದೆ ಎಂದು ಹೇಳಿದರು. ಪರಶುರಾಮ ಸೃಷ್ಟಿ ಮಾಡಿದ ಈ ಭೂಮಿಯಲ್ಲಿ ಇವತ್ತು ಪುತ್ತೂರಿನ ನೆಲೆಯನ್ನು ಇಡೀ ದೇಶದಾದ್ಯಂತ ಪಸರಿಸಲು ಕಾರಣಕರ್ತರಾದ ಚಂದ್ರಹಾಸ ಶೆಟ್ಟಿ ಅವರ ಸೇವೆ ನಿಜಕ್ಕೂ ಶ್ಲಾಘನೀಯವಾಗಿದೆ ಎಂದರು. ಎರಡು ದಿನಗಳ ಕಾಲ ನಡೆಯುವ ಇತಿಹಾಸ ಪ್ರಸಿದ್ಧವಾದ ಹಾಗೂ ಮಹತ್ವಪೂರ್ಣವಾದ ಪುತ್ತೂರಿನ ಕೋಟಿ ಚೆನ್ನಯ ಕಂಬಳವು ಯಾವುದೇ ವಿಘ್ನವಿಲ್ಲದೆ ಯಶಸ್ವಿಯಾಗಿ ನಡೆಯುವಂತಾಗಲಿ ಎಂದು ಅವರು ಹೇಳಿದರು.
ಪುತ್ತೂರಿನ ಕಂಬಳ ಏಕತೆ, ಒಗ್ಗಟ್ಟಿನ-ಆಂಟನಿ ಪ್ರಕಾಶ್ ಮೊಂತೆರೋ:
ಪುತ್ತೂರು ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಡಾ. ಆಂಟನಿ ಪ್ರಕಾಶ್ ಮೊಂತೆರೋರವರು ಮಾತನಾಡಿ ತುಳುನಾಡಿನ ಸಂಸ್ಕೃತಿಯ ಬದುಕಿನ ಅವಿಭಾಜ್ಯ ಅಂಗವಾಗಿ ಕಂಬಳವು ಬೆಳೆದು ಬಂದಿದೆ ಇದು ನಮ್ಮೆಲ್ಲರ ಏಕತೆಯ ಒಗ್ಗಟ್ಟಿನ ಸಂಕೇತವಾಗಿದೆ ಎಂದು ಹೇಳಿದರು. ಇಲ್ಲಿನ ಈ ಕಂಬಳವು ಕರಾವಳಿ ಜಿಲ್ಲೆಯ ಇತಿಹಾಸ ಪ್ರಸಿದ್ಧ ವಾದ ಕಂಬಳವಾಗಿದೆ. ಜಾತಿ ಮತ ಭಾಷೆಗಳನ್ನು ಮೀರಿ ಸೌಹಾರ್ದದಿಂದ ಎಲ್ಲರೂ ಆಚರಿಸಿಕೊಂಡು ಬರುವ ಈ ಕಂಬಳವು ನಿರಂತರವಾಗಿ ಮುಂದುವರೆಯಲಿ ಎಂದು ಹಾರೈಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರಿನ ಮಾಜಿ ಶಾಸಕರು, ಕೋಟಿ ಚೆನ್ನಯ ಕಂಬಳದ ಯಶಸ್ಸಿನ ರೂವಾರಿಗಳು ಆದ ಶಕುಂತಲಾ ಟಿ ಶೆಟ್ಟಿ ರವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸವಣೂರು ವಿದ್ಯಾರಶ್ಮಿ ಸಮೂಹ ವಿದ್ಯಾ ಸಂಸ್ಥೆಗಳ ಸಂಚಾಲಕ ‘ಸಹಕಾರ ರತ್ನ’ ಕೆ. ಸೀತಾರಾಮ ರೈ ಉಪಸ್ಥಿತರಿದ್ದು ಶುಭ ಹಾರೈಸಿದರು.
ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನ್ಯಾಕ್, ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮೊಕ್ತೇಸರ ಸಂತೋಷ ಕುಮಾರ್ ರೈ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ, ಕಡಬ ಒಕ್ಕಲಿಗ ಗೌಡ ಸೇವಾ ಸಂಘ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು, ಮಂಗಳೂರು ಪಿಡಬ್ಲ್ಯುಡಿ ಕಂಟ್ರಾಕ್ಟರ್ ಎನ್ ಕೆ.ಪ್ರಸಾದ್, ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪುತ್ತೂರು ಶೇಟ್ ಎಲೆಕ್ಟ್ರಾನಿಕ್ಸ್ ಮಾಲಕ ರೂಪೇಶ್ ಶೇಟ್, ವಾಮಂಜೂರು ಸಂಕುಪುಂಜ ದೇವುಪೂಂಜ, ಕಂಬಳ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಆಳ್ವ, ಕ್ವಾಲಿಟಿ ಫಾರ್ಮ್ಸ್ ಆಂಡ್ ಫೀಡ್ಸ್ ಮಾಲಕ ಗಂಗಾಧರ ಶೆಟ್ಟಿ ಮಠಂತಬೆಟ್ಟು, ಬಲ್ನಾಡು ದಂಡ ನಾಯಕ ಉಳ್ಳಾಲ್ತಿ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಮಾಧವ ಗೌಡ ಕಾಂತಿಲ, ಪುತ್ತೂರು ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮ್ಯಾನೇಜಿಂಗ್ ಟ್ರಸ್ಟಿ, ಅಶೋಕ್ ಪ್ರಭು, ಪುತ್ತೂರು ಅನ್ಸಾರುದ್ದೀನ್ ಜಮಾತ್ ಕಮಿಟಿಯ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ ದರ್ಬೆ, ಆಕರ್ಷಣ್ ಸಮೂಹ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಕೆ.ಪಿ. ಅಹಮದ್ ಹಾಜಿ ಆಕರ್ಷಣ್, ಮಣ್ಣಾಪು ಶ್ರೀ ಕೊರಗಜ್ಜ ಕ್ಷೇತ್ರದ ಗೌರವಾಧ್ಯಕ್ಷ ಎನ್. ರವೀಂದ್ರಶೆಟ್ಟಿ ನುಳಿಯಾಲು, ಪ್ರಗತಿಪರ ಕೃಷಿಕ ಮಾರಪ್ಪ ಶೆಟ್ಟಿ ಬೈಲುಗುತ್ತು ,ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಪುತ್ತೂರು ನಗರಸಭಾ ಪೌರಾಯುಕ್ತ ಮಧು ಎಸ್ .ಮನೋಹರ್, ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಡಾ ಧರ್ಮಪಾಲ ಗೌಡ, ಕೆಯ್ಯೂರು ದುರ್ಗಾಪರಮೇಶ್ವರಿ ಶ್ರೀ ಮಹಿಷಾಮರ್ದಿನಿ ದೇವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಚೆನ್ನಪ್ಪ ರೈ ದೇರ್ಲ, ಪುತ್ತೂರು ಸಚಿನ್ ಟ್ರೇಡಿಂಗ್ ಕಂಪನಿಯ ಮಾಲಕ ಮಂಜುನಾಥ ನಾಯಕ್, ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ರವಿ ಮುಂಗ್ಲಿ ಮನೆ, ಕಲ್ಲೇಗ ಶ್ರೀ ಕಲ್ಕುಡ ಕಲ್ಲುರ್ಟಿ ದೈವಸ್ಥಾನದ ಮಾಜಿ ಆಡಳಿತ ಮೊಕ್ತೇಸರ ಅಜಿತ್ ಕುಮಾರ್ ಜೈನ್, ಉಪ್ಪಿನಂಗಡಿ ಶ್ರೀ ರಾಘವೇಂದ್ರ ಮಠ ಮಾಜಿ ಮೊಕ್ತೇಸರ ಉದಯಕುಮಾರ್, ಪುತ್ತೂರು ಶ್ರೀ ನಾರಾಯಣ ಗುರು ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಪುತ್ತೂರು ಕುಂಬಾರರ ಗುಡಿ ಕೈಗಾರಿಕಾ ಸಹಕಾರಿ ಸಂಘದ ಅಧ್ಯಕ್ಷ ಭಾಸ್ಕರ ಪೆರುವಾಯಿ, ಉಪ್ಪಿನಂಗಡಿ ವಿಜಯ ವಿಕ್ರಮ ಕಂಬಳ ಸಮಿತಿಯ ಕೋಶಾಧಿಕಾರಿ ಸೀತಾರಾಮ ಶೆಟ್ಟಿ ಹೆಗಡೆಹಿತ್ಲು, ಉಪ್ಪಿನಂಗಡಿ ಶ್ರೀ ಲಕ್ಷೀ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಗಣೇಶ್ ಶೆಣೈ, ಉಪ್ಪಿನಂಗಡಿ ಶ್ರೀ ಹರಿ ಜುವೆಲ್ಲರ್ಸ್ನ ಗಣೇಶ್ ಭಟ್, ಪರ್ಪುಂಜ ಬ್ರಹ್ಮ ಬೈದರ್ಗಳ ಗರಡಿ ಆಡಳಿತ ಮೊಕ್ತೇಸರ ಸಂಜೀವ ಪೂಜಾರಿ ಕೂರೇಲು, ಪೆರುವಾಯಿ ಶ್ರೀ ಜಲದುರ್ಗಾ ದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಹಾಲಿಂಗ ನಾೖಕ್ ಪಾಲ್ತಾಡು, ಪಡುಮಲೆ ಗೆಜ್ಜೆಗಿರಿ ನಂದನ ಬಿತ್ತಿಲ್ ಆಡಳಿತ ಸಮಿತಿ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಪುತ್ತೂರು ಮರಾಟಿ ಸಂಘದ ಅಧ್ಯಕ್ಷ ದುಗ್ಗಪ್ಪ ನಾಯ್ಕ ಬಡಾವು ಕೃಷ್ಣನಗರ ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು.
ಸ್ವಾಗತಿಸಿದ ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿರವರು ಮಾತನಾಡಿ ಪುತ್ತೂರಿನಲ್ಲಿ ಹಿಂದೆ ನಿಂತು ಹೋಗಿದ್ದ ಜಾನಪದ ಕ್ರೀಡೆಗಳಲ್ಲೊಂದಾದ ಇತಿಹಾಸ ಪ್ರಸಿದ್ಧ ಕೋಟಿ ಚೆನ್ನಯ ಕಂಬಳವನ್ನು ದಿ. ಜಯಂತ್ ರೈ ಆ ಬಳಿಕ ಮುತ್ತಪ್ಪ ರೈ ರವರ ಸಾರಥ್ಯದಲ್ಲಿ ನಡೆಸಿಕೊಂಡು ಬರಲಾಗುತ್ತಿತ್ತು. ಬಳಿಕ ಎಲ್ಲರ ಸಹಕಾರದಿಂದ ವರ್ಷಂಪ್ರತಿ ಬಹಳ ವಿಜ್ರಂಭಣೆಯಿಂದ ನಡೆಯುತ್ತಾ ಬರುತ್ತಿದೆ ಇಲ್ಲಿನ ಕಂಬಳವು ಪುತ್ತೂರಿನ ಎರಡನೇ ಜಾತ್ರೆ ಎಂದೇ ಪರಿಗಣಿಸಲ್ಪಟ್ಟಿದೆ ಎಂದು ಹೇಳಿ ಪುತ್ತೂರಿನ ಕೋಟಿ-ಚೆನ್ನಯ ಕಂಬಳ ಯಶಸ್ಸಿಗೆ ಹಗಲು ರಾತ್ರಿ ದುಡಿಯುತ್ತಿರುವ ಎಲ್ಲರಿಗೂ ಕೃತಜ್ಞತೆಯನ್ನು ಸಲ್ಲಿಸುವುದಾಗಿ ತಿಳಿಸಿದರು. ಪುತ್ತೂರು ಕೋಟಿ ಚೆನ್ನಯ ಕಂಬಳ ಸಮಿತಿಯ ಉಪಾಧ್ಯಕ್ಷ ಶಿವರಾಮ ಆಳ್ವ ಕುರಿಯ ವಂದಿಸಿದರು. ಕೋಟಿ ಚೆನ್ನಯ ಕಂಬಳ ಸಮಿತಿಯ ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ವಸಂತ ಕುಮಾರ್ ರೈ, ಪ್ರಧಾನ ಕಾರ್ಯದರ್ಶಿಗಳಾದ ದಿನೇಶ್ ಕುಲಾಲ್ ಪಿ.ವಿ., ಅಭಿಜಿತ್ ಶೆಟ್ಟಿ ನೆಲ್ಲಿಕಟ್ಟೆ, ಉಪಾಧ್ಯಕ್ಷ ರೋಶನ್ ರೈ ಬನ್ನೂರು, ಕೃಷ್ಣ ಪ್ರಸಾದ ಆಳ್ವ, ರಂಜಿತ್ ಬಂಗೇರ, ವಿನಯ ಕುಮಾರ್ ಸವಣೂರು ಮೊದಲಾದವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಕಂಬಳದಲ್ಲಿ ಕೆಲಸ ಮಾಡಿದವರೆಲ್ಲರಿಗೆ ಉನ್ನತ ಸ್ಥಾನಮಾನ
ಒಳ್ಳೆಯ ಕೆಲಸ ಮಾಡಿದರೆ ಸಮಾಜದಲ್ಲಿ ಉನ್ನತ ಸ್ಥಾನ ಸಿಗುತ್ತದೆ ಎಂಬ ಮಾತು ಕೇಳಿದ್ದೆ. ಇವತ್ತು ನಾನು ಅದನ್ನು ಕಣ್ಣಾರೆ ಕಂಡಿದ್ದೇನೆ. ಸುಮಾರು ೨೦ ವರ್ಷಗಳ ಹಿಂದೆ ದಿ. ಎನ್ ಸುಧಾಕರ್ ಶೆಟ್ಟಿಯವರು ಕಿಲ್ಲೆ ಮೈದಾನದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ನನ್ನನ್ನು ಜೊತೆಯಾಗಿ ಕರೆಸಿಕೊಂಡಿದ್ದರು. ಅಲ್ಲಿ ಸೇವಾ ರೂಪದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಅವರು ಕಂಬಳಕ್ಕೂ ನನ್ನನ್ನು ಮೊಟ್ಟ ಮೊದಲು ಕರೆಸಿಕೊಂಡರು. ಆಗ ಕಂಬಳದ ಲಕ್ಕಿಡಿಪ್ ಟಿಕೆಟ್ ಹೆಚ್ಚು ಮಾರಿದವರಿಗೆ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದರು. ನಾನು ಆ ಬಹುಮಾನವನ್ನೂ ಪಡೆದಿದ್ದೆ. ಬಳಿಕ ನಾನು ಸಕ್ರಿಯವಾಗಿ ತೊಡಗಿಸಿಕೊಂಡೆ. ಚಂದ್ರಹಾಸ ಶೆಟ್ಟಿಯವರು ನನ್ನನ್ನು ಕೋಶಾಧಿಕಾರಿಯನ್ನಾಗಿ ಮಾಡಿದರು. ಇವತ್ತು ಕಂಬಳದ ಪ್ರಸಾದದಿಂದಾಗಿ ಪುತ್ತೂರು ಮಹಾಲಿಂಗೇಶ್ವರ ದೇವರ ಪ್ರಸಾದವೂ ಸಿಕ್ಕಿದೆ. ಅದೇ ರೀತಿ ರೈತರ ಗ್ರಾಮೀಣ ಕ್ರೀಡೆಯಾದ ಕಂಬಳದಲ್ಲಿ ತೊಡಗಿಸಿಕೊಂಡ ನಮ್ಮವರೇ ಆಗಿರುವ ನಿರಂಜನ್ ರೈ ಮಠಂತಬೆಟ್ಟು, ಕೃಷ್ಣಪ್ರಸಾದ್ ಆಳ್ವ ಸಹಿತ ಹಲವಾರು ಮಂದಿ ಉತ್ತಮ ಸ್ಥಾನಮಾನದಲ್ಲಿದ್ದಾರೆ. ಅದೇ ರೀತಿ ಕಂಬಳದ ವಿರುದ್ಧ ಹೋದವರು ಸಮಾಜದಿಂದ ಹೊರ ಹೋದದ್ದನ್ನು ಕೂಡಾ ನಾವು ಕಂಡಿದ್ದೇವೆ. ಅದೆ ರೀತಿ ಇಷ್ಟರ ತನಕ ಬಾರದ ಸಂಸದರೂ ನಮ್ಮ ಕಂಬಳಕ್ಕೆ ಬಂದಿದ್ದಾರೆ ಎಂದು ಈಶ್ವರ ಭಟ್ ಪಂಜಿಗುಡ್ಡೆಯವರು ಹೇಳಿದರು.
ಪುತ್ತೂರಿನಲ್ಲಿ ಕಂಬಳ ಬಂಗಾರ ಅರಸು ಕಾಲದಲ್ಲೇ ನಡೆಯುತ್ತಿತ್ತೆಂಬ ವಿಚಾರ ಪ್ರಶ್ನಾಚಿಂತನೆಯಲ್ಲಿ ತಿಳಿದುಬಂದಿದೆ. ದೇವಳದ ವತಿಯಿಂದ ನಡೆಯುವ ಪೂಕರೆ ಉತ್ಸವ ಕಂಬಳದ ಗದ್ದೆಯಲ್ಲೇ ನಡೆಯುತ್ತದೆ. ಕಾಲ ಕ್ರಮೇಣ ನಿಂತು ಹೋದ ಕಂಬಳವನ್ನು ಜಯಂತ ರೈ ಅವರು ಆರಂಭಿಸಿದರು. ಮುತ್ತಪ್ಪ ರೈ ಅವರು ಅದನ್ನು ವಿಜೃಂಭಣೆಯಿಂದ ಮಾಡಿದರು. ಅವರು ನಿಧನರಾದ ಬಳಿಕ ಕಂಬಳ ಇನ್ನು ನಿಲ್ಲುತ್ತದೆಯೋ ಎಂಬಂತೆ ವ್ಯಂಗ್ಯವಾಗಿ ಮಾತನಾಡಿದವರಿದ್ದಾರೆ. ಆಗ ರಾಧಾಕೃಷ್ಣ ಅವರಲ್ಲಿ ಕಂಬಳ ಕುರಿತು ಚರ್ಚಿಸಿ, ಕಂಬಳದ ನೇತೃತ್ವ ವಹಿಸುವಂತೆ ಚಂದ್ರಹಾಸ ಶೆಟ್ಟಿ ಅವರನ್ನು ವಿನಂತಿಸಿದ್ದೆವು. ಅದರಂತೆ ಚಂದ್ರಹಾಸ ಶೆಟ್ಟಿ ಅವರ ಸಾರಥ್ಯದಲ್ಲಿ ಕಂಬಳ ಮುಂದುವರಿಸುವುದು ಎಂದು ನಿರ್ಣಯಿಸಿ ಇವತ್ತು ಅವರ ಅಧ್ಯಕ್ಷತೆಯಲ್ಲಿ ಕಂಬಳ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಹೇಳಿದ ಈಶ್ವರ ಭಟ್ ಪಂಜಿಗುಡ್ಡೆಯವರು ಪುತ್ತೂರಿಗೆ ಹಲವು ಪ್ರಥಮಗಳನ್ನು ತಂದ ಚಂದ್ರಹಾಸ ಶೆಟ್ಟಿ ಯವರು ಪುತ್ತೂರಿನಲ್ಲಿ ಪ್ರಥಮ ಬಾರಿಗೆ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ, ಹುಲಿ ಕುಣಿತದ ಸ್ಪರ್ಧೆ, ಇವತ್ತು ಕೆಸರು ಗದ್ದೆ ಓಟವನ್ನೂ ಇತಿಹಾಸದಲ್ಲೇ ಪ್ರಥಮವಾಗಿ ನಡೆಸಿ ತೋರಿಸಿಕೊಟ್ಟಿದ್ದಾರೆ ಎಂದರು.
ಸಂಸದ ಕ್ಯಾ| ಬ್ರಿಜೇಶ್ ಚೌಟ ಕಂಬಳಕ್ಕೆ ಭೇಟಿ
ದ.ಕ.ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಬೆಳಗ್ಗೆ ಕೋಟಿ ಚೆನ್ನಯ ಜೊಡುಕರೆ ಕಂಬಳಕ್ಕೆ ಆಗಮಿಸಿದರು. ಬೆಳಗ್ಗೆ ಕಂಬಳ ಸಮಿತಿಯಿಂದ ಮೂಲ ನಾಗನ ಸನ್ನಿಧಿಯಲ್ಲಿ ಪ್ರಾರ್ಥನೆ ಮಾಡುವ ಸಂದರ್ಭ ಆಗಮಿಸಿದ ಸಂಸದರು ಕಂಬಳಕ್ಕೆ ಶುಭ ಹಾರೈಸಿ ಅನ್ಯ ಕಾರ್ಯಕ್ರಮದ ನಿಮಿತ್ತ ತೆರಳಿದರು. ಈ ಸಂದರ್ಭ ಕಂಬಳ ಸಮಿತಿಯಿಂದ ಅವರನ್ನು ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿಯವರು ಶಲ್ಯ ತೊಡಿಸಿ ಗೌರವಿಸಿದರು. ಈ ಸಂದರ್ಭ ಬಿಜೆಪಿ ನಗರ ಮಂಡಲದ ಅಧ್ಯಕ್ಷ ಶಿವಪ್ರಸಾದ್, ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮತ್ತು ಕಂಬಳ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇಲ್ಲಿನ ತನಕ ಸಂಸದರು ಕಂಬಳಕ್ಕೆ ಆಗಮಿಸಿರಲಿಲ್ಲ. ಈ ಬಾರಿ ಸಂಸದ ಕ್ಯಾ| ಬ್ರಿಜೇಶ್ ಚೌಟ ಅವರು ಕೂಡಾ ನಮ್ಮ ಕಂಬಳಕ್ಕೆ ಪ್ರಥಮ ಬಾರಿಗೆ ಆಗಮಿಸಿದ್ದಾರೆ ಎಂದು ಕಂಬಳ ಸಮಿತಿ ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆಯವರು ತಿಳಿಸಿದರು.